Lok Sabha Election 2024: ಯದುವೀರ್‌ಗೆ ಬಿಜೆಪಿ ಟಿಕೆಟ್‌, ಕಾಂಗ್ರೆಸ್ಸಲ್ಲಿ ಸಂಚಲನ..!

ಬಿಜೆಪಿ ಅಧಿಕೃತವಾಗಿ ಯದುವೀರ್‌ ಅವರೇ ಅಭ್ಯರ್ಥಿ ಎಂದು ಘೋಷಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶತಾಯಗತಾಯ ಬಿಜೆಪಿ ಸೋಲಿಸಲು ಯಾರನ್ನು ಅಭ್ಯರ್ಥಿ ಮಾಡಿದರೆ ಸೂಕ್ತ ಎಂದು ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಹೀಗಾಗಿ ಮತ್ತೆ ವರುಣ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ಗಾಗಿ ಮುನ್ನೆಲೆಗೆ ಬಂದಿದೆ.

Movement in Congress For Mysuru BJP Ticket to Yaduveer Krishnadatta Chamaraja Wadiyar grg

ಅಂಶಿ ಪ್ರಸನ್ನಕುಮಾರ್

ಮೈಸೂರು(ಮಾ.15):  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಹಾಲಿ ಸಂಸದ ಪ್ರತಾಪ್‌ ಸಿಂಹ ಬದಲು ಹೊಸಮುಖ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಅವಕಾಶ ನೀಡಿರುವುದರಿಂದ ಕಾಂಗ್ರೆಸ್‌ನಲ್ಲೀಗ ಅಭ್ಯರ್ಥಿ ವಿಚಾರದಲ್ಲಿ ಮರು ಚಿಂತನೆ ಆರಂಭವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಪ್ರತಾಪ್‌ ಸಿಂಹ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ಆದರೆ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ತಪ್ಪುತ್ತದೆ ಎಂದು ಗೊತ್ತಾದಾಗ ಲಕ್ಷ್ಮಣ ಅವರ ಜೊತೆಗೆ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಹೆಸರೂ ಕೇಳಿ ಬಂತು. ಬಿಜೆಪಿ ಅಧಿಕೃತವಾಗಿ ಯದುವೀರ್‌ ಅವರೇ ಅಭ್ಯರ್ಥಿ ಎಂದು ಘೋಷಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶತಾಯಗತಾಯ ಬಿಜೆಪಿ ಸೋಲಿಸಲು ಯಾರನ್ನು ಅಭ್ಯರ್ಥಿ ಮಾಡಿದರೆ ಸೂಕ್ತ ಎಂದು ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಹೀಗಾಗಿ ಮತ್ತೆ ವರುಣ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ಗಾಗಿ ಮುನ್ನೆಲೆಗೆ ಬಂದಿದೆ.

PRATAP SIMHA,: ಟಿಕೆಟ್‌ ತಪ್ಪಿದ್ದು ಯಾಕೆ ಅಂತಾ ನನಗೆ ಗೊತ್ತಾಗ್ತಿಲ್ಲ, ಬಿಎಸ್‌ವೈ ನನಗೆ ಟಿಕೆಟ್‌ ತಪ್ಪಿಸಿಲ್ಲ: ಪ್ರತಾಪ್‌ ಸಿಂಹ

