ಅನಿಲ್ ಆ್ಯಂಟಿನಿ ಬೆನ್ನಲ್ಲೇ ಮತ್ತಷ್ಟು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೆ ತಯಾರಿ!
ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೀಗ ಕೇರಳದಲ್ಲಿ ಮತ್ತಷ್ಟು ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ.
ನವದೆಹಲಿ(ಏ.07): ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಪಡಿಸಲು ಯತ್ನಿಸುತ್ತಿರುವ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ದಕ್ಷಿಣದಲ್ಲಿ ಪ್ರಮುಖ ನಾಯಕರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟಿನಿ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸೇರಿಕೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅನಿಲ್ ಆ್ಯಂಟಿನಿ ಬೆನ್ನಲ್ಲೇ ಕೇರಳ ಕಾಂಗ್ರೆಸ್‌ನ ಕೆಲ ಪ್ರಮುಖ ನಾಯಕರು ಬಿಜೆಪಿ ಸೇರಲು ಬಯಸಿದ್ದಾರೆ. ಶೀಘ್ರದಲ್ಲೇ ನಾಯಕರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.
ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಕೆ ಸುರೇಂದ್ರನ್, ಕೇರಳ ಬಿಜೆಪಿಯ ಬಲವರ್ಧನೆಯಾಗಿದೆ. ಅನಿಲ್ ಆ್ಯಂಟನಿ ಉತ್ತಮ ವಿದ್ಯಾಭ್ಯಾಸ ಪಡೆದಿದ್ದಾರೆ. ಯಾವುದೇ ವಿಚಾರವನ್ನು ತರ್ಕಬದ್ಧವಾಗಿ ಮಾತನಾಡಬಲ್ಲರು. ಇದೀಗ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಭಿವೃದ್ಧಿ ಭಾರತಕ್ಕಾಗಿ ಅನಿಲ್ ಆ್ಯಂಟನಿ ಬಿಜಪಿ ಸೇರಿಕೊಂಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಾಗೂ ಎಡರಂಗದ ಹಲವು ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಬಿಜೆಪಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಕೆಲಪ್ರಮುಖ ನಾಯಕರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಕೆ ಸುರೇಂದ್ರನ್ ಹೇಳಿದ್ದಾರೆ.
Breaking: ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆ
ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವೋಟ್ ಶೇರ್ ಹೆಚ್ಚಾಗಲಿದೆ. ಬಿಜೆಪಿ ಹಿಂದೂಗಳಿಗೆ ಮಾತ್ರ ಮಣೆ ಹಾಕಲಿದೆ ಅನ್ನೋ ಆರೋಪ ಕೇರಳದಲ್ಲಿದೆ. ಆದರೆ ಕ್ರಿಶ್ಚಿಯನ್ ಸಮುದಾಯದ ಸುಶಿಕ್ಷಿತ ನಾಯಕ ಬಿಜೆಪಿ ಸೇರಿಕೊಂಡಿದ್ದಾರೆ. ಇದು ಎಲ್ಲಾ ಟೀಕೆಗಳಿಗೆ ಉತ್ತರವಾಗಿದೆ. ಮುಂದಿನ ದಿನಗಳಲ್ಲಿ ಕ್ರಿಶ್ಟಿಯನ್ ಸಮುದಾಯದ ಮತಗಳು ಬಿಜೆಪಿಗೆ ಬರಲಿದೆ. ಅಭಿವೃದ್ಧಿ ಭಾರತಕ್ಕೆ ಎಲ್ಲಾ ಸಮುದಾಯ ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ ಎಂದು ಕೆ ಸುರೇಂದ್ರನ್ ಹೇಳಿದ್ದಾರೆ.
ಪುತ್ರ ಬಿಜೆಪಿ ಸೇರ್ಪಡೆ ಕುರಿತು ಎಕೆ ಆ್ಯಂಟಿನಿ ಪ್ರತಿಕ್ರಿಯೆ ನೀಡಿದ್ದಾರೆ. ಪುತ್ರನ ನಿರ್ಧಾರದಿಂದ ತೀವ್ರ ನೋವಾಗಿದೆ ಎಂದಿದ್ದಾರೆ. ಅನಿಲ್ ಆ್ಯಂಟಿನಿ ತಗೆದುಕೊಂಡಿರುವ ನಿರ್ಧಾರ ತಪ್ಪು. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮಗಳು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದೆ. ಆದರೆ 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ಧರ್ಮಗಳ ನಡುವೆ ತಿಕ್ಕಾಟ ಹೆಚ್ಚಾಗಿದೆ. ಜಾತ್ಯತೀತೆಯನ್ನು ಬಿಜೆಪಿ ಗಾಳಿಗೆ ತೂರಿದೆ ಎಂದು ಎಕೆ ಆ್ಯಂಟಿನಿ ಹೇಳಿದ್ದಾರೆ.
'ಬಿಜೆಪಿಯಲ್ಲಿ ನನ್ನ ಅಣ್ಣ, ಸಾಂಬಾರ್‌ನಲ್ಲಿ ಕರಿಬೇವು ಇದ್ದ ಹಾಗೆ..' ಅನಿಲ್ ಆಂಟನಿ ಸಹೋದರನ ಟೀಕೆ!
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಜೊತೆಯಾಗಿ ಭಾರತವನ್ನು ಸರ್ವನಾಶ ಮಾಡುತ್ತಿದೆ. ಭಾರತದ ಸಂವಿಧಾನ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತಿದೆ. ಬಿಜೆಪಿ ಪ್ರತಿ ವಿಚಾರದಲ್ಲಿ ಏಕರೂಪ ನೀತಿ ನೋಡುತ್ತಿದೆ. ನನ್ನ ಕೊನೆಯ ಉಸಿರಿನವರೆಗೆ ನಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಎಕೆ ಅ್ಯಂಟಿನಿ ಹೇಳಿದ್ದಾರೆ.