ಮಾಜಿ ಮುಖ್ಯ​ಮಂತ್ರಿ ಜಗ​ದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಇದೀಗ ಸೋದರ, ವಿಧಾ​ನ ಪರಿ​ಷತ್‌ ಸದಸ್ಯ ಪ್ರದೀಪ್‌ ಶೆಟ್ಟರ್‌ ಕೂಡ ಸ್ವಪಕ್ಷ ಬಿಜೆಪಿ ಮುಖಂಡರ ವಿರುದ್ಧ ಬಹಿ​ರಂಗ ಅಸ​ಮಾ​ಧಾನ ಹೊರ​ಹಾ​ಕಿ​ದ್ದಾ​ರೆ.

ಹುಬ್ಬಳ್ಳಿ (ಸೆ.04): ಮಾಜಿ ಮುಖ್ಯ​ಮಂತ್ರಿ ಜಗ​ದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಇದೀಗ ಸೋದರ, ವಿಧಾ​ನ ಪರಿ​ಷತ್‌ ಸದಸ್ಯ ಪ್ರದೀಪ್‌ ಶೆಟ್ಟರ್‌ ಕೂಡ ಸ್ವಪಕ್ಷ ಬಿಜೆಪಿ ಮುಖಂಡರ ವಿರುದ್ಧ ಬಹಿ​ರಂಗ ಅಸ​ಮಾ​ಧಾನ ಹೊರ​ಹಾ​ಕಿ​ದ್ದಾ​ರೆ. ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ನಾಯಕರ ಕಡೆಗಣನೆ ಆಗುತ್ತಿದೆ. ವ್ಯವಸ್ಥಿತವಾಗಿ ಅವ​ರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಪಕ್ಷ ನಿಷ್ಠೆ ಇಲ್ಲದೆ ಬಕೆಟ್‌ ಹಿಡಿ​ಯು​ವ​ವ​ರಿಗೆ ಮನ್ನಣೆ ನೀಡ​ಲಾ​ಗು​ತ್ತಿದೆ ಎಂದು ಕಿಡಿ​ಕಾ​ರಿ​ದ್ದಾ​ರೆ.

ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ತೆರಳಿದ್ದರೂ ಬಿಜೆಪಿಯಲ್ಲೇ ಉಳಿದಿದ್ದ ಅವರ ಸಹೋದರ ಪ್ರದೀಪ್‌ ಶೆಟ್ಟರ್‌ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷ​ದಲ್ಲಿ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ? ಅದರ ಪರಿಣಾಮವನ್ನು ವಿಧಾನಸಭೆ ಚುನಾವಣೆಯಲ್ಲಿ ನೋಡಿದ್ದೇವೆ. ಸಾಲು ಸಾಲು ಲಿಂಗಾಯತ ಮುಖಂಡರು ಪಕ್ಷ ಬಿಟ್ಟು ಹೋಗುವ ತಯಾರಿ ನಡೆಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ, ಲಿಂಗಾಯತರಿಗೆ ನಾಯಕತ್ವ ಕೊಡದೇ ಹೋದ​ರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವುದು ಕಷ್ಟಎಂದರು.

ಪಿಎಂ, ಸಿಎಂಗೆ ಭದ್ರತೆ ನೀಡಿದ್ದ ಸ್ಫೋಟಕ ಪತ್ತೆದಾರಿ ದಾವಣಗೆರೆ ಪೊಲೀಸ್‌ ಶ್ವಾನ ಸೌಮ್ಯ ಇನ್ನಿಲ್ಲ!

ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣವಿಲ್ಲದೆ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸಲಾಯಿತು. ಕೊಪ್ಪಳದ ಸಂಗಣ್ಣ ಕರಡಿ ಅವರಿಗೆ ಕಾಡಿಸಿ ಕಾಡಿಸಿ ಕೊನೆಗೆ ಅವರ ಸೊಸೆಗೆ ಟಿಕೆಟ್‌ ಕೊಟ್ಟರು. ನವಲಗುಂದ, ಕಲಘಟಗಿಯಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

