Asianet Suvarna News Asianet Suvarna News

ಮೇಲ್ಮನೆ, ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆ ಡೀಲ್‌?

ಮೇಲ್ಮನೆ, ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆ ಡೀಲ್‌?| ಪರಿಷತ್‌ 3 ಸ್ಥಾನ ಕಾಂಗ್ರೆಸ್‌ ಬಿಟ್ಟುಕೊಟ್ಟರೆ ರಾಜ್ಯಸಭೆ 1 ಸ್ಥಾನ ಜೆಡಿಎಸ್‌ಗೆ?

MLC and Rajya Sabha Election in Karnataka Sources Says JDS And Congress Made Deal
Author
Bangalore, First Published May 22, 2020, 7:20 AM IST

ಬೆಂಗಳೂರು(ಮೇ.22): ಮುಂಬರುವ ಜೂನ್‌ ಹಾಗೂ ಜುಲೈನಲ್ಲಿ ಕ್ರಮವಾಗಿ ನಡೆಯಲಿರುವ ವಿಧಾನಪರಿಷತ್‌ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ನಡುವೆ ಒಪ್ಪಂದವೊಂದು ಏರ್ಪಡುವ ಸಾಧ್ಯತೆಯಿದೆ.

"

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಗ್ಗೂಡಿ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇದೇ ರೀತಿ ಎರಡು ಪಕ್ಷಗಳು ಒಗ್ಗೂಡಿದರೆ ಜೂನ್‌ನಲ್ಲಿ ನಡೆಯಲಿರುವ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಒಂದೆಡೆ ಕೊರೋನಾ: ಮತ್ತೊಂದೆಡೆ ಗರಿಗೆದರಿದ ಗ್ರಾಮ ಪಂಚಾಯಿತಿ ಎಲೆಕ್ಷನ್...!

ಹೀಗಾಗಿ ಕಾಂಗ್ರೆಸ್‌ ವಿಧಾನಪರಿಷತ್ತಿನ ಮೂರು ಸ್ಥಾನಗಳನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್‌ ವರಿಷ್ಠರ ಮುಂದೆ ಕಾಂಗ್ರೆಸ್‌ ಪ್ರಸ್ತಾಪವಿಟ್ಟಿದ್ದು, ಈ ಕೊಡುಗೆಗೆ ಬದಲಾಗಿ ಜುಲೈನಲ್ಲಿ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಂದು ಸ್ಥಾನ ನೀಡುವುದಾಗಿ ತಿಳಿಸಿದೆ. ಇದಕ್ಕೆ ಜೆಡಿಎಸ್‌ ವರಿಷ್ಠರು ಒಪ್ಪಿಗೆ ಸೂಚಿಸುವುದು ಮಾತ್ರ ಬಾಕಿಯಿದೆ ಎನ್ನಲಾಗಿದೆ.

ಜೂನ್‌ನಲ್ಲಿ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಸ್ವಸಾಮರ್ಥ್ಯದಿಂದ ಗೆಲ್ಲಬಹುದು. ಉಳಿದ ಒಂದು ಸ್ಥಾನವನ್ನು ಜೆಡಿಎಸ್‌ ತನ್ನ ಸ್ವ ಸಾಮರ್ಥ್ಯದಿಂದ ಗೆಲ್ಲಬಹುದಾಗಿದೆ.

ಇನ್ನು ಜುಲೈನಲ್ಲಿ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನವನ್ನು ಸ್ವ ಸಾಮರ್ಥ್ಯದಿಂದ ಗೆಲ್ಲಬಹುದು. ಇನ್ನೊಂದು ಸ್ಥಾನವನ್ನು ಗೆಲ್ಲಬೇಕಾದರೆ ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಬೇಕು. ಇಲ್ಲದಿದ್ದರೆ ಇಬ್ಬರಿಗೂ ಆ ಸ್ಥಾನ ಗೆಲ್ಲುವ ಸಾಮರ್ಥ್ಯವಿರುವುದಿಲ್ಲ. ಹೀಗಾಗಿ ರಾಜ್ಯಸಭೆಯ ಈ ಸ್ಥಾನವನ್ನು ಜೆಡಿಎಸ್‌ನಿಂದ ದೇವೇಗೌಡರು ಸ್ಪರ್ಧಿಸಿದರೆ ಅವರಿಗೆ ಬಿಟ್ಟುಕೊಡಲು ಕಾಂಗ್ರೆಸ್‌ ಸಿದ್ಧವಿದೆ.

