ವಿಜಯನಗರದಲ್ಲಿ ಗಣಿದುಡ್ಡಿನದ್ದೇ ದರ್ಬಾರ್‌! ಜೆಡಿಎಸ್‌ ಪ್ರಭಾವ ಇಲ್ಲ, ಕೈ-ಕಮಲ ನಡುವೆ ನೇರ ಕದನ  ಆನಂದ ಸಿಂಗ್‌ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್ಸಲ್ಲಿ ಪೈಪೋಟಿ ಕರುಣಾಕರ ರೆಡ್ಡಿ ವಿರುದ್ಧ ಎಂ.ಪಿ. ಪ್ರಕಾಶ್‌ ಪುತ್ರಿ?

ಟಿಕೆಟ್‌ ಫೈಟ್‌: ವಿಜಯನಗರ

- ಕೃಷ್ಣ ಎನ್‌.ಲಮಾಣಿ

ನೂತನ ವಿಜಯನಗರ ಜಿಲ್ಲೆಯ ರಾಜಕೀಯ ಇತಿಹಾಸ ತೆರೆದರೆ ಮೊದಲು ಬಳ್ಳಾರಿ ಜಿಲ್ಲೆಯ ರಾಜಕಾರಣದ ಚರಿತ್ರೆಯತ್ತ ಕಣ್ಣುಹಾಯಿಸಬೇಕು. ಮಂಡಕ್ಕಿ, ಮಂಡಾಳು ತಿಂದು ರಾಜಕಾರಣ ಮಾಡುತ್ತಿದ್ದ ನೆಲದಲ್ಲಿ ಗಣಿ ದುಡ್ಡು ಹರಿದಾಡಿದ ಬಳಿಕ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮೀಸಲು ಕ್ಷೇತ್ರಗಳು. ಇನ್ನು ವಿಜಯನಗರ ಹಾಗೂ ಹರಪನಹಳ್ಳಿ ಸಾಮಾನ್ಯ ಕ್ಷೇತ್ರಗಳು. ಈ ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಇದೀಗ ಜೆಡಿಎಸ್‌ ಶಕ್ತಿಗುಂದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಕದನ ಕುತೂಹಲ ಏರ್ಪಟ್ಟಿದೆ. ಜಿಲ್ಲೆಯ ಎಲ್ಲಾ ಚುನಾವಣೆಯಲ್ಲಿ ಬಹುತೇಕ ಗಣಿದುಡ್ಡಿನದ್ದೇ ದರ್ಬಾರ್‌ ನಡೆಯುತ್ತಾ ಬಂದಿರುವುದರಿಂದ ಜಾತಿ ಲೆಕ್ಕಾಚಾರ ಗೌಣವಾಗಿದ್ದು, ಸಂಘಟನೆ ಮತ್ತು ಸಂಪನ್ಮೂಲವೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆಯೇ ಈ ಬಾರಿಯೂ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ವಿಜಯನಗರ: ಆನಂದ್‌ ಸಿಂಗ್‌ ಎದುರು ಕಾದಾಟಕ್ಕೇ ಕಾದಾಟ

ವಿಜಯನಗರ ಕ್ಷೇತ್ರ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ. ಈಗ ಸದ್ಯ ಬಿಜೆಪಿ ಇಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ 2008ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಅವರು, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆಯಾದರು. ತದನಂತರ ನಡೆದ ಉಪ ಚುನಾವಣೆಯಲ್ಲಿ ಕಮಲದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು, ಮಂತ್ರಿಯಾಗಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಗವಿಯಪ್ಪ ಅವರು ಈ ಬಾರಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಇವರ ಜತೆಗೆ ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಸಿರಾಜ್‌ ಶೇಖ್‌ ಹಾಗೂ ಮುಖಂಡರಾದ ರಾಜಶೇಖರ್‌ ಹಿಟ್ನಾಳ, ಇಮಾಮ್‌ ನಿಯಾಜಿ ಇವರಲ್ಲಿ ಪ್ರಮುಖರು. ಆನಂದ ಸಿಂಗ್‌ ಪ್ರಭಾವಿ ವ್ಯಕ್ತಿ. ಹೀಗಾಗಿ ‘ಸಂಪನ್ಮೂಲ’ ಸುರಿಯುವವರಿಗೆ ಕೈ ಹೈಕಮಾಂಡ್‌ ಮಣೆ ಹಾಕಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಜೆಡಿಎಸ್‌ನಲ್ಲಿ ಪಕ್ಷದ ರಾಜ್ಯ ವಕ್ತಾರ ನೂರ್‌ ಅಹಮದ್‌, ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್‌ ಆಕಾಂಕ್ಷಿಗಳು. ಆಮ್‌ ಆದ್ಮಿ ಪಕ್ಷದಿಂದ ಶಂಕರದಾಸ್‌, ಕಿಚಡಿ ಕೊಟ್ರೇಶ್‌ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅದೇ ರೀತಿ ಎಸ್‌ಡಿಪಿಐ, ಕೆಆರ್‌ಎಸ್‌, ಸಿಪಿಐಎಂ ಪಕ್ಷಗಳೂ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿವೆ.