ಈ ಮೊದಲು ಯತೀಂದ್ರ ಅವರ ಹೆಸರು ಕೇಳಿ ಬಂದಿತ್ತು. ಆದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಅಧಿಕೃತವಾದ ನಂತರ ಸ್ಪರ್ಧೆ ಕಷ್ಟವಾಗಬಹುದು ಎಂಬ ಕಾರಣದಿಂದ ಅವರೇ ಹಿಂದೆ ಸರಿದಿದ್ದರು. ಕಾಂಗ್ರೆಸ್‌ನಿಂದ ಕ್ಷೇತ್ರಕ್ಕೆ ಒಕ್ಕಲಿಗ ಜನಾಂಗದ ಎಂ.ಲಕ್ಷ್ಮಣ, ಡಾ.ಬಿ.ಜೆ.ವಿಜಯಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ವೀರಶೈವ ಜನಾಂಗದ ಗುರುಪಾದಸ್ವಾಮಿ, ಗುರುಮಲ್ಲೇಶ್, ಕುರುಬ ಜನಾಂಗದ ಜೆ.ಜೆ.ಆನಂದ್‌ ಕೂಡ ಟಿಕೆಟ್‌ ಕೇಳಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಸಾಹಿತಿಗಳ ಕೋಟಾದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿರುವ ಎಚ್. ವಿಶ್ವನಾಥ್‌ ಕೂಡ ಟಿಕೆಟ್‌ ಕೇಳಿದ್ದರು. ಅಂತಿಮವಾಗಿ ಒಕ್ಕಲಿಗರ ಪೈಕಿ ಒಬ್ಬರಿಗೆ ಟಿಕೆಟ್‌ ನೀಡುವುದು ಎಂದು ಎಂ.ಲಕ್ಷ್ಮಣ ಹಾಗೂ ವಿಜಯಕುಮಾರ್‌ ಹೆಸರನ್ನು ಮಾತ್ರ ಪರಿಗಣಿಸಲಾಗಿತ್ತು.

ಒಕ್ಕಲಿಗರಾದ ಎಚ್.ಡಿ.ತುಳಸಿದಾಸಪ್ಪ ಅವರ ನಂತರ ಪ್ರತಾಪ್‌ ಸಿಂಹ ಅವರು ಈ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್‌ ಸಿಕ್ಕಿದ್ದರೆ ತುಳಸಿದಾಸಪ್ಪ ಅವರಂತೆ ಪ್ರತಾಪ್‌ ಸಿಂಹ ಅವರಿಗೂ ಹ್ಯಾಟ್ರಿಕ್‌ ಗೆಲುವು ದಾಖಲಿಸುವ ಅವಕಾಶ ಇತ್ತು. ಇದೀಗ ಅವರಿಗೆ ಟಿಕೆಟ್‌ ತಪ್ಪಿದ ಕಾರಣ ಬಿಜೆಪಿ- ಜೆಡಿಎಸ್‌ ಪರ ಒಕ್ಕಲಿಗರು ಗಣನೀಯ ಪ್ರಮಾಣದಲ್ಲಿ ಮತ ಚಲಾಯಿಸುವರೇ? ಚಲಾಯಿಸದಿದ್ದರೆ ಯತೀಂದ್ರ ರನ್ನು ಅಭ್ಯರ್ಥಿ ಮಾಡಿದರೆ ಹೇಗೆ? ಅಥವಾ ಒಕ್ಕಲಿಗರ ಪೈಕಿಯೇ ಒಬ್ಬರಿಗೆ ಟಿಕೆಟ್‌ ನೀಡಿ ಕಾಂಗ್ರೆಸ್‌ ಸಾಂಪ್ರದಾಯಿಕ ಅಹಿಂದ ಮತಗಳನ್ನು ಸೆಳೆದು, ಗೆಲ್ಲಿಸಿಕೊಳ್ಳಬಹುದೇ? ಎಂಬ ಮರು ಚಿಂತನೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು-ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಪ್ರತಿಷ್ಠೆಯಾಗಿರುವುದರಿಂದ ಅವರ ತೀರ್ಮಾನವೇ ಇಲ್ಲಿ ಅಂತಿಮವಾಗಿರುತ್ತದೆ. ಅವರು ನಿರ್ಧರಿಸಿದವರಿಗೆ ಟಿಕೆಟ್‌ ಸಿಗುವುದು ಸ್ಪಷ್ಟ.

