ಭಾರತ್‌ಜೋಡೋ ಯಾತ್ರೆ ಬರುವ 30 ರಂದು ಗುಂಡ್ಲುಪೇಟೆಗೆ ಆಗಮಿಸುವ ಹಿನ್ನೆಲೆ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ಡಿ.ಕೆ.ಸುರೇಶ್‌ ಗುಂಡ್ಲುಪೇಟೆಗೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. 

ಗುಂಡ್ಲುಪೇಟೆ (ಸೆ.17): ಭಾರತ್‌ಜೋಡೋ ಯಾತ್ರೆ ಬರುವ 30 ರಂದು ಗುಂಡ್ಲುಪೇಟೆಗೆ ಆಗಮಿಸುವ ಹಿನ್ನೆಲೆ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ಡಿ.ಕೆ.ಸುರೇಶ್‌ ಗುಂಡ್ಲುಪೇಟೆಗೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಂಬೇಡ್ಕರ್‌ ಭವನದ ಮುಂದಿನ ಜಾಗ ಪರಿಶೀಲನೆ ನಡೆಸಿ ಭಾರತ್‌ಜೋಡೋ ಯಾತ್ರೆ ವ್ಯವಸ್ಥಿತವಾಗಿ ಆಯೋಜಿಸುವ ಸಂಬಂಧ ಸ್ಥಳದಲ್ಲಿದ್ದ ಮುಖಂಡರೊಂದಿಗೆ ಚರ್ಚಿಸಿದರು. ಯಾತ್ರೆ ರಾಜ್ಯ ಪ್ರವೇಶಿಸುವ ಹಿನ್ನೆಲೆ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಹಾಗೂ ಯಾತ್ರಿಗಳಿಗೆ ಸ್ವಾಗತಕೋರಲು ಗುಂಡ್ಲುಪೇಟೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲಾ ನಾಯಕರು ಆಗಮಿಸುವ ಕಾರಣ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು. 

ರಾಹುಲ್‌ಗಾಂಧಿ ತಾಲೂಕಿಗೆ ಆಗಮಿಸಿದ ದಿನ ವಿಭಿನ್ನ ರೀತಿಯಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ಮುಖಂಡ ಎಚ್‌.ಎಂ.ಗಣೇಶಪ್ರಸಾದ್‌ ಹಾಗೂ ಇತರೆ ನಾಯಕರು ಸಜ್ಜಾಗಬೇಕು ಎಂದರು. ಅಂಬೇಡ್ಕರ್‌ ಭವನದ ಎದುರಿನ ಖಾಲಿ ಜಾಗದಲ್ಲಿ ದೊಡ್ಡ ಪ್ರಮಾಣದ ವೇದಿಕೆ ಹಾಕಿಸಬೇಕು. ಯಾತ್ರಿಗಳು, ಮುಖ್ಯ ಅತಿಥಿಗಳು, ಕಾರ್ಯಕರ್ತರು ಹೋಗಲು 3 ಗೇಟ್‌ ಪ್ರತ್ಯೇಕವಾಗಿ ತೆರೆಯಬೇಕು ಎಂದು ಯಾತ್ರಿಗಳು, ಗಣ್ಯರು ಕೂರಲು ಚೇರ್‌ ಹಾಕಿಸಬೇಕು ಎಂದರು. ಪಾದಯಾತ್ರೆ ವೇಳೆ ವಿವಿಧ ಜಾನಪದ ಕಲಾತಂಡಗಳು, ತಮಟೆ, ಕಳಸ ಹೊತ್ತ ಮಹಿಳೆಯರು ಸೇರಿದಂತೆ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಮಾಡಬೇಕು ಎಂದರು. 

Chamarajanagar: ಭಾರತ್‌ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್‌

ಪಾದಯಾತ್ರೆ ಸಾಗುವ ಮಾರ್ಗ ಮಧ್ಯೆ ಜನರು ವಿಶ್ರಾಂತಿ ಪಡೆಯಲು ಶಾಮಿಯಾನ ಹಾಗೂ ಆಸನಗಳು, ತಂಪು ಪಾನೀಯ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಹೆದ್ದಾರಿ ಮೂಲಕ ಪಾದಯಾತ್ರೆ ಸಾಗುವ ವೇಳೆ ಮಾರ್ಗ ಮಧ್ಯ ಸಿಗುವ ಆಯಾಯ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರುವ ವ್ಯವಸ್ಥೆ ಮಾಡಬೇಕು ಎಂದರು. ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭವಾಗುವ ಹಿನ್ನೆಲೆ ಜನರನ್ನು ಆ ವೇಳೆಗೆ ಕರೆತರಲು ಯೋಜನೆ ರೂಪಿಸಬೇಕು. ಯಾತ್ರೆಯಲ್ಲಿ ನಡೆದು ಬರುವ ಜನರು ಮುಗಿದ ನಂತರ ಗ್ರಾಮಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಬೇಕು ಎಂದರು. ಗುಂಡ್ಲುಪೇಟೆ, ಬೆಂಡಗಳ್ಳಿ, ಬೇಗೂರು ಬಳಿಯ ತ್ರಿಪುರ ಸುಂದರಿ ಕಲ್ಯಾಣ ಮಂಟಪದ ಮುಂದಿನ ಜಾಗ ಹಾಗೂ ಹೆದ್ದಾರಿಯಲ್ಲಿ ಸಿಗುವ ಹಳ್ಳಿಗಳ ಬಗ್ಗೆ ಮಾಹಿತಿ ಪಡೆದರು. 

Chamarajanagar: ಗರ್ಭಿಣಿ ಪತ್ನಿಗೆ ಮದ್ಯ ಕುಡಿಸಿ ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಗಣೇಶಪ್ರಸಾದ್‌, ಮಾಜಿ ಸಂಸದ ಎ.ಸಿದ್ದರಾಜು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ.ಬಸವರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್‌.ಎಸ್‌.ನಂಜಪ್ಪ, ಚಾಮುಲ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌.ನಂಜುಂಡಪ್ರಸಾದ್‌, ಜಿಪಂ ಮಾಜಿ ಸದಸ್ಯರಾದ ಕೆ.ಎಸ್‌.ಮಹೇಶ್‌, ಕೆರಹಳ್ಳಿ ನವೀನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್‌, ಮಾಜಿ ಅಧ್ಯಕ್ಷ ದೇವನೂರು ಶಿವಪ್ಪ ದೇವರು, ತಾಪಂ ಮಾಜಿ ಅಧ್ಯಕ್ಷ ಎಚ್‌.ಎನ್‌.ನಟೇಶ್‌, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಗೌಡ್ರಮನೆ ಮಧು, ಪುರಸಭೆ ಮಾಜಿ ಅಧ್ಯಕ್ಷ ಎಲ್‌.ಸುರೇಶ್‌, ಗ್ರಾಪಂ ಮಾಜಿ ಅಧ್ಯಕ್ಷ ಮಂಚಹಳ್ಳಿ ಲೋಕೇಶ್‌, ಪಿಎಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮಂಜುನಾಥ ಸೇರಿದಂತೆ ಯುವಕರು ಇದ್ದರು.