ಬೆಂಗಳೂರು, (ಜೂನ್. 14):  ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಕೆ. ಎಸ್. ಈಶ್ವರಪ್ಪ, ಸೋಮವಾರ ಸಂಜೆ 4ಗಂಟೆ ಕೋರ್ ಕಮಿಟಿ ಸಭೆ ನಡೆಯಲಿದೆ. ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. 

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಪಕ್ಷಕ್ಕೆ ಬಂದು ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದವರಿಗೆ ಟಿಕೆಟ್ ನೀಡಬೇಕು. ಪಕ್ಷಕ್ಕಾಗಿ ದುಡಿದವರಿಗೂ ಆದ್ಯತೆ ನೀಡಬೇಕಾಗುತ್ತದೆ ಎಂದರು. 

ವಿಧಾನ ಪರಿಷತ್ ಚುನಾವಣೆ ವೇಳೆ ಅನುಸರಿಸಬೇಕಾದ ಮಾರ್ಗಸೂಚಿ ಬಿಡುಗಡೆ

ಅಭ್ಯರ್ಥಿಗಳ ಆಯ್ಕೆ ಪಕ್ಷಕ್ಕಾಗಿ ದುಡಿದವರಿಗೆ, ಸರ್ಕಾರ ಬರಲು ಸಹಕಾರ ನೀಡಿದವರಿಗೆ ಸಮಾಧಾನ ತರಲಿದೆ ಎಂದು ಅಂದುಕೊಂಡಿದ್ದೇವೆ. ಎಲ್ಲರಿಗೂ ಆದ್ಯತೆ ನೀಡಲಾಗುತ್ತದೆ ಮುಂದಿನ ಮೂರು ವರ್ಷವನ್ನು ಸರ್ಕಾರ ಪೂರ್ಣಗೊಳಿಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆಯಿಂದ ಒಟ್ಟು 7 ಸದಸ್ಯರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದ್ದು, ಜೂನ್ 18 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ.

 ವಿಧಾನಸಭೆಯಲ್ಲಿ ಬಿಜೆಪಿ 116 ಸದಸ್ಯ ಬಲವನ್ನು ಹೊಂದಿದ್ದು, ನಾಲ್ವರು ಸದಸ್ಯರು ಆಯ್ಕೆಯಾಗಲಿದ್ದಾರೆ. ಇನ್ನು ಕಾಂಗ್ರೆಸ್ 2 ಮತ್ತು ಜೆಡಿಎಸ್ ಒಬ್ಬರು ಪರಿಷತ್‌ಗೆ ಆಯ್ಕೆಯಾಗಲಿದೆ.

ನಾಲ್ಕು ಸ್ಥಾನ 40 ಆಕಾಂಕ್ಷಿಗಳು
 ನಾಲ್ಕು ಸ್ಥಾನಗಳಿಗೆ ಬಿಜೆಪಿ 40 ಜನರು ಟಿಕೆಟ್ ಆಕಾಂಕ್ಷಿಗಳಿದ್ದು, ಸೋಮವಾರ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಹೆಸರುಗಳನ್ನು ಫೈನ್ ಮಾಡಿ ಹೈಕಮಾಂಡ್‌ಗೆ ರವಾನಿಸುವ ಸಾಧ್ಯತೆಗಳಿವೆ.  ಇನ್ನು ರಾಜ್ಯ ಕಮಿಟಿ ಕಳುಹಿಸಿದ ಪಟ್ಟಿ ಹೈಕಮಾಂಡ್ ಓಕೆ ಅನ್ನುತ್ತಾ ಅಥವಾ ರಾಜ್ಯಸಭೆಗೆ ಘೋಷಿಸಿದಂತೆ ಪರಿಷತ್‌ ಎಲೆಕ್ಷನ್‌ಗೂ ಅಚ್ಚರಿ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.