ಸಾಮಾಜಿಕ ಜಾಲತಾಣದಲ್ಲಿ ಕವೀಶ್‌ ಗೌಡ ಪರ ಅಭಿಯಾನ

ಸಾಮಾಜಿಕ ಜಾಣದಲ್ಲಿ ಮಾಜಿ ಶಾಸಕ ವಾಸು ಅವರ ಪುತ್ರ ವಿ.ಕವೀಶ್‌ ಗೌಡರನ್ನು ವಾಪಸ್‌ ಕಾಂಗ್ರೆಸ್‌ಗೆ ಕರೆತಂದು ಟಿಕೆಟ್‌ ನೀಡಬೇಕು ಎಂಬ ಅಭಿಯಾನ ಇದೀಗ ಆರಂಭವಾಗಿದೆ. ವಾಸು ಅವರು ಸುದೀರ್ಘ 4 ದಶಕಗಳ ಕಾಲ ಕಾಂಗ್ರೆಸ್‌ನಲ್ಲೇ ಇದ್ದವರು. ಕಳೆದ ವಿಧಾನಸಭಾ ಚುನಾವಣೆ ಕಾಲಕ್ಕೆ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಪುತ್ರ ವಿ.ಕವೀಶ್‌ ಗೌಡ ಬಿಜೆಪಿ ಸೇರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೇವಲ 15 ದಿನಗಳಲ್ಲಿ ಕ್ಷೇತ್ರಾದ್ಯಂತ ಸಂಚರಿಸಿ, 51 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿದ್ದರು. ಕಳೆದ ವಾರ ವಾಸು ನಿಧನರಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಅನುಕಂಪವಿದೆ. ಆದ್ದರಿಂದ ಕವೀಶ್‌ ಗೌಡರನ್ನು ವಾಪಸ್‌ ಪಕ್ಷಕ್ಕೆ ಕರೆತಂದು ಟಿಕೆಟ್‌ ನೀಡಿದರೆ ಯದುವೀರ್‌ ಅವರನ್ನು ಮಣಿಸಬಹುದು ಎಂಬುದು ಬೆಂಬಲಿಗರ ಅಭಿಮತ.

ಲೋಕಸಭೆಗೆ ಬಿಜೆಪಿ ಮೈಸೂರು ಅಭ್ಯರ್ಥಿ 31 ವರ್ಷದ ಯದುವೀರ್ ಒಡೆಯರ್ ಓದು, ಹವ್ಯಾಸ, ಜೀವನಶೈಲಿ..

ರಸ್ತೆ ಬದಿ ಕೂತು ಚಹಾ ಸೇವಿಸಿದ ಯದುವೀರ್:

ಯದುವೀರ್ ಅವರು ರಾಜವಂಶಸ್ಥರಾದರೂ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಆಗುತ್ತಿದ್ದಂತೆ ಜನ ಸಾಮಾನ್ಯರಂತೆ ಸಾರ್ವಜನಿಕವಾಗಿ ಗುರುವಾರ ಕಾಣಿಸಿಕೊಂಡರು. ನಗರದ ಖಾಸಗಿ ಹೊಟೇಲ್‌ಗೆ ಪಕ್ಷದ ಮುಖಂಡರ ಜತೆ ಭೇಟಿ ನೀಡಿದ ಅವರು ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತು ಚಹಾ ಸವಿದರು. ರಾಜವಂಶಸ್ಥರಾದ ಯದುವೀರ್ ಅವರು ಈವರೆಗೆ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಅಭ್ಯರ್ಥಿಯಾಗಿ ಹೆಸರು ಪ್ರಕಟವಾಗುತ್ತಿದ್ದಂತೆ ನಗರದ ಬಿಜೆಪಿ ಕಚೇರಿಗೆ ಮತ್ತು ಪಕ್ಷದ ನಾಯಕರ ಮನೆಗೆ ಭೇಟಿ ನೀಡಿದರು. ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕ ಎಸ್.ಎ. ರಾಮದಾಸ್ ಮನೆಗೆ ಭೇಟಿ ನೀಡಿದರು.

ಬಳಿಕ ಪಕ್ಷದ ನಾಯಕರ ಜತೆ ತೆರಳಿ ಹೊಟೇಲ್‌ ಹೊರಗೆ ಕುಳಿತು ಚಹಾ ಸವಿದರು. ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ ಕುಮಾರ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಅರುಣ್ ಬೋಗಾದಿ, ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಬಿ.ಎಂ.ರಘು, ಮಹೇಶ್ ಮಡವಾಡಿ, ಮುಖಂಡರಾದ ನಂದೀಶ್‌ ಬೆಳ್ಳಯ್ಯ, ಡಾ. ರವಿ, ಸಮೀರ್ ಇದ್ದರು.

Latest Videos
Follow Us:
Download App:
  • android
  • ios