ಮೋದಿ, ಬಿಎಸ್‌ವೈ ಸರ್ಕಾರಕ್ಕೆ ಲೆಫ್ಟ್ ರೈಟ್ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿದ್ದು, ಮೋದಿ ಮತ್ತು ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ನೋಡಿ.
ಬೆಂಗಳೂರು, (ಮೇ.12): ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಜನವರಿ 30ರಂದು ಕೇರಳದಲ್ಲಿ ಮೊದಲು ಸೋಂಕು ಪತ್ತೆಯಾಯಿತು. 2 ತಿಂಗಳಾದ ಮೇಲೆ ಮಾರ್ಚ್ 24ರಂದು ಲಾಕ್ ಡೌನ್ ಘೋಷಿಸಲಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇಂದು (ಮಂಗಳವಾರ) ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಲಾಕ್ ಡೌನ್ ಗೆ ಮೊದಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವಿತ್ತು. ಮೊದಲೇ ಅಂತಾರಾಷ್ಟ್ರೀಯ ವಿಮಾನಯಾನ ಹಾಗೂ ದೇಸಿ ವಿಮಾನಯಾನ ಸಂಪೂರ್ಣ ಬಂದ್ ಮಾಡಿದ್ದರೆ ಈ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಿತ್ತು. ಆದರೆ ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರ ಸರ್ಕಾರದವರು ತಬ್ಲಿಘಿಗಳಿಂದ ರೋಗ ಹೆಚ್ಚಾಯಿತು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ಆರ್ ಎಸ್ ಎಸ್ ನವರ ಹುನ್ನಾರ. ಅಮೇರಿಕಾ, ಇಟಲಿ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದರು. ಮೇಲಾಗಿ ದೆಹಲಿಯಲ್ಲಿ ತಬ್ಲಿಘಿ ಸಮಾವೇಶ ಮಾಡಲು ಅನುಮತಿ ಕೊಟ್ಟವರು ಕೇಂದ್ರ ಸರ್ಕಾರದವರೇ. ತಬ್ಲಿಘಿಗಳಿಂದಲೇ ರೋಗ ಹರಡಿದೆ ಎಂಬುದು ರಾಜಕೀಯ ಪ್ರೇರಿತ, ಕೋಮುವಾದಿಗಳ ಹುನ್ನಾರ ಎಂದು ಕಿಡಿಕಾರಿದರು.
ಪೂರ್ವಸಿದ್ಧತೆ ಮಾಡದೆ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ವಲಸೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕವೊಂದರಲ್ಲೇ 5.50 ಲಕ್ಷ ಜನ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 60,000 ಜನರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಮೇಲಾಗಿ ಅವರಿಂದ ಪ್ರಯಾಣ ವೆಚ್ಚ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಅವರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕೊಡಬೇಕು. ಪಿಎಂ ಕೇರ್ ಫಂಡ್ ಗೆ 35,000 ಕೋಟಿ ರೂ.ಹಣ ಹರಿದು ಬಂದಿದೆ. ಕರ್ನಾಟಕದಿಂದಲೇ ಸಿಎಸ್ ಆರ್ ಫಂಡ್ ನಿಂದ 3000 ಕೋಟಿ ರೂ.ಬಂದಿದೆ. ಅದರಲ್ಲಿ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಬೇಕು ಎಂದರು.
ಕಾರ್ಮಿಕರು ಆರ್ಥಿಕತೆಯ ಬೆನ್ನುಮೂಳೆ ಇದ್ದಂತೆ
ಪ್ರಧಾನಿ ನರೇಂದ್ರ ಮೋದಿಯವರು ದೀಪಹಚ್ಚಿ, ಚಪ್ಪಾಳೆ ತಟ್ಟಿ ಎಂದು ಹೇಳುವ ಬದಲು ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಈ ಕಾರ್ಮಿಕರು ಆರ್ಥಿಕತೆಯ ಬೆನ್ನುಮೂಳೆ ಇದ್ದಂತೆ. ಈ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇನಾದರೂ ಪ್ರಯಾಣ, ವೆಚ್ಚ ಭರಿಸದೇ ಹೋದರೆ ಕಾಂಗ್ರೆಸ್ ಪಕ್ಷವೇ ಆ ವೆಚ್ಚಭರಿಸಬೇಕೆಂದು ಸೋನಿಯಾಗಾಂಧಿಯವರು ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಸರ್ವ ಪಕ್ಷ ಸಭೆಯಲ್ಲಿ ನಾವು ಕೊಟ್ಟ ಯಾವ ಸಲಹೆಯನ್ನೂ ಸರ್ಕಾರ ಪರಿಗಣಿಸಿಲ್ಲ. ಕೊರೋನಾ ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮುಂದೆ 16 ಬೇಡಿಕೆಗಳನ್ನು ಇಟ್ಟಿದ್ದೆವು. ಅದಕ್ಕೂ ಯಡಿಯೂರಪ್ಪ ಅವರು ಪರಿಗಣಿಸಿಲ್ಲ. ನಂತರ ಕಾರ್ಮಿಕರ ಕಷ್ಟಗಳ ಬಗ್ಗೆ ಸುದೀರ್ಘ ಪತ್ರ ಬರೆದೆ. ಅದಕ್ಕೂ ಮುಖ್ಯಮಂತ್ರಿ ಸ್ಪಂದಿಸಿಲ್ಲ. ಸರ್ವಪಕ್ಷಗಳ ಸಭೆ ಮಾಡಿ ಮುಖ್ಯಮಂತ್ರಿಗಳ ಮುಂದೆ 24 ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದೆವಾದರೂ ಯಡಿಯೂರಪ್ಪ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಿದ್ದು ವಿರೋಧ
ಕಾರ್ಮಿಕ ಇಲಾಖೆ ಹಾಗು ಬಿಬಿಎಂಪಿಯಿಂದ ಆಹಾರ ಕಿಟ್ ವಿತರಿಸಿರುವುದು ಕೇವಲ ಶೇಕಡಾ 10ರಷ್ಟು ಮಾತ್ರ. ಉಳಿದೆಲ್ಲ ಆಹಾರ ಕಿಟ್ ಗಳನ್ನು ವಿವಿಧ ಶಾಸಕರು ಎನ್ ಜಿ ಓ ಗಳಿಗೆ ಹಂಚಿದ್ದರು. ನಾವು ಹಾಗೆ ಮಾಡದೇ ಇದ್ದಿದ್ದರೆ ರಾಜ್ಯಾದ್ಯಂತ ಹಾಹಾಕಾರ ಆಗಿ ಜನ ಹಸಿವಿನಿಂದ ಸಾಯುತ್ತಿದ್ದರು. ಈಗ ಉರಿಯುವುದರ ಮೇಲೆ ಉಪ್ಪು ಹಾಕುವಂತೆ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಹೊರಟಿದ್ದಾರೆ. ರೈತರು ಬೆಳೆದ ತರಕಾರಿ, ಆಹಾರ ಧಾನ್ಯಗಳನ್ನು ಯಾರೂ ಖರೀದಿಸುವವರೇ ಇಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಚಟುವಟಿಕೆ ಕ್ರಿಯಾಶೀಲವಾಗಬೇಕಾದರೆ ಜನರ ಕೈಯಲ್ಲಿ ದುಡ್ಡಿರಬೇಕು. ಕೊಳ್ಳುವ ಶಕ್ತಿ ಇರಬೇಕು ಎಂದು ತಿಳಿಸಿದರು.