Assembly election: ಗೆದ್ದವರು, ಸೋತವರ ನಡುವೆಯೇ ಮತ್ತೆ ಕದನ!

ಹಗರಿಬೊಮ್ಮನಹಳ್ಳಿ (ಎಸ್ಸಿ): ಮತ್ತೆ ಭೀಮಾನಾಯ್‌್ಕ-ನೇಮರಾಜ್‌ ಮಧ್ಯೆ ಫೈಟ್‌?

ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ಉಭಯ ತಾಲೂಕುಗಳನ್ನು ಪ್ರತಿನಿಧಿಸುವ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಭೀಮಾನಾಯ್ಕ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಕಳೆದೆರಡು ಬಾರಿ ಭೀಮಾನಾಯ್‌್ಕ ವಿರುದ್ಧ ಸೋತಿರುವ ಬಿಜೆಪಿಯ ನೇಮರಾಜ್‌ ನಾಯ್ಕ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿ. ಆದರೆ, ಪಕ್ಷದಲ್ಲಿ ಸಮಾಜ ಸೇವಕ ಬಲ್ಲಾಹುಣ್ಸಿ ರಾಮಣ್ಣ ಸೇರಿ ಹಲವರು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಹಾಲಿ ಶಾಸಕ ಭೀಮಾನಾಯ್‌್ಕ ಅವರು ಮತ್ತೊಂದು ಅವಧಿಗೆ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರೂ ಅದಕ್ಕೆ ಪಕ್ಷದ ಕೆಲ ಮುಖಂಡರಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಉಳಿದಂತೆ ಜೆಡಿಎಸ್‌, ಆಪ್‌, ಕೆಆರ್‌ಎಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಜೆಡಿಎಸ್‌ನಿಂದ ಡಾ.ತಿಪ್ಪೇಸ್ವಾಮಿ, ಪರಮೇಶ್ವರಪ್ಪ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಡಾ. ಹನುಮಂತಪ್ಪ ಕಣಕ್ಕಿಳಿಯುವ ಸಾಧ್ಯತೆ ಇದೆ.

ಹೂವಿನ ಹಡಗಲಿ (ಎಸ್ಸಿ): ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ

ಮಲ್ಲಿಗೆ ನಾಡು ಎಂದೇ ಫೇಮಸ್‌ ಆಗಿರುವ ಹೂವಿನಹಡಗಲಿ ಕ್ಷೇತ್ರವನ್ನು ಈ ಹಿಂದೆ ಎಂ.ಪಿ. ಪ್ರಕಾಶ ಹಾಗೂ ಈ.ಟಿ. ಶಂಬುನಾಥ ಅವರಂಥ ಮೌಲ್ಯಯುತ ರಾಜಕಾರಣಿಗಳು ಪ್ರತಿನಿಧಿಸಿದ್ದಾರೆ. 2013ರಿಂದ ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರ ನಾಯ್ಕ ಅವರು ಈ ಕ್ಷೇತ್ರದ ಶಾಸಕರು. ಎರಡು ಬಾರಿ ಗೆದ್ದಿರುವ ಅವರು ಈ ಬಾರಿ ಮತ್ತೆ ಸ್ಪರ್ಧಿಸಿ ಮೂರನೇ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಪರಮೇಶ್ವರ ನಾಯ್ಕ ವಿರುದ್ಧ ಸತತ ಎರಡು ಬಾರಿ ಸೋತಿರುವ ಚಂದ್ರನಾಯ್ಕ ಅವರು ಈ ಬಾರಿ ಮತ್ತೆ ಬಿಜೆಪಿ ಟಿಕೆಟ್‌ ಪಡೆದು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪಕ್ಷದಲ್ಲಿ ಇನ್ನೂ ಒಂಬತ್ತು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ನಿಂದ ಪುತ್ರೇಶ್‌ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು, ಆಮ್‌ ಆದ್ಮಿ ಪಕ್ಷದಿಂದ ಶ್ರೀಧರ್‌ ನಾಯ್ಕ ಟಿಕೆಟ್‌ ಆಕಾಂಕ್ಷಿ. ಕೆಆರ್‌ಎಸ್‌ ಪಕ್ಷ ಕೂಡ ಸ್ಪರ್ಧಿಸುವ ಉತ್ಸಾಹ ತೋರಿಸುತ್ತಿದೆ.

