ಗೆದ್ದ 25ರಲ್ಲಿ 10 ಮಂದಿಗೆ ಕುಟುಂಬದ ನಂಟು - HDD, ಡಿಕೆಶಿ, ಶೆಟ್ಟರ್ ಬಂಧುಗಳ ಜಯ ಮೇಲ್ಮನೆಯಲ್ಲಿ ಮುಂದುವರಿದ ಕುಟುಂಬ ರಾಜಕಾರಣ ದೇವೇಗೌಡ, ಡಿಕೆಶಿ, ಶೆಟ್ಟರ್ ಬಂಧುಗಳು ಜಯಭೇರಿ
ಸುವರ್ಣಸೌಧ (ಡಿ.15): ಚುನಾವಣೆ (Election) ನಡೆದ ವಿಧಾನ ಪರಿಷತ್ತಿನ 25 ಸ್ಥಾನಗಳ ಪೈಕಿ ರಾಜಕಾರಣಿಗಳ (Politics) ಸಂಬಂಧಿಕರೇ ಹತ್ತು ಮಂದಿ ಆಯ್ಕೆಯಾಗಿದ್ದು, ರಾಜ್ಯದಲ್ಲಿ ಕುಟುಂಬ ರಾಜಕಾರಣ ಮುಂದುವರಿದಂತಾಗಿದೆ. ಕಾಂಗ್ರೆಸ್‌ನಿಂದ (Congress) ಐದು, ಬಿಜೆಪಿಯಿಂದ ಮೂರು, ಜೆಡಿಎಸ್‌ನಿಂದ (JDS) ಒಬ್ಬರು, ಒಬ್ಬ ಪಕ್ಷೇತರರಿಗೆ ಕುಟುಂಬ ರಾಜಕಾರಣದ ಹಿನ್ನೆಲೆ ಇದೆ. ಕಾಂಗ್ರೆಸ್ (Congress) ಪೈಕಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಪುತ್ರ ಆರ್. ರಾಜೇಂದ್ರ ತುಮಕೂರು (Tumakuru) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸಹೋದರ ಸಂಬಂಧಿ ಎಸ್. ರವಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜು ಹಟ್ಟಿಹೊಳಿ ಅವರು ಬೆಳಗಾವಿ-ಚಿಕ್ಕೋಡಿ ಕ್ಷೇತ್ರದಿಂದ, ಮಾಜಿ ಸಚಿವ ಎಂ.ಬಿ. ಪಾಟೀಲ್ ಸಹೋದರ ಸುನೀಲ್‌ಗೌಡ ಪಾಟೀಲ್ ವಿಜಯಪುರ ಕ್ಷೇತ್ರದಿಂದ ಹಾಗೂ ಶಾಸಕ ಅಮರೇಗೌಡ ಪಾಟೀಲ್ ಸಹೋದರ ಶರಣಗೌಡ ಪಾಟೀಲ್ ರಾಯಚೂರು-ಕೊಪ್ಪಳ ಕ್ಷೇತ್ರದಿಂದ ಜಯ ಗಳಿಸಿದ್ದಾರೆ.
ಬಿಜೆಪಿಯಿಂದ (BJP) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಹುಬ್ಬಳ್ಳಿ - ಧಾರವಾಡ ಕ್ಷೇತ್ರದಿಂದ, ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪುತ್ರ ಡಿ.ಎಸ್. ಅರುಣ್ ಶಿವಮೊಗ್ಗ (Shivamogga) ಹಾಗೂ ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ ಮಡಿಕೇರಿ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಜೆಡಿಎಸ್ ಪಕ್ಷದಿಂದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ (HD Devegowda) ಮೊಮ್ಮಗ ಹಾಗೂ ಎಚ್.ಡಿ. ರೇವಣ್ಣ (HD Revanna) ಅವರ ಪುತ್ರ ಸೂರಜ್ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಈ ಮೂಲಕ ಸಂಸತ್, ವಿಧಾನಸಭೆ, ವಿಧಾನಪರಿಷತ್ ಮೂರು ಸದನಗಳಲ್ಲೂ ದೇವೇಗೌಡರ ಕುಟುಂಬದ ಕುಡಿಗಳು ಸದಸ್ಯರಾಗಿದ್ದಾರೆ.
ಇನ್ನು ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಬೆಳಗಾವಿ-ಚಿಕ್ಕೋಡಿ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಬಿಜೆಪಿ ಮುಖಂಡರೂ ಆಗಿರುವ ಮಾಜಿ ಸಚಿವ ಎ. ಮಂಜು ಪುತ್ರ ಮಂಥರ್‌ಗೌಡ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದಾರೆ.
ಗೆದ್ದವರು : ರಾಜೇಂದ್ರ, ಎಸ್ ರವಿ, ಚನ್ನರಾಜು ಹಟ್ಟಿಹೊಳಿ, ಸುನೀಲ್ ಗೌಡ, ಶರಣಗೌಡ ಪಾಟೀಲ್, ಪ್ರದೀಪ್ ಶೆಟ್ಟರ್, ಅರುಣ್, ಸುಜಾ ಕುಶಾಲಪ್ಪ, ಸೂರಜ್ ರೇವಣ್ಣ, ಲಖನ್ ಜಾರಕಿಹೊಳಿ
ಬಿದ್ದವರು, ಮಂಥರ್ ಗೌಡ
ವಿಧಾನಸಭಾ ಚುನಾವಣಾ ಚಿತ್ರಣ :
ತೀವ್ರ ಕುತೂಹಲ ಮೂಡಿಸಿದ್ದ 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ (Karnataka MLC Election Result) ಇಂದು (ಡಿ.14) ಪ್ರಕರಣವಾಗಿದೆ. 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ(BJP) ವಿಧಾನ ಪರಿಷತ್ತಿನಲ್ಲಿ ಬಹುಮತ ಪಡೆದುಕೊಂಡಿದ್ದು,.ಆಡಳಿತಾರೂಢ ಬಿಜೆಪಿಗೆ ಸಮಬಲ ಹೋರಾಟ ನೀಡಿದ ಕಾಂಗ್ರೆಸ್(Congress) 11ರಲ್ಲಿ ಗೆಲುವು ಸಾಧಿಸಿದೆ. ಇನ್ನು ಜೆಡಿಎಸ್(JDS) 1 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ.
ವಿಧಾನಪರಿಷತ್‍ನಲ್ಲಿ ತೆರವಾಗಿದ್ದ ಕಾಂಗ್ರೆಸ್‍ನ 14, ಬಿಜೆಪಿಯ 6, ಜೆಡಿಎಸ್ 4, ಪಕ್ಷೇತರ ಒಂದು ಸ್ಥಾನ ಸೇರಿದಂತೆ 25 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಇದೀಗ ಬಿಜೆಪಿ ಬಿಜೆಪಿ 6ರಿಂದ 12 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದ್ರೆ, ಕಾಂಗ್ರೆಸ್ 14ರಿಂದ 11ಕ್ಕೆ ಕುಸಿದಿದೆ. ಇನ್ನು 4 ಸ್ಥಾನ ಹೊಂದಿದ್ದ ಜೆಡಿಎಸ್ ಈ ಬಾರಿ ಕೇವಲ ಒಂದರಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ಸಮಬಲದ ಪೈಪೋಟಿ ನೀಡಿದೆ.
Council Election Result : ಹಾಸನ ಕ್ಷೇತ್ರದಲ್ಲಿ ಗೆದ್ದು ಬೀಗಿದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ
ಜೆಡಿಎಸ್ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದೆ. ಜೆಡಿಎಸ್ ಭದ್ರಕೋಟೆಯಾದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.
