ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಕಾಂಗ್ರೆಸ್‌ನವರು ಹೊಡೆದಾಡಿಕೊಂಡಿದ್ದರು. ಈಗ ಚಾಕು, ಚೂರಿ ಸಂಸ್ಕೃತಿ ಬಂದಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದರು.
ಹೊಸಪೇಟೆ (ಡಿ.03): ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಕಾಂಗ್ರೆಸ್‌ನವರು ಹೊಡೆದಾಡಿಕೊಂಡಿದ್ದರು. ಈಗ ಚಾಕು, ಚೂರಿ ಸಂಸ್ಕೃತಿ ಬಂದಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರ ಬ್ರೇಕ್ ಫಾಸ್ಟ್ ಮೀಟಿಂಗ್ ಇದು, ತಾತ್ಕಾಲಿಕ ಅಷ್ಟೇ. ಸಂಬಂಧಗಳು ಈಗ ಬ್ರೇಕ್ ಆಗಿದೆ. ಒಡೆದು ಹೋದ ಮಡಿಕೆಗಳು ಮತ್ತೆ ಕೂಡಲಿಕ್ಕೆ ಸಾಧ್ಯವೇ ಇಲ್ಲ? ಯಾರು ಮುಖ್ಯಮಂತ್ರಿ ಆಗ್ತಾರೆ, ಬಿಡ್ತಾರೆ ಅದು ಅವರ ಆಂತರಿಕ ವಿಚಾರವಾಗಿದೆ. ಇವರ ಬೀದಿ ನಾಟಕ ನೋಡಿ ಜನ ಬೇಸತ್ತು ಹೋಗಿದ್ದಾರೆ ಎಂದರು.
ನವೆಂಬರ್ ಕ್ರಾಂತಿ ಮಾಧ್ಯಮಗಳ ಸೃಷ್ಟಿ. ವಿರೋಧ ಪಕ್ಷದವರ ಸೃಷ್ಟಿ ಎಂದು ಹೇಳಿಕೆ ಕೊಡುತ್ತಿದ್ದಾರೆ. ದಿಲ್ಲಿಗೆ ಶಾಸಕರನ್ನು ಯಾರು ಕಳಿಸಿದ್ದು? ನಾವು ಬಿಜೆಪಿ ಅವ್ರು ಕಳಿಸಿದ್ವಾ? ಶಾಸಕರಿಗೆ ಪಂಚತಾರಾ ಹೊಟೇಲ್ ಬುಕ್ ನಾವು ಮಾಡಿದ್ವಾ? ಕಾಂಗ್ರೆಸ್ ನಲ್ಲಿ ಐದಾರು ಗುಂಪುಗಳಾಗಿವೆ. ಡಾ.ಜಿ.ಪರಮೇಶ್ವರ, ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಬಣ ಸೇರಿದಂತೆ ಮುಖ್ಯಮಂತ್ರಿ ಆಗ್ಬೇಕು ಅಂತಾ ಕಚ್ಚಾಟ ನಡೆಸ್ತಿದ್ದಾರೆ. ಇದು ಬೂದಿ ಮುಚ್ಚಿದ ಕೆಂಡ. ಯಾವಾಗ್ಲಾದ್ರೂ ಸ್ಫೋಟ ಆಗಲಿದೆ. ನೀವು ಏನು ಬೇಕಾದ್ರು ಮಾಡಿಕೊಳ್ಳಿ, ರಾಜ್ಯದ ರೈತರ ಹಾಗೂ ಜನರ ನೆರವಿಗೆ ಧಾವಿಸಬೇಕು ಎಂದರು.
ಬಿಜೆಪಿ ಬೃಹತ್ ಪ್ರತಿಭಟನೆ
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪಾದಗಟ್ಟೆ ಆಂಜನೇಯ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರೆ, ಸರ್ಕಾರ ವಿಧಾನಸೌಧದಲ್ಲಿ ಶಾಸಕರ ಖರೀದಿ ಕೇಂದ್ರ ಪ್ರಾರಂಭಿಸಿದೆ.
ರೈತರ ಹಾಗೂ ರಾಜ್ಯದ ಜನರ ಸಮಸ್ಯೆಗೆ ಈ ಸರ್ಕಾರ ಕಿವಿಗೊಡುತ್ತಿಲ್ಲ. ರೈತ ವಿರೋಧಿ ಸರ್ಕಾರ ಕ್ರಮ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಡಿ.8ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬ್ರೇಕ್‌ಫಾಸ್ಟ್, ನಾಟಿಕೋಳಿ ಸಾರು, ಮುದ್ದೆ ಅಂತ ಮೆನು ಅನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡ್ತಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗಬೇಕು. ರೈತರ ಹಾಗೂ ಜನರ ಸಮಸ್ಯೆ ಬಗೆಹರಿಸದೇ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


