* 4 ಕ್ಷೇತ್ರಗಳ ಮೇಲ್ಮನೆ ಕ್ಷೇತ್ರ ಚುನಾವಣೆ: 74.39% ಮತ* ಶಾಂತಿಯುತ ಮತದಾನ, ನಾಳೆ ಮತ ಎಣಿಕೆ* ಹೊರಟ್ಟಿಸೇರಿ 49 ಅಭ್ಯರ್ಥಿಗಳ ಭವಿಷ್ಯ ಭದ್ರ

ಬೆಂಗಳೂರು(ಜೂ.14): ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಅತ್ಯಂತ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟಾರೆ ಶೇ.74.39ರಷ್ಟುಮಂದಿ ಹಕ್ಕು ಚಲಾಯಿಸಿದ್ದಾರೆ. ಆರು ವರ್ಷಗಳ ಹಿಂದೆ ಈ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.57.35ರಷ್ಟುಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಹಕ್ಕು ಚಲಾಯಿಸಿದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು, ಜೂ.15ರಂದು ಫಲಿತಾಂಶ ಹೊರಬೀಳಲಿದೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಶೇ.59.59 ಮತ್ತು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ.71.30ರಷ್ಟುಮತದಾನವಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80 ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ.86.67ರಷ್ಟುಮಂದಿ ಹಕ್ಕು ಚಲಾಯಿಸಿದ್ದಾರೆ. ಎರಡೂ ಶಿಕ್ಷಕರ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆದಿದ್ದರೆ, ಪದವೀಧರ ಕ್ಷೇತ್ರಗಳಲ್ಲಿ ನೀರಸವಾಗಿತ್ತು. ಅದರಲ್ಲೂ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಶೇ.60ನ್ನೂ ದಾಟಿಲ್ಲ.

ಎಲ್ಲೆಡೆ ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು ಸಂಜೆ 5ರವರೆಗೆ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಆರಂಭದಲ್ಲಿ ನೀರಸವಾಗಿ ಕಂಡುಬಂದಿದ್ದ ಮತದಾನ ಮಧ್ಯಾಹ್ನದ ನಂತರ ತುರುಸು ಪಡೆದುಕೊಂಡಿತು. ನಾಲ್ಕೂ ಕ್ಷೇತ್ರಗಳಲ್ಲೂ ಶಾಂತಿಯುತವಾಗಿ ಮತದಾನ ನಡೆದಿದೆ. ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆ, ಗಲಭೆ, ಗೊಂದಲ ನಿರ್ಮಾಣವಾಗಿಲ್ಲ.

ಕಳೆದ ಬಾರಿಗಿಂತ ಅಧಿಕ:

ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರಕ್ಕಿಂತ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಹೆಚ್ಚಿನ ಮತದಾನವಾಗಿದೆ. 2016ರಲ್ಲಿ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ.53.68ರಷ್ಟುಮತದಾನವಾಗಿತ್ತು. ಪ್ರಸಕ್ತ ಶೇ.80ರಷ್ಟುಮತದಾನವಾಗುವ ಮೂಲಕ ಕಳೆದ ಬಾರಿಗಿಂತ ಶೇ.26.32ರಷ್ಟುಅಧಿಕ ಮತದಾನವಾಗಿದೆ. ಅದರಂತೆ ವಾಯವ್ಯ ಪದವೀಧರ ಕ್ಷೇತ್ರಕ್ಕೆ 2016ರಲ್ಲಿ ಶೇ.45.09ರಷ್ಟುಮತದಾನವಾಗಿತ್ತು. ಈ ಅವಧಿಯಲ್ಲಿ ಶೇ.59.59ರಷ್ಟುಮತವಾಗುವ ಮೂಲಕ ಶೇ.14.5ರಷ್ಟುಅಧಿಕ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಬಾರಿ ಶೇ.66.72ರಷ್ಟುಮತದಾನವಾಗಿತ್ತು. ಈ ಬಾರಿ ಶೇ.19.95ರಷ್ಟುಹೆಚ್ಚು ಮತದಾನವಾಗಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದಕ್ಷಿಣ ಪದವೀಧರ ಕ್ಷೇತ್ರದಲ್ಲೂ ಕಳೆದ ಬಾರಿ ಶೇ.63.92ರಷ್ಟುಮತದಾನವಾಗಿತ್ತು. ಈ ಬಾರಿ ಶೇ.7.38ರಷ್ಟುಹೆಚ್ಚು ಮತದಾನವಾಗಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನವಾಗಿರುವುದು ಕಂಡುಬಂದಿದೆ.

49 ಮಂದಿ ಭವಿಷ್ಯ ಭದ್ರ:

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ, ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಸಂಕ ಸೇರಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಅರುಣ ಶಹಾಪುರ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ, ಪಕ್ಷೇತರ ಅಭ್ಯರ್ಥಿ ಎನ್‌.ಬಿ.ಬನ್ನೂರ ಮತ್ತು ಜೆಡಿಎಸ್‌ ಅಭ್ಯರ್ಥಿ ಚಂದ್ರಶೇಖರ ಲೋನಿ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಸೇರಿದಂತೆ 7 ಮಂದಿ ಕಣದಲ್ಲಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಮೈ.ವಿ. ರವಿಶಂಕರ್‌, ಕಾಂಗ್ರೆಸ್‌ನ ಮಧು ಮಾದೇಗೌಡ, ಜೆಡಿಎಸ್‌ನ ಎಚ್‌.ಕೆ. ರಾಮು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಒಟ್ಟು 19 ಮಂದಿ ಸ್ಪರ್ಧೆಯಲ್ಲಿದ್ದಾರೆ.

ನಾಳೆ ಫಲಿತಾಂಶ:

ನಾಲ್ಕು ಕ್ಷೇತ್ರಗಳ ಒಟ್ಟು 190 ಮತಕೇಂದ್ರಗಳಲ್ಲಿ ಮತದಾನವಾಗಿದ್ದು ಈಗ ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿವೆ. ಆಯಾ ಜಿಲ್ಲೆಗಳ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿಡಲಾಗಿದೆ. ಮತದಾನ ಮುಕ್ತಾಯದ ಬಳಿಕ ಅಂತಿಮ ಕೆಲಸಗಳನ್ನು ಪೂರ್ತಿಗೊಳಿಸಿ ಸೋಮವಾರ ತಡರಾತ್ರಿಯ ಹೊತ್ತಿಗೆ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್‌ ರೂಮ್‌ಗೆ ಚುನಾವಣಾ ಸಿಬ್ಬಂದಿ ತಂದು ಜೋಡಿಸಿದ್ದಾರೆ. ಜೂ.15ರಂದು ವಾಯವ್ಯ ಪದವೀಧರ, ವಾಯವ್ಯ ಶಿಕ್ಷಕರ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತಎಣಿಕೆ ಬೆಳಗಾವಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಮತಎಣಿಕೆ ಮೈಸೂರು ಕೇಂದ್ರಗಳಲ್ಲಿ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.