ಬೆಂಗಳೂರು ,(ಜೂ13): ಕೊರೋನಾ ಭೀತಿ ಹಿನ್ನೆಲೆಯಲ್ಲಿ 7 ಸ್ಥಾನಗಳಿಗೆ ನಡೆಯಲಿರುವ ವಿಧಾನಪರಿಷತ್ ಚುನಾವಣೆ ವೇಳೆ ಅನುಸರಿಸಬೇಕಾದ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಇಂದು (ಶನಿವಾರ) ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾರ್ಗಸೂಚಿಯನ್ನ ಹೊರಡಿಸಿದ್ದಾರೆ. 

ಚುನಾವಣೆ ವೇಳೆ ಚುನಾವಣಾ ಅಧಿಕಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಕ್ರಮ ವಹಿಸಬೇಕು. ಚುನಾವಣಾ ಪ್ರಕ್ರಿಯೆ ವೇಳೆ ಚುನಾವಣಾ ಸಿಬ್ಬಂದಿ, ಮತದಾರರು, ಏಜೆಂಟ್‍ಗಳು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಧಾರಣೆ ಮಾಡಬೇಕು ಎಂದು ತಿಳಿಸಲಾಗಿದೆ.

ವಿಧಾನಪರಿಷ್ ಚುನಾವಣೆ ದಿನಾಂಕ ಪ್ರಕಟ: ಗರಿಗೆದರಿದ ರಾಜ್ಯ ರಾಜಕಾರಣ

ಚುನಾವಣಾಧಿಕಾರಿಯಿಂದ ಅನುಮತಿ ಪಡೆದ ಅಭ್ಯರ್ಥಿಗಳು, ಮತದಾರರು, ಏಜೆಂಟ್‍ಗಳು, ಚುನಾವಣಾ ಸಿಬ್ಬಂದಿ ಕಂಟೇನ್ಮೆಂಟ್ ವಲಯದಲ್ಲಿದ್ದರೆ ಅವರಿಗೆ ಚುನಾವಣೆ ಉದ್ದೇಶಕ್ಕಾಗಿ ಮಾತ್ರ ಅನಿರ್ಬಂಧಿತ ಓಡಾಟಕ್ಕೆ ಅನುಮತಿ ನೀಡಬಹುದಾಗಿದೆ.

ಅದೇ ರೀತಿ 65 ವರ್ಷ ಮೇಲ್ಪಟ್ಟ ಮತದಾರರು, ಅಭ್ಯರ್ಥಿಗಳು, ಚುನಾವಣಾ ಸಿಬ್ಬಂದಿಗೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಕ್ವಾರಂಟೈನ್‌ನಲ್ಲಿರುವ ಶಾಸಕರ ವಿವರವನ್ನು ನೀಡಬೇಕು. ಅವರ ಪ್ರಯಾಣ ವೇಳಾಪಟ್ಟಿಯನ್ನು ನೀಡಬೇಕು. ಜೊತೆಗೆ ಎಲ್ಲಾ ಅಭ್ಯರ್ಥಿಗಳು, ಮತದಾರರ ಸಂಚಾರದ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಲಾಗಿದೆ.

7 ಸ್ಥಾನಗಳಿಗೆ ಎಲೆಕ್ಷನ್
ನಸೀರ್ ಅಹ್ಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಹೆಚ್.ಎಂ. ರೇವಣ್ಣ, ಟಿ.ಎ. ಸರವಣ, ಡಿ.ಯು. ಮಲ್ಲಿಕಾರ್ಜುನ್, ಎನ್.ಎಸ್. ಬೋಸರಾಜು ಅವರ ಪರಿಷತ್ ಸದಸ್ಯತ್ವವ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಆ ಸ್ಥಾನಗಳ ಭರ್ತಿಗೆ ಚುನಾವಣೆಯಾಗುತ್ತಿದೆ.

ಈ ಏಳು ಸ್ಥಾನಗಳ ಪೈಕಿ ಸದ್ಯದ ವಿಧಾನಸಭೆ ಬಲಾಬಲದ ಆಧಾರದ ಮೇಲೆ ಬಿಜೆಪಿಗೆ 4 ಸ್ಥಾನ ಸಿಗುವುದು ಖಚಿತವಾಗಿದೆ. ಕಾಂಗ್ರೆಸ್​ಗೆ 2 ಸ್ಥಾನ ಸಿಗಬಹುದು. ಜೆಡಿಎಸ್​ಗೆ ಒಂದು ಸ್ಥಾನ ಸಿಗಲಿದೆ.  ಇನ್ನು ನಾಮಪತ್ರ ಸಲ್ಲಿಕೆ ಮಾಡಲು ಇದೇ ಜೂನ್ 18 ಕೊನೆಯ ದಿನವಾಗಿದೆ

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"