ನನ್ನ ಸರ್ಕಾರ ಕೆಡವಿದ್ದು ಡ್ರಗ್ಸ್ ಹಣ: ಎಚ್ಡಿಕೆ| ಡ್ರಗ್ಸ್‌ ದಂಧೆಕೋರರಿಂದ ಮೈತ್ರಿ ಸರ್ಕಾರ ಪತನ| ನಾನು ಡ್ರಗ್ಸ್‌ ದಂಧೆಗೆ ಬ್ರೇಕ್‌ ಹಾಕಲು ಯತ್ನಿಸಿದ್ದೆ

ಬೆಂಗಳೂರು(ಸೆ.01): ‘ರಾಜ್ಯದ ಚಿತ್ರರಂಗದಲ್ಲಿ ಡ್ರಗ್ಸ್‌ ದಂಧೆ ನಡೆಯುತ್ತಿದೆ’ ಎಂಬ ಆರೋಪಗಳ ನಡುವೆಯೇ ‘ಹಿಂದಿನ ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದು ಡ್ರಗ್ಸ್‌ ದಂಧೆಕೋರರು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಾಂಬ್‌ ಸಿಡಿಸಿದ್ದಾರೆ.

ಸೋಮವಾರ ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಡ್ರಗ್ಸ್‌ ದಂಧೆಗೆ ಬ್ರೇಕ್‌ ಹಾಕಲು ಪ್ರಯತ್ನಿಸಿದ್ದೆ. ಈ ವೇಳೆ ಕೆಲವರು ಶ್ರೀಲಂಕಾಕ್ಕೆ ಓಡಿ ಹೋದರು’ ಎಂದು ಆರೋಪಿಸಿದರು.

‘ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಡ್ರಗ್ಸ, ಕ್ರಿಕೆಟ್‌ ಬೆಟ್ಟಿಂಗ್‌ ಹಣ ಬಳಕೆ ಆಯ್ತು. ಡಾಸ್ಸ್‌ ಬಾರ್‌ಗಳ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಕ್ರಿಕೆಟ್‌ ಬೆಟ್ಟಿಂಗ್‌, ಪಬ… ಹಣ ಬಳಸಿ ಮೈತ್ರಿ ಸರ್ಕಾರ ಕೆಡವಿದರು’ ಎಂದು ಹೇಳಿದರು.

‘ಇಂತಹ ಕೆಟ್ಟಮಾಫಿಯಾಗಳಿಗೆ ಚಿಕ್ಕ, ಚಿಕ್ಕ ಮಕ್ಕಳು ಬಲಿಯಾಗಬಾರದು. ನನ್ನ ಅವಧಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಮಾಡಬಾರದು’ ಎಂದು ವಿನಂತಿಸಿಕೊಂಡರು. ಮಾಧ್ಯಮಗಳಿಂದಾಗಿ ಎಳೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದೂ ಕಿವಿಮಾತು ಹೇಳಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದೆ, ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ‘ನಾನು ಸಿನಿಮಾ ನಿರ್ಮಾಪಕನಾಗಿದ್ದ ವೇಳೆ ಚಿತ್ರರಂಗದಲ್ಲಿ ಡ್ರಗ್‌ ಮಾಫಿಯಾ ಇರುವ ಬಗ್ಗೆ ನನಗೆ ಗೊತ್ತಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.