ಕೂಡ್ಲಿಗಿ (ಎಸ್ಟಿ): ಕಾಂಗ್ರೆಸ್‌-ಬಿಜೆಪಿ ಎರಡರಲ್ಲೂ ಟಿಕೆಟ್‌ಗಾಗಿ ಸ್ಪರ್ಧೆ

ಈ ಹಿಂದೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕೂಡ್ಲಿಗಿ ಎಸ್ಟಿಮೀಸಲು ಕ್ಷೇತ್ರದಲ್ಲಿ ಇದೀಗ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಎನ್‌.ವೈ.ಗೋಪಾಲಕೃಷ್ಣ ಈ ಕ್ಷೇತ್ರದ ಶಾಸಕ. ಗೋಪಾಲಕೃಷ್ಣ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸುವ ತಯಾರಿಯಲ್ಲಿದ್ದರೂ ಟಿಕೆಟ್‌ಗಾಗಿ ಪಕ್ಷದಲ್ಲಿ ಸಾಕಷ್ಟುಪೈಪೋಟಿ ಶುರುವಾಗಿದೆ. ಚಿತ್ರನಟ ಬಂಗಾರು ಹನಮಂತು, ಕೋಡಿಹಳ್ಳಿ ಭೀಮಣ್ಣ, ರಾಮದುರ್ಗ ಸೂರ್ಯ ಪಾಪಣ್ಣ, ಗುಂಡಮಣಗು ಎಚ್‌.ಪಿ.ಪ್ರಕಾಶ್‌ ಸೇರಿ ಐದಾರು ಮಂದಿ ತಾವೂ ಆಕಾಂಕ್ಷಿಗಳು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲೂ ಗುಜ್ಜಲ ರಘು, ಲೋಕೇಶ್‌ ವಿ.ನಾಯಕ, ನಾಗಮಣಿ ಜಿಂಕಲ್‌, ಗುರುರಾಜ ನಾಯಕ ಸೇರಿ ಐವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಿಂದ ಈಶಪ್ಪ, ಜಿ.ಕ್ಯಾರಪ್ಪ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಆಪ್‌ನಿಂದ ನಾರಿ ಶ್ರೀನಿವಾಸ್‌ ಆಕಾಂಕ್ಷಿ. ಕೆಆರ್‌ಎಸ್‌ ಪಕ್ಷ ಕೂಡ ಸೂಕ್ತ ಅಭ್ಯರ್ಥಿಗಾಗಿ ಎದುರು ನೋಡುತ್ತಿದೆ.

ಹರಪನಹಳ್ಳಿ: ಕರುಣಾಕರ ರೆಡ್ಡಿಗೆ ಎದುರಾಳಿ ಯಾರು?

ಈ ಹಿಂದೆ ದಾವಣಗೆರೆ, ಬಳಿಕ ಬಳ್ಳಾರಿ, ತರುವಾಯ ವಿಜಯನಗರ ಜಿಲ್ಲೆಗೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿರುವ ಗಾಲಿ ಕರುಣಾಕರ ರೆಡ್ಡಿ ಹಾಲಿ ಶಾಸಕ. ಮಾಜಿ ಸಚಿವ ಜನಾರ್ದನ ರೆಡ್ಡಿ ಸೋದರರೂ ಆಗಿರುವ ಕರುಣಾಕರ ರೆಡ್ಡಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೂ ಗುಜರಾತ್‌ ಮಾದರಿ ಅಂತ ಹೊರಟರೆ ಕೊನೇ ಕ್ಷಣದಲ್ಲಿ ಏನೂ ಆಗಬಹುದು. ಇನ್ನು ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಂ.ಪಿ.ಪ್ರಕಾಶ್‌ ಪುತ್ರಿಯರಾದ ಎಂ.ಪಿ. ಲತಾ, ಎಂ.ಪಿ. ವೀಣಾ, ಐಗೋಳ ಚಿದಾನಂದ, ಅರಸಿಕೆರೆ ಕೊಟ್ರೇಶ ಸೇರಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಧಾರವಾಡ ಮೂಲದ ಪ್ರಬಲ ಸಮಾಜದ ವ್ಯಕ್ತಿಯೊಬ್ಬರನ್ನು ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿ ಚರ್ಚೆಯಲ್ಲಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಜೆಡಿಎಸ್‌ನಿಂದ ಮಾಜಿ ಸಚಿವ ನಬಿಸಾಬ್‌ ಹೆಸರು ಕೇಳಿಬರುತ್ತಿದ್ದರೆ, ಆಮ್‌ ಆದ್ಮಿ ಪಕ್ಷದಿಂದ ನಾಗರಾಜ್‌, ಬಸವರಾಜ್‌ ಆಕಾಂಕ್ಷಿಗಳು.

Ground Report : ದಾವಣಗೆರೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನೇರ ಫೈಟ್: ಟಿಕೆಟ್ ಕಸರತ್ತು ಜೋರು

ಬಲಾಬಲ

  • ಒಟ್ಟು ಕ್ಷೇತ್ರ 5
  • ಬಿಜೆಪಿ 3
  • ಕಾಂಗ್ರೆಸ್‌ 2
  • ಜೆಡಿಎಸ್‌ 0