ಟೋಂಕ್‌[ಫೆ.24]: ದೇಶದ ವಿವಿಧೆಡೆ ಸಮಾವೇಶ ನಡೆಸುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರವನ್ನು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ (ಮೋದಿ ಹೈ ತೋ ಸಬ್‌ ಮುಮ್ಕಿನ್‌ ಹೈ) ಎಂಬ ಘೋಷಣೆ ಮೊಳಗಿಸಿದ್ದಾರೆ. ಇದುವೇ ಬಿಜೆಪಿಯ ಘೋಷವಾಕ್ಯವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಸ್ಥಾನದ ಟೋಂಕ್‌ನಲ್ಲಿ ಬಿಜೆಪಿ ರಾರ‍ಯಲಿಯನ್ನುದ್ದೇಶಿಸಿ ಶನಿವಾರ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಂಡ ಕೆಲಸಗಳಿಂದಾಗಿ ಹಾಲಿ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದು ಜನರಿಗೂ ಅರ್ಥವಾಗಿದೆ ಎಂದು ಹೇಳಿದರು.

ಕೇವಲ 1 ರು. ಪ್ರೀಮಿಯಂ ಪಾವತಿಸಿ 2 ಲಕ್ಷ ರು. ವಿಮೆ ಪಡೆಯಬಹುದು ಎಂದು ಈ ಹಿಂದೆ ಯಾರಾದರೂ ನಂಬಿದ್ದರೆ? ನಾವು ಅದನ್ನು ಮಾಡಿ ತೋರಿಸಿದ್ದೇವೆ? ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ಇತ್ತೀಚೆಗೆ ಮೇಲ್ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟುಮೀಸಲು ಕಲ್ಪಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ಈ ಮೀಸಲಿನಿಂದ ಇತರರಿಗೆ ತೊಂದರೆ ಆಗದೇ ಇರಲೆಂದು ಒಟ್ಟಾರೆ ಲಭ್ಯ ಸ್ಥಾನಗಳನ್ನು ಶೇ.25ರಷ್ಟುಹೆಚ್ಚಿಸಲಾಗಿದೆ ಎಂದು ತಿಳಿಸಿದರು.