ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಶುಕ್ರವಾರ ಮಂಡ್ಯದಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತಂತೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ಆಗಮಿಸಲಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.
ಮಂಡ್ಯ (ಮಾ.09): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಶುಕ್ರವಾರ ಮಂಡ್ಯದಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತಂತೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ಆಗಮಿಸಲಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಯಾವ ಪಕ್ಷ ಸೇರಬೇಕೆಂಬ ವಿಚಾರವಾಗಿ ಸ್ಪಷ್ಟನಿಲುವು ಪ್ರಕಟಿಸುವುದರ ಜೊತೆಗೆ, ರಾಜ್ಯ ರಾಜಕಾರಣ ಪ್ರವೇಶಿಸುವರೇ, ಇಲ್ಲವೇ ಎನ್ನುವುದನ್ನೂ ಬಹಿರಂಗಪಡಿಸಲಿದ್ದಾರೆ ಎನ್ನಲಾಗಿದೆ.
ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯಾಹ್ನ 12 ಗಂಟೆಗೆ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿರುವ ಅವರು, ಯಾವ ಪಕ್ಷ ಸೇರಲಿದ್ದಾರೆ ಎನ್ನುವುದನ್ನು ಶುಕ್ರವಾರ ಖಚಿತಪಡಿಸುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಪಾದಯಾತ್ರೆಯ ಮ್ಯಾಜಿಕ್ ನಡೆದಿಲ್ಲ: ಸಚಿವ ಗೋವಿಂದ ಕಾರಜೋಳ
2019ರ ಲೋಕಸಭಾ ಚುನಾವಣೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸಿದ್ದರು. ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ಅವರು ತಟಸ್ಥ ಧೋರಣೆ ಅನುಸರಿಸಿದ್ದರು. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಸುಮಲತಾ ಅವರು ಬಿಜೆಪಿ ಸೇರುವುದಕ್ಕೆ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಪ್ರಧಾನಿ ಮೋದಿ ಭೇಟಿಗೂ ಮುನ್ನವೇ ತಾವು ಬಿಜೆಪಿ ಸೇರುವುದನ್ನು ಖಚಿತಪಡಿಸಲಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿದೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ನಡೆಸಿದ ಪೂರ್ವ ಸಿದ್ಧತಾ ಸಭೆಯಲ್ಲೂ ಅವರು ಪಾಲ್ಗೊಂಡಿದ್ದು, ಕೇಸರಿ ಶಾಲು ಹಿಡಿದಿದ್ದರು. ಸಭೆ ಬಳಿಕ ಮಾತನಾಡಿ, ಮಾ.12ರ ಮೋದಿ ರೋಡ್ ಶೋ, ಇಡೀ ದೇಶವೇ ತಿರುಗಿ ನೋಡುವಂತೆ ನಡೆಯಲಿದೆ ಎಂದಿದ್ದರು. ಬಿಜೆಪಿ ಸೇರ್ಪಡೆ, ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದರು. ಅದೆಲ್ಲದಕ್ಕೂ ಶುಕ್ರವಾರ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.
ಶಶಿಕಲಾ ಜೊಲ್ಲೆ ನಿಪ್ಪಾಣಿಯ ಬಿಜೆಪಿ ಅಭ್ಯರ್ಥಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ
ಸುಮಲತಾ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದೆ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ವಿಜಯಪುರ ಜಿಲ್ಲೆಯ ಚಿಕ್ಕಗಲಗಲಿಗೆ ಗುರುವಾರ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಅಂಬರೀಶ್ ಅವರ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ನಡೆದಿದೆ. ಈ ಕುರಿತು ಮಾತುಕತೆ ನಡೆದಿದ್ದು, ಪಕ್ಷ ಸೇರುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದರು.