Asianet Suvarna News Asianet Suvarna News

ಬಿಎಸ್‌ವೈಗೆ ಸಚಿವ ಸ್ಥಾನಾಕಾಂಕ್ಷಿಗಳ ದುಂಬಾಲು : ಶಾಸಕರ ಲಾಬಿ

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಗೆ ದೆಹಲಿಯಲ್ಲಿ ಕಸರತ್ತು 
  • ಸಚಿವ ಸ್ಥಾನ ಆಕಾಂಕ್ಷಿಗಳಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಲಾಬಿ 
MLAs urges For BS Yediyurappa For minister Post  snr
Author
Bengaluru, First Published Aug 3, 2021, 8:42 AM IST
  • Facebook
  • Twitter
  • Whatsapp

 ಬೆಂಗಳೂರು (ಆ.03):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಗೆ ದೆಹಲಿಯಲ್ಲಿ ಕಸರತ್ತು ನಡೆಸುತ್ತಿದ್ದರೆ, ಸಚಿವ ಸ್ಥಾನ ಆಕಾಂಕ್ಷಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಲಾಬಿ ನಡೆಸುವ ಪ್ರಯತ್ನಗಳು ಸೋಮವಾರವೂ ಮುಂದುವರಿದಿವೆ.

ಶಾಸಕರಾದ ಆರಗ ಜ್ಞಾನೇಂದ್ರ, ದೊಡ್ಡನಗೌಡ ಪಾಟೀಲ್‌, ಎಂ.ಪಿ.ಕುಮಾರಸ್ವಾಮಿ, ಎಂ.ಟಿ.ಬಿ.ನಾಗರಾಜ್‌, ನೆಹರು ಓಲೇಕಾರ್‌, ಎಸ್‌.ಆರ್‌.ವಿಶ್ವನಾಥ್‌ ಮತ್ತು ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಪರವಾಗಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದರು. ಕೊನೆ ಕ್ಷಣದವರೆಗೂ ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಬಳಿ ಒತ್ತಡ ಹಾಕಿದರು.

ಶಾಸಕ ನೆಹರು ಓಲೇಕಾರ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೊಟ್ಟಿರುವ ಆಶ್ವಾಸನೆಯನ್ನು ಈಡೇರಿಸುವ ಭರವಸೆ ಇದೆ. ಈ ಬಾರಿ ದಲಿತ ಬಲ ವರ್ಗಕ್ಕೆ ಅವಕಾಶ ನೀಡಬೇಕು. ನಾನು ಹಿರಿಯ ಶಾಸಕನಾಗಿದ್ದು, ಮುಖ್ಯಮಂತ್ರಿ ಅವರು ಹಾವೇರಿ ಜಿಲ್ಲೆಯವರು ಎಂಬ ಕಾರಣಕ್ಕಾಗಿ ನನಗೆ ಅವಕಾಶ ತಪ್ಪಬಾರದು. ಮುಖ್ಯಮಂತ್ರಿ ಲಿಂಗಾಯತ ಸಮುದಾಯದವರಾಗಿದ್ದಾರೆ. ನಾನು ಛಲವಾದಿ ಸಮುದಾಯಕ್ಕೆ ಸೇರಿದವನಾಗಿದ್ದು, ಅವಕಾಶ ನೀಡಬೇಕು ಎಂದು ಎಲ್ಲಾ ಕಡೆ ಕೂಗು ಎದ್ದಿದೆ ಎಂದರು.

ಮಂತ್ರಿ ಪಟ್ಟಕ್ಕೆ ನಾನು ಆಕಾಂಕ್ಷಿ, ಸಿಗುವ ವಿಶ್ವಾಸವಿದೆ; ಗುತ್ತೇದಾರ್

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭೇಟಿಯಲ್ಲಿ ವಿಶೇಷ ಏನೂ ಇಲ್ಲ. ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರಲು ಯಾವುದೇ ಕಾರಣ ಇಲ್ಲ. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಅನುಕಂಪ ಇದೆ. ನಾನು ಯಡಿಯೂರಪ್ಪ ಜತೆ ಜತೆಯಲ್ಲಿ ಬೆಳೆದವನು. ನನ್ನನ್ನು ಯಡಿಯೂರಪ್ಪ ಮತ್ತು ಸಂಘ ಗುರುತಿಸಲಿದೆ. ಈ ಬಾರಿ ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಹೊಸ ಸರ್ಕಾರದಲ್ಲಿ ಗಂಗಾಮತ ಸಮುದಾಯಕ್ಕೂ ಸಚಿವ ಸ್ಥಾನ ನೀಡಬೇಕು. ಶಾಸಕರಾದ ರವಿಕುಮಾರ್‌, ಸಾಬಣ್ಣ ತಲವಾರ್‌, ಲಾಲಾಜಿ ಮೆಂಡನ್‌ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಯಡಿಯೂರಪ್ಪ ಅವರು ಸಚಿವ ಸ್ಥಾನ ಕೊಡಿಸುವ ವಿಶ್ವಾಸ ಇದೆ ಎಂದರು.

