Asianet Suvarna News Asianet Suvarna News

ಖಜಾನೆ ಖಾಲಿ ಆಗಿ ಸರ್ಕಾರಿ ಜಮೀನನ್ನು ರಾಜ್ಯ ಸರ್ಕಾರ ಮಾರುತ್ತಿದೆ: ಸಂಸದ ಬೊಮ್ಮಾಯಿ ಆರೋಪ

ಸರಕಾರದ ಖಜಾನೆ ಖಾಲಿ ಆಗಿ ರಾಜ್ಯ ಸರಕಾರ ಸರಕಾರಿ ಜಮೀನನ್ನು ಮಾರುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಎನ್ನುತ್ತಲೇ ನಿಯಮಗಳನ್ನು ಹೇರಿ ಜನರಿಗೆ ಸಿಗದಂತೆ ಮಾಡುತ್ತಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

mp basavaraj bommai slams on karnataka congress govt at haveri gvd
Author
First Published Jun 21, 2024, 5:47 PM IST

ಹಾನಗಲ್ಲ (ಜೂ.21): ತಾಲೂಕಿನಲ್ಲಿ ದ್ವೇಷ ಮುಕ್ತ ರಾಜಕಾರಣ, ಬರ ಮುಕ್ತ ಶಾಶ್ವತ ನೀರಾವರಿ, ಇಡೀ ತಾಲೂಕನ್ನು ತೋಟಗಾರಿಕಾ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಕನಸು ನನ್ನದಾಗಿದ್ದು, ಇದರೊಂದಿಗೆ ತಾಲೂಕನ್ನು ಬಿಜೆಪಿಯ ಭದ್ರ ಕೋಟೆ ಮಾಡಲು ಮತ್ತೆ ಎಲ್ಲರೂ ಒಂದಾಗಿ ಸಹಕರಿಸಿ ಎಂದು ಮಾಜಿ ಮುಖ್ಯಮಂತ್ರಿ, ನೂತನ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ಬಿಜೆಪಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾನಗಲ್ಲ ತಾಲೂಕು ಬುದ್ಧಿವಂತ ಮತದಾರರ ಕ್ಷೇತ್ರ. ದಿ.ಸಿ.ಎಂ. ಉದಾಸಿ ಅವರು ಈ ತಾಲೂಕಿನಲ್ಲಿ ದ್ವೇಷ ರಹಿತ ರಾಜಕಾರಣ ಮಾಡಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡಿದರೆ ಹೊರತು ಪೊಲೀಸ್‌ ಆಡಳಿತ ನೀಡಲಿಲ್ಲ. 

ಮಾಜಿ ಸಚಿವ ಮನೋಹರ ತಹಶೀಲ್ದಾರ ಕೂಡ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದರೆ ಹೊರತು ದ್ವೇಷ ರಾಜಕಾರಣಕ್ಕೆ ಮಣೆ ಹಾಕಲಿಲ್ಲ. ಅನ್ಯಾಯವನ್ನು ಈ ತಾಲೂಕು ಸಹಿಸುವುದಿಲ್ಲ. ಇನ್ನು ಪೊಲೀಸ್‌ ರಾಜ್ಯ ನಡೆಯುವುದಿಲ್ಲ. ನಾನು ಸಂಸದನಾಗಿ ಮಾತ್ರವಲ್ಲ ಹಾನಗಲ್ಲ ತಾಲೂಕಿನ ಮಟ್ಟಿಗೆ ಶಾಸಕನಾಗಿ ನಿರ್ವಹಿಸಬೇಕಾದ ಜವಬ್ದಾರಿಯನ್ನೂ ವಹಿಸಿಕೊಳ್ಳುತ್ತೇನೆ. ಇಲ್ಲಿಯೇ ಕಚೇರಿ ತೆರೆದು ನಿಮಗಾಗಿ ಕೆಲಸ ಮಾಡುತ್ತೇನೆ. ಆಡಳಿತದಲ್ಲಿ ಸಂಪೂರ್ಣ ಬದಲಾವಣೆ ತರುತ್ತೇನೆ. ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇವೆ. ನನ್ನ ಹಾಗೂ ಈ ಕ್ಷೇತ್ರದ ಜನತೆಯ ನಡುವೆ ಮಧ್ಯಸ್ಥಿಕೆವಹಿಸುವವರು ಬೇಡ. ಬಿಜೆಪಿ ಕಾರ್ಯಕರ್ತರು ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದಾರೆ. ಇದು ಇನ್ನು ಶಾಶ್ವತ ಎಂದು ತಿಳಿಸಿದರು.

ವಿಜಯಪುರದಲ್ಲಿ ಉಕ್ಕಿ ಹರಿಯೋ ಹಳ್ಳ: ಶಿಕ್ಷಣಕ್ಕಾಗಿ ಪ್ರಾಣವನ್ನೆ ಪಣಕ್ಕಿಡ್ತಿದ್ದಾರೆ ಇಂಗಳನಾಳ ಮಕ್ಕಳು!

೭ನೇ ವೇತನ ಜಾರಿಗೆ ಸರ್ಕಾರಕ್ಕೆ ಸರಕಾರಿ ನೌಕರರ ಸಂಘ ಅರ್ಜಿ ಸಲ್ಲಿಸಿ ಸುಸ್ತಾಗಿದೆ. ಆಗ ಬಾ, ಈಗ ಬಾ ಎಂದು ದಿನ ದೂಡುತ್ತಿದ್ದಾರೆ. ಸರಕಾರದ ಖಜಾನೆ ಖಾಲಿ ಆಗಿ ರಾಜ್ಯ ಸರಕಾರ ಸರಕಾರಿ ಜಮೀನನ್ನು ಮಾರುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಎನ್ನುತ್ತಲೇ ನಿಯಮಗಳನ್ನು ಹೇರಿ ಜನರಿಗೆ ಸಿಗದಂತೆ ಮಾಡುತ್ತಾರೆ. ರಾಜ್ಯಕ್ಕೆ ಒಂದು ವರ್ಷದಲ್ಲಿ ಮತ್ತೆ ಚುನಾವಣೆ ಬರುತ್ತದೆ ಕಾರ್ಯಕರ್ತರು ಸಿದ್ಧರಾಗಿ. ಜನಶಕ್ತಿ ಗೆಲ್ಲಬೇಕು. ಸಮಾಜ ಘಾತುಕ ಶಕ್ತಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಲಂಚಾವತಾರ ಹೆಚ್ಚಾಗಿದೆ. ಇದೆಲ್ಲವನ್ನು ಸರಿಪಡಿಸಲು ಕಾರ್ಯಕರ್ತರು ಸಜ್ಜಾಗಿ. ನಾನು ನಿಮ್ಮೊಂದಿಗಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗರ ಜಂಬ ಇಳಿಸಿದೆ. ತಾಲೂಕಿನ ಆಡಳಿತ ಜಿಡ್ಡುಗಟ್ಟಿದೆ. ನೀರಾವರಿ ಯೋಜನೆಗಳು ಅಷ್ಟಕ್ಕೆ ನಿಂತಿವೆ. ಈಗ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿ ಮಾತು ಕೊಟ್ಟಂತೆ ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಆಗಲಿದ್ದಾರೆ. ಜಿಪಂ, ತಾಪಂ ಚುನಾವಣೆಗಳಲ್ಲಿ ಅಭೂತಪೂರ್ವ ಜಯಕ್ಕೆ ಬಿಜೆಪಿಯ ಎಲ್ಲರೂ ಸನ್ನದ್ಧರಾಗೋಣ ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಒಂದು ವರ್ಷದ ಕಾಂಗ್ರೆಸ್ ದುರಾಡಳಿತಕ್ಕೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ. ರಾಜ್ಯ ಸರಕಾರಕ್ಕೆ ರೈತರ ಶಾಪ ತಟ್ಟಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಮಾಡಿದೆವು. ಅವನ್ನು ಕಾಂಗ್ರೆಸ್ಸಿಗರು ಉದ್ಘಾಟನೆ ಮಾಡುತ್ತಿದ್ದಾರೆ. ಎಲ್ಲವನ್ನೂ ಇನ್ನೂ ಪೂರ್ಣಗೊಳಿಸಲಾಗಿಲ್ಲ. ಎಸ್‌ಟಿ ನಿಗಮದ ಹಣ ನಕಲಿ ಖಾತೆಗೆ ಹಾಕಿ ಮೋಸ ಮಾಡಿದ್ದಾರೆ. ಸಚಿವ ನಾಗೇಂದ್ರ ತಲೆ ದಂಡದ ಹೆಸರಿನಲ್ಲಿ ಬಚಾವ ಆಗಲು ಯತ್ನಿಸುತ್ತಿದ್ದಾರೆ. ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಿನಾಮೆ ನೀಡಬೇಕು. ಭಾಗ್ಯಗಳನ್ನು ಬಂದ್ ಮಾಡಲು ಕಾಂಗ್ರೆಸ್ ಶಾಸಕರು, ಮುಖಂಡರೇ ಒತ್ತಾಯಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಕಳ್ಳಸಾಗಣೆ ತಡೆಗಟ್ಟುವ ದೃಷ್ಟಿಯಿಂದ ಇಂಧನ ಬೆಲೆ ಏರಿಕೆ: ಬಸವರಾಜ ರಾಯರಡ್ಡಿ

ಮಾಜಿ ಶಾಸಕ ಶಿವರಾಜ ಸಜ್ಜನ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ರಾಜು ಗೌಳಿ, ಎಸ್.ಎಂ.ಕೋತಂಬರಿ, ಶೋಭಾ ಉಗ್ರಣ್ಣನವರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ, ಮುಖಂಡರಾದ ಮಾಲತೇಶ ಸೊಪ್ಪಿನ, ಶಿವಲಿಂಗಪ್ಪ ತಲ್ಲೂರ, ಕೃಷ್ಣ ಈಳಿಗೇರ, ಬಿ.ಎಸ್.ಅಕ್ಕಿವಳ್ಳಿ, ಭೋಜರಾಜ ಕರೂದಿ, ಮಾಲತೇಶ ಗಂಟೇರ, ಪದ್ಮನಾಭ ಕುಂದಾಪೂರ, ಮಾರುತಿ ಪುರ್ಲಿ, ಶಿವಯೋಗಿ ಹಿರೇಮಠ, ಎ.ಎಸ್.ಬಳ್ಳಾರಿ, ಮೊದಲಾದವರು ವೇದಿಕೆಯಲ್ಲಿದ್ದರು.

Latest Videos
Follow Us:
Download App:
  • android
  • ios