ಮಾಜಿ ಸಚಿವರಾದ ವಿ.ಸೋಮಣ್ಣ, ಮಾಧುಸ್ವಾಮಿ, ಶಂಕರ ಪಾಟೀಲ ಮುನೇನಕೊಪ್ಪ, ರೇಣುಕಾಚಾರ್ಯ, ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ ಹೀಗೆ ಸಾಲು ಸಾಲು ಲಿಂಗಾಯತ ಮುಖಂಡರು ಪಕ್ಷ ಬಿಟ್ಟು ಹೊರಟಿದ್ದಾರೆ ಎಂಬೆಲ್ಲ ಸುದ್ದಿ ಮಾಧ್ಯಮಗಳಲ್ಲಿ ಪ್ರತಿನಿತ್ಯ ಬರುತ್ತಿದೆ. ಆದರೂ ಪಕ್ಷದ ಮುಖಂಡರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಉಸ್ತುವಾರಿಗಳನ್ನು ಬದಲಿಸಿ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಕರ್ನಾಟಕದಲ್ಲಿ ಲಿಂಗಾಯತರಿಗೆ ಆದ್ಯತೆ ನೀಡದಿದ್ದಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ. ರಾಜ್ಯದಲ್ಲಿ ಪಕ್ಷಕ್ಕೆ ನಾಯಕರೇ ಇಲ್ಲದಂತಾಗಿದೆ. ಈಗಿನ ಉಸ್ತುವಾರಿಗಳನ್ನೆಲ್ಲ ತೆಗೆದು ಆ ಸ್ಥಾನಕ್ಕೆ ಲಿಂಗಾಯತರನ್ನೇ ನೇಮಿಸ​ಬೇಕು. ಯಡಿಯೂರಪ್ಪ, ಶೆಟ್ಟರ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದರು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಬಹಿರಂಗವಾಗಿ ಟೀಕಿಸಿದರು.

ಬಿ.ಎಲ್‌.ಸಂತೋಷ್‌ ಇತ್ತೀ​ಚೆಗೆ ಕರೆದಿದ್ದ ಸಭೆಗೆ ನನಗೂ ಆಹ್ವಾನ ಇತ್ತು. ಆದರೆ ವೈಯಕ್ತಿಕ ಕಾರಣದಿಂದಾಗಿ ಆ ಸಭೆಗೆ ಹೋಗಲಿಲ್ಲ. ಸಭೆಗೆ ಯಡಿಯೂರಪ್ಪ ಅವರಿಗೆ ಆಹ್ವಾನ ಇರಲಿಲ್ಲ ಎಂಬುದನ್ನು ಮಾಧ್ಯಮಗಳಿಂದ ತಿಳಿದಿದ್ದೇನೆ. ಈ ರೀತಿ ಮಾಡುವುದು ಸರಿಯಲ್ಲ. ಯಡಿಯೂರಪ್ಪ ನಮ್ಮ ಬಹುದೊಡ್ಡ ನಾಯಕ ಎಂದರು.

ನನಗೇ ಆಹ್ವಾನವಿರಲಿಲ್ಲ: ಮೊನ್ನೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆ​ಯಾದ​ವ​ರಿಗೆ ಪಕ್ಷದಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸ್ಥಳೀಯ ಸಂಸ್ಥೆಗಳಿಂದ ನಾನು ಆಯ್ಕೆಯಾದವನಾದರೂ ನನಗೆ ಆಹ್ವಾನವಿರಲಿಲ್ಲ. ಇದು ಕಡೆಗಣನೆ ಅಲ್ಲವೇ? ಈ ವಿಚಾ​ರ​ವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ

ನನ್ನ ಸಹೋದರ ಬಿಜೆಪಿ ಬಿಟ್ಟು ಹೋದರೂ ನಾನು ಪಕ್ಷದಲ್ಲೇ ಉಳಿದಿದ್ದೇನೆ. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಕಡೆಗಣಿಸುತ್ತಾರೆಂದು ನಾನೇನು ಪಕ್ಷ ಬಿಡುವುದಿಲ್ಲ. ಇಲ್ಲೇ ಇದ್ದು ಈ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಆದರೆ ಕಡೆಗಣನೆಯಿಂದ ಪಕ್ಷಕ್ಕೆ ಹೊಡೆತ ಬೀಳುವುದಂತು ಗ್ಯಾರಂಟಿ. ಇದನ್ನು ಸರಿಪಡಿಸಬೇಕು ಎಂದು ಪ್ರದೀಪ್‌ ಶೆಟ್ಟರ್‌ ಹೈಕಮಾಂಡ್‌ಗೆ ಕಿವಿಮಾತು ಹೇಳಿದರು.