ಬೆಂಗಳೂರು(ಡಿ.21): ಸಿದ್ದರಾಮಯ್ಯ ಅವರಿಗೆ ಪ್ರಾದೇಶಿಕ ಪಕ್ಷ ಕಟ್ಟಲು ಸವಾಲು ಹಾಕಿರುವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪ್ರಾದೇಶಿಕ ಪಕ್ಷದ ಮೇಲೆ ನಿಜವಾದ ಪ್ರೀತಿ ಇದ್ದರೆ 1989ರಲ್ಲಿ ಎಚ್‌.ಡಿ. ದೇವೇಗೌಡರು ಕಟ್ಟಿದ್ದ ಪ್ರಾದೇಶಿಕ ಪಕ್ಷ ಸಮಾಜವಾದಿ ಜನತಾ ಪಕ್ಷವನ್ನು ಮತ್ತೆ ಕಟ್ಟಿತಮ್ಮ ಶಕ್ತಿ ಪ್ರದರ್ಶಿಸಲಿ ಎಂದು ಮಾಜಿ ವಿಧಾನಪರಿಷತ್‌ ಸದಸ್ಯ ರಮೇಶ್‌ ಬಾಬು ಸವಾಲು ಹಾಕಿದ್ದಾರೆ. 

2018ರಲ್ಲಿ 37 ಸ್ಥಾನ ಪಡೆದ ಜೆಡಿಎಸ್‌ ಮುಖ್ಯಮಂತ್ರಿ ಸ್ಥಾನದ ಬದಲು ಡಿಸಿಎಂ ಸ್ಥಾನ ಪಡೆದಿದ್ದರೆ ಸರ್ಕಾರ 5 ವರ್ಷ ಪೂರೈಸಬಹುದಿತ್ತು. ಈ ನಿಟ್ಟಿನಲ್ಲಿ ಪಕ್ಷದೊಳಗೆ ಅಥವಾ ಶಾಸಕರೊಂದಿಗೆ ಚರ್ಚೆಗೆ ಅಂದು ಅವಕಾಶ ನೀಡಲೇ ಇಲ್ಲ. ಮುಖ್ಯಮಂತ್ರಿಯಾಗಿ ಜೆಡಿಎಸ್‌ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲಾಗದ ಕುಮಾರಸ್ವಾಮಿಗೆ ಕಾಂಗ್ರೆಸ್‌ ಪಕ್ಷ ಟೀಕಿಸುವ ನೈತಿಕ ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

'ಇದುವರೆಗಿನ ರಾಜಕಾರಣ ತಾತ್ಕಾಲಿಕ.. ನನ್ನ ಅಸಲಿ ಪಾಲಿಟಿಕ್ಸ್ 2023ಕ್ಕೆ ಶುರು'

ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾವಣಾ ಪ್ರಚಾರ ಸಮಯದ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ರಾಜ್ಯದ ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಟೀಕಿಸುವ ಮೂಲಕ ತಮ್ಮ ರಾಜಕೀಯದ ಅಸ್ತಿತ್ವಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಾಜಿ ಸಚಿವ, ಗುಬ್ಬಿ ಶಾಸಕ ಶ್ರೀನಿವಾಸ್‌ ಅವರು ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದ್ದು ಸತ್ಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅಣಿಯಲು ಪ್ರಯತ್ನಿಸಿದ್ದನ್ನು ಮುಚ್ಚಿಡುವುದೇಕೆ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.