ರಕ್ತವಿರುವ ತನಕ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ಹೋರಾಟ| ಮೋದಿ, ಶಾ ಒಂದೇ ನಾಣ್ಯದ ಎರಡು ಮುಖಗಳು

ಚಾಮರಾಜನಗರ[ಮಾ.08]: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ ಎಂದು ಟೀಕಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಳ್ಳು ಭರವಸೆಗಳನ್ನು ನೀಡಿ ಆಧಿಕಾರಕ್ಕೆ ಬಂದ ಮೋದಿ ಇದೀಗ ಜನರು ಮರೆಯಬೇಕು ಎಂದು ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಶನಿವಾರ ಎನ್‌ಪಿಆರ್‌, ಸಿಎಎ, ಎನ್‌ಆರ್‌ಸಿ ವಿರೋಧಿಸಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ‘ಸಂವಿಧಾನ ಸಂರಕ್ಷಣಾ ಸಮಾವೇಶ’ದಲ್ಲಿ ಮಾತನಾಡಿದ ಅವರು, ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು. ಅಶಾಂತಿ ಇದ್ದರೆ ಎಲ್ಲರೂ ಭರವಸೆಯನ್ನು ಮರೆತು ಹೋಗುತ್ತಾರೆ ಎಂದು ಮೋದಿ ಮತ್ತು ಅಮಿತ್‌ ಶಾ ಪುಲ್ವಾಮಾ ವಿಷಯ, ಕಾಶ್ಮೀರ ವಿಷಯ ತಂದರು. ಈಗ ಪೌರತ್ವ ವಿಚಾರವನ್ನು ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಪೌರತ್ವ ಕಾಯ್ದೆ ಒಂದು ಬಾರಿ ಅಲ್ಲ, ಏಳು ಬಾರಿ ತಿದ್ದುಪಡಿಯಾಗಿದೆ ಏನೂ ಗಲಾಟೆ ಹಾಗಿಲ್ಲ, ದೇಶದಲ್ಲಿರುವ ಬಡವರಿಗೆ ದೀನದಲಿತರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ತಿದ್ದುಪಡಿ ಮಾಡಿದ್ದರಿಂದ ಜನ ವಿರೋಧಿಸುತ್ತಿದ್ದಾರೆ. ಬಡವರಿಗೆ ದೀನದಲಿತರಿಗೆ ತೊಂದರೆಯಾಗುತ್ತಿರುವುದರಿಂದ ಅದರ ವಿರುದ್ದ ಹೋರಾಟ ಮಾಡುತ್ತೇವೆ. ದಯಮಾಡಿ ಜಾತಿ, ಧರ್ಮ ಮರೆದು ಒಟ್ಟಾಗಿ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಬಿಜೆಪಿ ದೇಶದಲ್ಲಿ ಆಡಳಿತಕ್ಕೆ ಬಂದಾಗ ದೇಶದ ರಕ್ಷಣೆ, ದೇಶ ಪ್ರೇಮದ ಬಗ್ಗೆ ಮಾತನಾಡುತ್ತಾರೆ. ನಾವು ದೇಶದ್ರೋಹಿಗಳಾ? ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯಕ್ಕಾಗಿ ಕೊನೆ ರಕ್ತದ ಹನಿ ಇರುವವರೆಗೂ ಹೋರಾಟ ಮಾಡಿ ಸ್ವಾತಂತ್ರ್ಯ ಉಳಿಸುತ್ತೇನೆ ಎಂದು ಘೋಷಿಸಿದರು.

ಸಂವಿಧಾನದಿಂದ ಅನುಕೂಲವಾಗಬೇಕಾದರೆ ಆಡಳಿತ ನಡೆಸುವವರು ಒಳ್ಳೆಯವರಿರಬೇಕು. ಇಲ್ಲದಿದ್ದರೆ ಸಂವಿಧಾನ ಎಷ್ಟೇ ಒಳ್ಳೇಯದಿದ್ದರೂ ಆಡಳಿತ ನಡೆಸುವವರು ಕೆಟ್ಟವರಿದ್ದರೆ ಸಂವಿಧಾನವು ಜನರ ದೃಷ್ಟಿಯಲ್ಲಿ ಕೆಟ್ಟದಾಗಿ ಕಾಣುತ್ತದೆ. ಮೋದಿಗೆ ಎಷ್ಟೇ ಒಳ್ಳೇಯ ಸಂವಿಧಾನ ಕೊಟ್ಟರೂ ಉತ್ತಮ ಆಡಳಿತ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.