ನಾಯಕರಿಗೆ ಅಸಮಾಧಾನ ಇದ್ದರೆ ವರಿಷ್ಠರ ಮುಂದೆ ಹೇಳಲಿ: ಡಿ.ಕೆ.ಸುರೇಶ್
* ಬಿಜೆಪಿ ಪಕ್ಷದ ಭಾವನೆ, ಚಿಂತನೆಗಳು ಐಸಿಯುವಿನಲ್ಲಿದೆ
* ಯಾರು ಐಸಿಯುನಲ್ಲಿದ್ದಾರೆ ಎಂದು ಮತದಾರ ನಿರ್ಧರಿಸುತ್ತಾನೆ
* ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಮುಜುಗರ
ಬೇಲೂರು(ಜು.04): ಪಕ್ಷದ ಕೆಲ ಹಿರಿಯ ಮುಖಂಡರು ಮಾಧ್ಯಮದ ಮುಂದೆ ನೀಡುತ್ತಿರುವ ಕೆಲ ಗೊಂದಲದ ಹೇಳಿಕೆಗಳಿಂದ ಕಾಂಗ್ರೆಸ್‌ಗೆ ಮುಜುಗರ ಉಂಟಾಗುತ್ತಿದೆ. ಅಸಮಾಧಾನ ಇದ್ದರೆ ರಾಷ್ಟ್ರೀಯ ನಾಯಕರ ಮುಂದೆ ಹೇಳಿಕೊಳ್ಳಲಿ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ ಮುನಿಯಪ್ಪ, ಲಕ್ಷ್ಮೀನಾರಾಯಣ್‌ರಂಥ ಹಿರಿಯರಿಗೆ ಪಕ್ಷ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತೊಂದರೆಗಳು ಇದ್ದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಅದು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ ತಿಳಿಸಿದರು.
ದೇವೇಗೌಡ್ರ ಬಗ್ಗೆ ರಾಜಣ್ಣ ವಿವಾದಾತ್ಮಕ ಹೇಳಿಕೆ ಖಂಡಿಸಿದ ಡಿಕೆ ಬ್ರದರ್ಸ್..!
ಇದೇ ವೇಳೆ ಕಾಂಗ್ರೆಸ್ ಪಕ್ಷ ಐಸಿಯುನಲ್ಲಿದೆ ಎಂಬ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದ ಭಾವನೆ, ಚಿಂತನೆಗಳು ಐಸಿಯುವಿನಲ್ಲಿದೆ. ಈಗಾಗಲೇ ಪಕ್ಷ ಅಂತಿಮ ಹಂತಕ್ಕೆ ಬಂದು ನಿಂತಿದೆ. ಯಾರು ಐಸಿಯುನಲ್ಲಿದ್ದಾರೆ ಎಂದು ಮತದಾರ ನಿರ್ಧರಿಸುತ್ತಾನೆ ಎಂದರು.