ದಿವಾಳಿ, ಭ್ರಷ್ಟಾಚಾರ, ಟಿಪ್ಪು ಜಯಂತಿ ಕರ್ನಾಟಕಕ್ಕೆ ಸಿದ್ದು ಕೊಟ್ಟ ಉಡುಗೊರೆ: ತೇಜಸ್ವಿ ಸೂರ್ಯ
ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಯಾವುದೇ ಜವಾಬ್ದಾರಿ ಇಲ್ಲದೆ ಬಿಟ್ಟಿ ಭಾಗ್ಯಗಳನ್ನು ಘೋಷಿಸಿದ್ದು, ಬಿಟ್ಟಿ ಭಾಗ್ಯಕ್ಕೆ ಎಲ್ಲಿಂದ ಹಣ ತರುತ್ತೀರಾ ಎಂದರೆ ಕಾಂಗ್ರೆಸ್ ನಾಯಕರ ಬಳಿ ಉತ್ತರವಿಲ್ಲ.
ನವದೆಹಲಿ (ಫೆ.09): ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಯಾವುದೇ ಜವಾಬ್ದಾರಿ ಇಲ್ಲದೆ ಬಿಟ್ಟಿ ಭಾಗ್ಯಗಳನ್ನು ಘೋಷಿಸಿದ್ದು, ಬಿಟ್ಟಿ ಭಾಗ್ಯಕ್ಕೆ ಎಲ್ಲಿಂದ ಹಣ ತರುತ್ತೀರಾ ಎಂದರೆ ಕಾಂಗ್ರೆಸ್ ನಾಯಕರ ಬಳಿ ಉತ್ತರವಿಲ್ಲ. ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ 2004-14 ರ ನಡುವೆ ರಾಜ್ಯಕ್ಕೆ 81,795 ಕೋಟಿ ರೂ. ಅನುದಾನ ಬಂದಿತ್ತು. ಆದರೆ, ಎನ್‌ಡಿಎ ಅವಧಿಯಲ್ಲಿ 2,85,000 ಕೋಟಿ ಬಂದಿದೆ. ಕಳೆದ 70 ವರ್ಷಗಳಲ್ಲಿ ಕೇಂದ್ರದಿಂದ ಎಷ್ಟು ಹಣ ರಾಜ್ಯಕ್ಕೆ ಬಂದಿದೆಯೊ ಅಷ್ಟು ಹಣ ಕೇವಲ ಕಳೆದ 10 ವರ್ಷದಲ್ಲಿ ಬಂದಿದೆ. ಆರ್ಟಿಕಲ್ 281ರ ಅಡಿಯಲ್ಲಿ ರಾಜ್ಯಕ್ಕೆ ಅನ್ಯಾಯವಾದ್ರೆ ಸುಪ್ರಿಂಕೋರ್ಟ್ ಗೆ ಹೋಗಬೇಕು. ಅದನ್ನು ಬಿಟ್ಟು ಜಂತರ್ ಮಂತರ್ ಗೆ ಬಂದು ನಾಟಕ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯ ಸಂಪೂರ್ಣ ಮರೆತಿದೆ: ಬಿ.ಎಸ್.ಯಡಿಯೂರಪ್ಪ
ಹತ್ತು ಕೆಜಿ ಅಕ್ಕಿ ಬಗ್ಗೆ ಹೇಳಿದ್ರು, ಕೊಡೊದಕ್ಕೆ ಆಗಲ್ಲ ಎಂದು ಗೊತ್ತಾದ ತಕ್ಷಣ ಕೇಂದ್ರದ ಮೇಲೆ ಸುಳ್ಳು ಆರೋಪ ಶುರು ಮಾಡಿದರು. ಈ ವರ್ಷ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅವರೇ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ಕರ್ನಾಟಕಕ್ಕೆ ಕೊಟ್ಟ ಉಡುಗೊರೆ ಎಂದರೆ ದಿವಾಳಿ, ಭ್ರಷ್ಟಾಚಾರ, ಟಿಪ್ಪು ಜಯಂತಿ ಅಷ್ಟೆ ಎಂದು ವ್ಯಂಗ್ಯವಾಡಿದರು. ಕರ್ನಾಟಕದ ಅನುದಾನವನ್ನು ಒಂದು ಪ್ರತಿಶತ ಕಡಿಮೆ ಮಾಡಲಾಗಿದೆ ಎಂದಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ, ಎಲ್ಲಾ ರಾಜ್ಯಗಳಿಗೂ ಕಡಿಮೆ ಮಾಡಲಾಗಿದೆ. ಇದಕ್ಕೆ ಕಾರಣ ಜಮ್ಮು-ಕಾಶ್ಮೀರ, ಲಡಾಕ್ ಗೆ 370 ಕಾಯ್ದೆ ತೆಗೆದ ಹಿನ್ನೆಲೆಯಲ್ಲಿ ಅಭಿವೃದ್ದಿಗೆ ಈ ಹಣ ಬಳಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.