ಧರಣಿಯಲ್ಲಿ ಬೆಳಿಗ್ಗೆಯಿಂದ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಭಾಗವಹಿಸಿದ್ದರು. ಹಾಗೆಯೇ ಮಧ್ಯಾಹ್ನದ ಸಂದರ್ಭಕ್ಕೆ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೌಡ ಅವರು ಭಾಗವಹಿಸಿ ಧರಣಿಗೆ ಮತ್ತಷ್ಟು ಬಲ ತುಂಬಿದರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.07): ಕೊಡಗು ವಿಶ್ವ ವಿದ್ಯಾಲಯವನ್ನು ಉಳಿಸಿಕೊಳ್ಳುವುದು, ಎಸ್ಸಿ ಮತ್ತು ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡಿರುವುದನ್ನು ವಿರೋಧಿಸಿ ಹಾಗೂ ಸಿ ಮತ್ತು ಡಿ ದರ್ಜೆ ಭೂಮಿಯನ್ನು ರೈತರಿಗೆ ದಾಖಲೆ ಮಾಡಿಕೊಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಮಡಿಕೇರಿಯಲ್ಲಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಯಿತು. ಎರಡನೇ ದಿನವಾದ ಶುಕ್ರವಾರ ನಡೆದ ಧರಣಿಯಲ್ಲಿ ಬೆಳಿಗ್ಗೆಯಿಂದ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಭಾಗವಹಿಸಿದ್ದರು. ಹಾಗೆಯೇ ಮಧ್ಯಾಹ್ನದ ಸಂದರ್ಭಕ್ಕೆ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೌಡ ಅವರು ಭಾಗವಹಿಸಿ ಧರಣಿಗೆ ಮತ್ತಷ್ಟು ಬಲ ತುಂಬಿದರು.
ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಬಿಜೆಪಿ ಜಿಲ್ಲಾ ಮಂಡಳ ಸೇರಿದಂತೆ ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೌಡ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರ ಶಿಕ್ಷಣ ವಿರೋಧಿ ಇನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಬಜೆಟ್ ಬಗ್ಗೆ ಮಾತನಾಡಿದ ಅವರು 1.16 ಲಕ್ಷ ಕೋಟಿ ಸಾಲ ಮಾಡುವ ಮೂಲಕ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಸಾಲದ ಭಾಗ್ಯ ನೀಡಿದ್ದಾರೆ. ಇದೊಂದು ಸಾಲದ ಬಜೆಟ್ ಎಂದು ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೌಡ ಅವರು ವ್ಯಂಗ್ಯವಾಡಿದರು.
ಇದೊಂದು ರಿಪ್ಯಾಕಿಂಗ್ ಬಜೆಟ್, ರಾಜ್ಯದ ಜನತೆಗೆ ಸಾಲದ ಭಾಗ್ಯ ಹೊರಿಸಿದ್ದಾರೆ. ಈ ಬಾರಿ 4.9 ಲಕ್ಷ ಕೋಟಿ ಬಜೆಟ್ ಎನ್ನುತ್ತಾರೆ. ಆದರೆ ಕಳೆದ ಬಾರಿ 3.70 ಲಕ್ಷ ಕೋಟಿ ಬಜೆಟ್ ಇತ್ತು. ಈ ಬಾರಿ ಅದನ್ನು ಇನ್ನೂ ಇಳಿಸಿದ್ದಾರೆ. ಈ ಬಾರಿ ಆದಾಯ ಕೊರತೆ ಬಜೆಟ್ ಮಂಡಿಸಿದ್ದು, ಇತಿಹಾಸದಲ್ಲಿ ಯಾರಾದ್ರು ಕೊರೆತೆ ಬಜೆಟ್ ಮಂಡಿಸಿದ್ದಾರೆ ಎಂದರೆ ಅದು ಸಿದ್ದರಾಮಯ್ಯನವರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ 3.65 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಆದರೆ ಹೇಳುತ್ತಿರುವುದು ಮಾತ್ರ 4.9 ಲಕ್ಷ ಕೋಟಿ ಎಂದು. ಇದೆಲ್ಲಾ ಬರೀ ಡೋಂಘಿ ಬಜೆಟ್ ಎಂದು ಅಶ್ವತ್ಥ್ ನಾರಾಯಣಗೌಡ ವ್ಯಂಗ್ಯವಾಡಿದ್ದಾರೆ. ಇದೊಂದು ರೈತ ವಿರೋಧಿ ಸರ್ಕಾರ, ಇವರಿಂದ ಯಾವುದೇ ಅಭಿವೃದ್ಧಿ ಇಲ್ಲ. ಬಡವರ ವಿರೋಧಿ ಸರ್ಕಾರ.
ಕೊಡಗು ವಿಶ್ವವಿದ್ಯಾಲಯ ಉಳಿಸಿ: ಸಿ ಅಂಡ್ ಡಿ ಲ್ಯಾಂಡ್ ಭೂಮಿಯನ್ನು ರೈತರಿಗೆ ದಾಖಲೆ ಮಾಡಿಕೊಡಿ
ಇದೊಂದು ಅಲ್ಪಸಂಖ್ಯಾತರ ತುಷ್ಟೀಕರಣದ ಬಜೆಟ್. ಅದು ಬಿಟ್ಟರೆ ಈ ಬಜೆಟ್ ಯಾರಿಗೂ ಅನುಕೂಲಕರವಾಗಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವುದಕ್ಕೂ ಮುನ್ನ ಸಾಹಿತ್ಯ ಓದುತ್ತಾರೆ. ಹಿಂದಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಕೈಲಾಗದು ಎಂದು ಕೈಕಟ್ಟಿಕುಳಿತರೆ ಸಾಗದು ಕೆಲಸವು ಮುಂದೆ ಎಂದು ಹೇಳಿದ್ದರು. ಆದರೆ ಕೇವಲ ಹೇಳುತ್ತಾರೆ ಅಷ್ಟೇ ಅವರ ಕೈಯಿಂದ ಯಾವುದೂ ಆಗುವುದಿಲ್ಲ. ಶಿಕ್ಷಣದ ಮಹತ್ವ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಶಿಕ್ಷಣದ ವಿರೋಧಿ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಒಟ್ಟಿನಲ್ಲಿ ಎರಡು ದಿನಗಳ ಕಾಲ ಮಡಿಕೇರಿಯಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ರಾಜ್ಯದ ವಿವಿಧ ಮುಖಂಡರು ಭಾಗವಹಿಸಿ ಬಿಜೆಪಿ ಪ್ರತಿಭಟನೆಗೆ ಬಲ ತುಂಬಿದರು.
