ಯಾರೇ ಬಂದರೂ ಜೆಡಿಎಸ್‌ಗೆ ಸ್ವಾಗತ. ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಅಚ್ಚರಿಯಾಗುವಂತೆ ವಿವಿಧ ಪಕ್ಷದ ಮುಖಂಡರು ಜೆಡಿಎಸ್‌ ಸೇರುತ್ತಾರೆ. ಆದರೆ, ಇನ್ನೂ ಸ್ವಲ್ಪ ದಿನ ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ: ಇಬ್ರಾಹಿಂ 

ಕೊಪ್ಪಳ(ಜು.24):  ರಾಜ್ಯದ 60ಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್‌, ಬಿಜೆಪಿ ತೊರೆದು ಶೀಘ್ರವೇ ಜೆಡಿಎಸ್‌ ಸೇರಲಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಾಂಬ್‌ ಸಿಡಿಸಿದರು. ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ವಿಚಾರ ಇನ್ನೂ ಚರ್ಚೆ ಹಂತದಲ್ಲಿದೆ. ಮಾತುಕತೆ ಮುಗಿದ ಬಳಿಕ ಘೋಷಿಸುತ್ತೇವೆ ಎಂದರು.

ಯಾರೇ ಬಂದರೂ ಜೆಡಿಎಸ್‌ಗೆ ಸ್ವಾಗತ. ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಅಚ್ಚರಿಯಾಗುವಂತೆ ವಿವಿಧ ಪಕ್ಷದ ಮುಖಂಡರು ಜೆಡಿಎಸ್‌ ಸೇರುತ್ತಾರೆ. ಆದರೆ, ಇನ್ನೂ ಸ್ವಲ್ಪ ದಿನ ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಕ್ಟೋಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ. ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ ವಿಸ್ತರಣೆಗೆ ಹೈಕಮಾಂಡ್‌ ಬಿಟ್ಟಿಲ್ಲ. ಗುಜರಾತ್‌ ಜತೆಗೆ ಕರ್ನಾಟಕದ ಚುನಾವಣೆ ನಡೆಯಲಿದೆ. ರಾಜ್ಯಾದ್ಯಂತ 60ಕ್ಕೂ ಹೆಚ್ಚು ಶಾಸಕರು ಜೆಡಿಎಸ್‌ ಸೇರಲಿದ್ದಾರೆ ಎಂದರು.

ಯಡಿಯೂರಪ್ಪನನ್ನ ಇನ್ನೂ ಶೂದ್ರರನ್ನಾಗಿಯೇ ನೋಡಲಾಗ್ತಿದೆ‌: ಸಿಎಂ ಇಬ್ರಾಹಿಂ

ಸಿದ್ದರಾಮಯ್ಯ ಅವರನ್ನು ನಾನೇ ಮುಖ್ಯಮಂತ್ರಿ ಮಾಡಿದ್ದೇನೆ. ಬಾದಾಮಿಯಲ್ಲಿ ಅವರು ಗೆಲ್ಲಲು ನಾನೇ ಕಾರಣ. ಈಗ ದಾರಿ ತಪ್ಪಿದ್ದಾರೆ. ಅವರ ಬಗ್ಗೆ ನನಗೆ ಅನುಕಂಪ ಇದೆ. ಮತ್ತೆ ಅಸೆಂಬ್ಲಿಗೆ ಬರಬೇಕು ಎನ್ನುವ ಆಸೆ ನನಗೂ ಇದೆ. ಆದರೆ, ಅವರು ಎಲ್ಲಿ ನಿಂತರೂ ಗೆಲ್ಲುವುದು ಕಷ್ಟವಿದೆ ಎಂದರು.

ಕೋಲಾರದಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದಕ್ಕೆ ಅವರ ಸಮುದಾಯ ಸಿಟ್ಟಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್‌ ಮುಕ್ತ ಆಗಲಿದೆ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್‌ ಮುಳುಗುತ್ತದೆ ಎಂದು ಭವಿಷ್ಯ ನುಡಿದರು.
ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಕೇವಲ ವಿವಾದ ಸೃಷ್ಟಿಸಿ ಜನರನ್ನು ಕೆರಳಿಸಿ ಮತ ಗಳಿಸುವ ಕೆಲಸ ಮಾಡುತ್ತಿದೆ. ಆದರೆ ನಮ್ಮದು ಶಾಂತಿಪ್ರಿಯ ನಾಡು. ಇಂತಹ ಕುತಂತ್ರ ಬಹಳ ದಿನ ನಡೆಯುವುದಿಲ್ಲ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ನೂರಾರು ಕೋಟಿ ಡೀಲ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ಷೇತ್ರ ತ್ಯಾಗ ಮಾಡಿಲ್ಲ. ಬಿಜೆಪಿ ನಾಯಕರು ವಿಜಯೇಂದ್ರಗೆ ಟಿಕೆಟ್‌ ಕೊಡುವುದಿಲ್ಲ ಎಂದು ತಾವೇ ಘೋಷಣೆ ಮಾಡಿದ್ದಾರೆ. ಬಿಜೆಪಿ ಯಡಿಯೂರಪ್ಪ ಅವರನ್ನು ಹೊರಗೆ ದಬ್ಬಿದೆ. ಲಿಂಗಾಯತರ ವೋಟ್‌ ಪಡೆದ ಬಿಜೆಪಿ, ಯಡಿಯೂರಪ್ಪ ಅವರಿಗೆ ವಂಚನೆ ಮಾಡಿದೆ ಎಂದರು.

ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ…, ಸಿ.ಎಂ. ಹಿರೇಮಠ, ಸಿದ್ದು ಬಂಡಿ, ಮಲ್ಲನಗೌಡ ಕೋನನಗೌಡರ, ಅಶೋಕ್‌ ಉಮಲೂಟಿ, ಬಸವರಾಜ ನಾಯಕ, ತುಕಾರಾಮ ಸುರ್ವೆ ಇದ್ದರು.