ಇದಕ್ಕೆ ಬದಲಾಗಿ ವಿಧಾನಪರಿಷತ್ತಿಗೆ ಜೆಡಿಎಸ್‌ ತನ್ನ ಸ್ವ-ಸಾಮರ್ಥ್ಯದಿಂದ ಗೆಲ್ಲುವ ಅವಕಾಶವಿರುವ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂಬುದು ಕಾಂಗ್ರೆಸ್‌ ಷರತ್ತು. ಆದರೆ, ಇದಕ್ಕೆ ಜೆಡಿಎಸ್‌ ಸಂಪೂರ್ಣವಾಗಿ ಒಪ್ಪಿಲ್ಲ. ಈ ಹೆಚ್ಚುವರಿ ಸ್ಥಾನಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ಒಲವು ಹೊಂದಿರುವ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡೋಣ ಎಂಬುದು ಜೆಡಿಎಸ್‌ ನಾಯಕರ ಅಂಬೋಣವಾಗಿದೆ ಎನ್ನಲಾಗಿದೆ.

ಏಕೆಂದರೆ, ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಜೆಡಿಎಸ್‌ನ ಕುಪ್ಪೇಂದ್ರ ರೆಡ್ಡಿ ಅವರು ವಿಧಾನಪರಿಷತ್ತಿಗೆ ಆಯ್ಕೆ ಬಯಸಿದ್ದಾರೆ. ಇದೆ ಸ್ಥಾನಕ್ಕೆ ಜೆಡಿಎಸ್‌ನ ಸರವಣ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಎಂ.ಆರ್‌. ಸೀತಾರಾಂ ಪೈಪೋಟಿ ನಡೆಸಿದ್ದಾರೆ. ಹೀಗಾಗಿ ಈ ವಿಚಾರ ಇನ್ನೂ ಅಂತಿಮಗೊಂಡಿಲ್ಲ.

ರಾಜ್ಯಸಭೆಗೆ ಗೌಡ, ಖರ್ಗೆ?

ವಿಧಾನಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ -ಜೆಡಿಎಸ್‌ ನಡುವೆ ಹೊಂದಾಣಿಕೆಯಾದರೆ ಆಗ ರಾಜ್ಯಸಭೆ ವಿಚಾರವು ಅತ್ಯಂತ ಸುಲಲಿತವಾಗಿ ಬಗೆಹರಿಯಲಿದೆ. ಜುಲೈನಲ್ಲಿ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್‌ಗೌಡ, ಹರಿಪ್ರಸಾದ್‌, ಕುಪೇಂದ್ರ ರೆಡ್ಡಿ ಮತ್ತು ಪ್ರಭಾಕರ್‌ ಕೋರೆ ಅವರ ಅವಧಿ ಕೊನೆಗೊಳ್ಳಲಿದೆ. ಈ ಪೈಕಿ ಜೆಡಿಎಸ್‌-ಕಾಂಗ್ರೆಸ್‌ ಎರಡು ಸ್ಥಾನ ಗೆಲ್ಲಬಹುದಾಗಿದೆ. ಹೀಗಾಗಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ. ಇನ್ನು ಜೆಡಿಎಸ್‌ನ ವರಿಷ್ಠ ಎಚ್‌.ಡಿ.ದೇವೇಗೌಡರು ಕಣಕ್ಕೆ ಇಳಿದರೆ ಅವರಿಗೆ ಬೆಂಬಲಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios