ನಮ್ಮದು ವಿಎಚ್‌ಪಿ, ಬಜರಂಗದಳ, ಆರ್‌ಎಸ್‌ಎಸ್ ಸರ್ಕಾರವಲ್ಲ, ಬಿಜೆಪಿ ಗೋರ್ಮೆಂಟ್: ವಿಶ್ವನಾಥ್
ರಾಜ್ಯದಲ್ಲಿ ಆರ್‌ಎಸ್‌ಎಸ್, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೀಡುತ್ತಿರುವ ಹೇಳಿಕೆಯೇ ಇಂತಹ ಭಾವೋದ್ವೇಗದ ಕೃತ್ಯಕ್ಕೆ ಕಾರಣ: ಎಚ್. ವಿಶ್ವನಾಥ್
ಮೈಸೂರು(ಜು.30): ನಮ್ಮದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಆರ್‌ಎಸ್‌ಎಸ್‌ನ ಸರ್ಕಾರವಲ್ಲ. ನಮ್ಮದು ಬಿಜೆಪಿ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಕುರಿತು ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಹೇಳಿಕೆ ಗಮನಿಸಿದ್ದೇನೆ. ರಾಜ್ಯದಲ್ಲಿ ಆರ್‌ಎಸ್‌ಎಸ್, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೀಡುತ್ತಿರುವ ಹೇಳಿಕೆಯೇ ಇಂತಹ ಭಾವೋದ್ವೇಗದ ಕೃತ್ಯಕ್ಕೆ ಕಾರಣವಾಗುತ್ತಿದೆ ಎಂದರು.
ಹೀಗಾಗಿ, ಇವುಗಳ ಮುಖ್ಯಸ್ಥರು ಸಮಾಜದ ಶಾಂತಿ ಕಾಪಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ. ಇಲ್ಲಿ ಸಾವನ್ನಪ್ಪುತ್ತಿರುವವರು ಎಲ್ಲರೂ ಹಿಂದುಳಿದ ವರ್ಗದವರೇ ಆಗಿದ್ದಾರೆ. ಹೀಗಾಗಿ ಯಾರ ಜೀವದೊಂದಿಗೂ ಚೆಲ್ಲಾಟ ಆಡುವ ಕೆಲಸ ಯಾರು ಮಾಡಬಾರದು ಎಂದು ಅವರು ಹೇಳಿದರು.
ಸಿದ್ದರಾಮೋತ್ಸವದ ಬದಲು ಕಾಂಗ್ರೆಸ್ ಪಕ್ಷದ ಉತ್ಸವ ಆಗಬೇಕಿತ್ತು: ವಿಶ್ವನಾಥ್
ರಾಜ್ಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದರಿಂದಲೇ ಇಂತಹ ಘಟನೆ ನಡೆಯುತ್ತಿದೆ. ಯಾರದೇ ಸಾವಿನಲ್ಲೂ ಧರ್ಮ ಹುಡುಕಬಾರದು. ಮುಸ್ಲಿಂ, ಹಿಂದೂ ಎಲ್ಲರ ಸಾವು ಸಹ ಸಾವೇ ಆಗಿದೆ. ಹೀಗಾಗಿ, ಸಾವಿನಲ್ಲಿ ಧರ್ಮ ಹುಡುಕುವ ಕೆಲಸ ಯಾರು ಮಾಡಬಾರದು ಎಂದರು.
ಎಲ್ಲರಿಗೂ ಪೊಲೀಸ್ ಭದ್ರತೆ, ಗನ್ ಕೊಡಲು ಸಾಧ್ಯವಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅನುಭವ ಇಲ್ಲದವರಿಗೆ ಅಧಿಕಾರ ಸಿಕ್ಕರೇ ಇಂತಹ ಹೇಳಿಕೆಗಳನ್ನೇ ನಿರೀಕ್ಷಿಸಬೇಕಾಗುತ್ತದೆ ಎಂದರು.