ಬೊಮ್ಮಾಯಿ ಸಿಎಂ ಆದ್ರೆ ಕಿಂಗ್ ಮೇಕರ್ BSY : ಯಡಿಯೂರಪ್ಪ ನಿವಾಸಕ್ಕೆ ಶಾಸಕರ ಟೀಂ

ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ನಾನು ಪಕ್ಷ ನಿಷ್ಠೆಯುಳ್ಳ ಕಾರ್ಯಕರ್ತ. ಪಕ್ಷವು ನಿಷ್ಠಾವಂತರನ್ನು ಗುರುತಿಸುತ್ತದೆ. ಸ್ವಾಮೀಜಿಗಳು ಯಡಿಯೂರಪ್ಪ ಭೇಟಿ ಮಾಡಿದ್ದು, ಅವರು ಕೇಳಿರುವುದರಲ್ಲಿ ತಪ್ಪೇನಿಲ್ಲ. ಬೇರೆ ಬೇರೆ ಸ್ವಾಮೀಜಿಗಳು ಕೇಳಿದ್ದಾರೆ. ನನಗೂ ಅವಕಾಶ ನೀಡಿದರೆ ಸಂತೋಷ, ಕೊಡದಿದ್ದರೂ ಸಂತೋಷ. ಎಲ್ಲರಿಗೂ ಅವಕಾಶ ಸಿಗಬೇಕು. ನಾನು ಹೋರಾಟದ ಮೂಲಕವೇ ಬಂದವನಾಗಿದ್ದು, ಪಕ್ಷವು ಸಂಘದಿಂದ ಬಂದವರನ್ನು ಗುರುತಿಸುತ್ತದೆ ಎಂದು ತಿಳಿಸಿದರು.

ಶಾಸಕ ದೊಡ್ಡನಗೌಡ ಪಾಟೀಲ್‌ ಮಾತನಾಡಿ, ನಾನು ಸಹ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೇನೆ. ಕಳೆದ ಮೂರು ಅವಧಿಯಲ್ಲಿ ಶಾಸಕನಾಗಿ ಹುನಗುಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು. ಶಾಸಕ ಮಹದೇವಪ್ಪ ಯಾದವಾಡ ಪುತ್ರ ಪ್ರಶಾಂತ ಯಾದವಾಡ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಮ್ಮ ತಂದೆಗೆ ಅವಕಾಶ ನೀಡಬೇಕು. ಹೀಗಾಗಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಅವಕಾಶ ಮಾಡಿಕೊಟ್ಟರೆ ಉತ್ತಮ ಕೆಲಸ ಮಾಡುತ್ತಾರೆ ಎಂದು ನುಡಿದರು.

ಸಂಪುಟ ಲಾಬಿಗಾಗಿ ಯೋಗಿ ಮತ್ತೆ ದಿಲ್ಲಿಗೆ

ಹಿಂದಿನ ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್‌ ಅವರು ಈಗಿನ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಸಚಿವರಾಗುವ ಸಂಬಂಧ ಮತ್ತೆ ದೆಹಲಿಗೆ ಎಡತಾಕಿದ್ದಾರೆ. ಎರಡು ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿ ವಾಪಸಾಗಿದ್ದ ಯೋಗೇಶ್ವರ್‌ ಅವರು ಸೋಮವಾರ ಬೆಳಗ್ಗೆ ಮತ್ತೆ ದೆಹಲಿಗೆ ತೆರಳಿದ್ದು, ಕೊನೆಯ ಕ್ಷಣದ ಪ್ರಯತ್ನ ನಡೆಸಲು ಮುಂದಾಗಿದ್ದಾರೆ.ಯಡಿಯೂರಪ್ಪ ಅವರು ತಮಗೆ ಸಚಿವ ಸ್ಥಾನ ನೀಡಲು ವಿರೋಧಿಸಬಹುದು ಎಂಬ ಆತಂಕ ಯೋಗೇಶ್ವರ್‌ ಅವರನ್ನು ಕಾಡುತ್ತಿದೆ. ಹೀಗಾಗಿ, ವರಿಷ್ಠರನ್ನೇ ಕಂಡು ಸಚಿವ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಮನವೊಲಿಸುತ್ತಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ತಮ್ಮ ರಾಮನಗರ ಜಿಲ್ಲೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಎದಿರೇಟು ನೀಡಲು ಯೋಗೇಶ್ವರ್‌ ಅವರಿಗೆ ಅಧಿಕಾರ ನೀಡಬೇಕು ಎಂಬ ಉದ್ದೇಶವೂ ಪಕ್ಷದ ಕೆಲವು ನಾಯಕರಲ್ಲಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios