ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂತಹದೊಂದು ಘರ್‌ ವಾಪ್ಸಿ ಆರಂಭವಾಗಲಿದೆ. ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ಈ ಘರ್‌ ವಾಪ್ಸಿಯ ಮೊದಲ ಹಂತ ಶೀಘ್ರ ನಡೆಯುವ ಸಾಧ್ಯತೆಯಿದ್ದು, ಬೆಂಗಳೂರಿನ ಒಬ್ಬ ಶಾಸಕರು ಬಿಜೆಪಿ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ. ಇದಾದ ನಂತರ ಲೋಕಸಭೆ ಚುನಾವಣೆ ವೇಳೆಗೆ ಉಳಿದ ನಾಲ್ಕೈದು ಶಾಸಕರು ಹಂತ ಹಂತವಾಗಿ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಲಿದ್ದಾರೆ.

ಎಸ್‌.ಗಿರೀಶ್‌ಬಾಬು

ಬೆಂಗಳೂರು(ಆ.16): ರಾಜ್ಯ ರಾಜಕಾರಣದಲ್ಲಿ ಶೀಘ್ರದಲ್ಲೇ ಮತ್ತೊಂದು ಸುತ್ತಿನ ರಾಜಕೀಯ ಸಮೀಕರಣ ಆರಂಭವಾಗುವ ಸೂಚನೆಗಳಿದ್ದು, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುಖ್ಯ ಕಾರಣರಾಗಿದ್ದ ‘ಬಾಂಬೆ ಬಾಯ್ಸ್‌’ ಕಾಂಗ್ರೆಸ್‌ಗೆ ಘರ್‌ ವಾಪ್ಸಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹುಟ್ಟುಹಾಕಲಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂತಹದೊಂದು ಘರ್‌ ವಾಪ್ಸಿ ಆರಂಭವಾಗಲಿದೆ. ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ಈ ಘರ್‌ ವಾಪ್ಸಿಯ ಮೊದಲ ಹಂತ ಶೀಘ್ರ ನಡೆಯುವ ಸಾಧ್ಯತೆಯಿದ್ದು, ಬೆಂಗಳೂರಿನ ಒಬ್ಬ ಶಾಸಕರು ಬಿಜೆಪಿ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ. ಇದಾದ ನಂತರ ಲೋಕಸಭೆ ಚುನಾವಣೆ ವೇಳೆಗೆ ಉಳಿದ ನಾಲ್ಕೈದು ಶಾಸಕರು ಹಂತ ಹಂತವಾಗಿ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಲಿದ್ದಾರೆ.

ನಾನು 6.5 ಕೋಟಿ ಕನ್ನಡಿಗರ ವಕ್ತಾರ: ಕುಮಾರಸ್ವಾಮಿ ತಿರುಗೇಟು

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನಕ್ಕೆ ಮುಖ್ಯ ಕಾರಣವಾಗಿದ್ದ ಪ್ರಮುಖ ಶಾಸಕರ ಪೈಕಿ ಐದಾರು ಮಂದಿ ಮತ್ತೆ ಕಾಂಗ್ರೆಸ್‌ಗೆ ಹಿಂತಿರುಗುವ ಉಮೇದಿಯಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರದ ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದ ಈ ಶಾಸಕರು ತಮ್ಮ ಕ್ಷೇತ್ರದ ಹಿತದೃಷ್ಟಿಯಿಂದ ಬಿಜೆಪಿ ತೊರೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ವೇಳೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ ಮರು ಆಯ್ಕೆಯಾಗುವ ಉದ್ದೇಶ ಈ ಶಾಸಕರಿಗೆ ಇದೆ ಎನ್ನಲಾಗಿದೆ. ಹೀಗಾಗಿ ಈ ಹಂತದಲ್ಲೇ ರಾಜೀನಾಮೆ ನೀಡಿದರೆ ಲೋಕಸಭಾ ಚುನಾವಣೆ ವೇಳೆಗೆ ವಿಧಾನ ಸಭೆ ಉಪ ಚುನಾವಣೆಯನ್ನು ಚುನಾವಣಾ ಆಯೋಗ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ರಾಜೀನಾಮೆ ನೀಡುವ ಮನಸ್ಸನ್ನು ಈ ಬಾಂಬೆ ಬಾಯ್‌್ಸ ಮಾಡಿದ್ದಾರೆ ಎನ್ನಲಾಗಿದೆ.

ಒಂದು ಸುತ್ತಿನ ಮಾತುಕತೆ!:

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶ ಹೊಂದಿರುವ ಕಾಂಗ್ರೆಸ್‌ ನಾಯಕತ್ವವು ಪಕ್ಷ ಸೇರ್ಪಡೆಗೆ ಆಸಕ್ತಿ ಹೊಂದಿರುವ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಶಾಸಕರಿಗೆ ಗಾಳ ಹಾಕಿತ್ತು. ಇದರಲ್ಲಿ ಬಾಂಬೆ ಬಾಯ್‌್ಸ ಪ್ರಮುಖರು. ಕಾಂಗ್ರೆಸ್‌ನಿಂದ ಬಿಜೆಪಿಗೆ ತೆರಳಿ ಸಚಿವರಾಗಿದ್ದ ಬೆಂಗಳೂರು ಮೂಲದ ಇಬ್ಬರು ಶಾಸಕರು, ಜೆಡಿಎಸ್‌ನ ಒಬ್ಬರು ಶಾಸಕರು, ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಒಬ್ಬರು ಶಾಸಕರು ಕಾಂಗ್ರೆಸ್‌ ಸೇರುವ ಆಸಕ್ತಿ ಹೊಂದಿದ್ದರು.

ಉಮಾಶ್ರೀ, ಸೀತಾರಾಮ್‌, ಸುಧಾಮದಾಸ್‌ ಮೇಲ್ಮನೆಗೆ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಜ್ಯ ನಾಯಕತ್ವ ಸದರಿ ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದೆ. ಹೈಕಮಾಂಡ್‌ ಸಹ ಈ ಶಾಸಕರ ಸೇರ್ಪಡೆಗೆ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಆದರೆ, ಈ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನೆರವಾದರೆ ಅದಕ್ಕೆ ಬದಲಾಗಿ ಈ ಶಾಸಕರಿಗೆ ಸರ್ಕಾರದಲ್ಲಿ ಯಾವ ಸ್ಥಾನ ಮಾನ ದೊರೆಯುತ್ತದೆ ಎಂಬುದು ಇನ್ನು ತೀರ್ಮಾನವಾಗಿಲ್ಲ.
ಈ ವಿಚಾರದ ಬಗ್ಗೆ ಶಾಸಕರು ಹಾಗೂ ಕಾಂಗ್ರೆಸ್‌ ನಾಯಕತ್ವದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಬೇಕಿದೆ. ಈ ವಿಚಾರ ಇತ್ಯರ್ಥವಾದರೆ ಶಾಸಕರು ಕಾಂಗ್ರೆಸ್‌ ಸೇರ್ಪಡೆ ದಿನಾಂಕ ನಿರ್ಧಾರವಾಗುತ್ತದೆ ಎನ್ನುತ್ತವೆ ಮೂಲಗಳು.

ಎಲ್ಲರಿಗೂ ಸ್ವಾಗತ ಇಲ್ಲ

ಕಾಂಗ್ರೆಸ್‌ಗೆ ಘರ್‌ ವಾಪ್ಸಿ ಮಾಡಬಯಸಿರುವ ಬಿಜೆಪಿ ಶಾಸಕರನ್ನು ಕಾಂಗ್ರೆಸ್‌ ನಾಯಕತ್ವ ತುಂಬು ಹೃದಯದಿಂದ ಸ್ವಾಗತಕ್ಕೆ ಸಜ್ಜಾಗಿದೆ. ಆದರೆ, ಈ ಸ್ವಾಗತ ಎಲ್ಲ ಬಾಂಬೆ ಬಾಯ್ಸ್‌ಗಳಿಗೂ ಇಲ್ಲ. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ವೇಳೆ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದ ಬೆಂಗಳೂರಿನ ಶಾಸಕರೊಬ್ಬರ ಸೇರ್ಪಡೆಗೆ ಕಾಂಗ್ರೆಸ್‌ನಲ್ಲಿ ತೀವ್ರ ವಿರೋಧವಿದೆ. ವಾಸ್ತವವಾಗಿ ಈ ಶಾಸಕರು ಕಾಂಗ್ರೆಸ್‌ ಸೇರ್ಪಡೆಗೆ ತೀವ್ರ ಪ್ರಯತ್ನ ನಡೆಸಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್‌ ತೀವ್ರ ವಿರೋಧ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದರಿ ಶಾಸಕರು ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಿದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಅವರ ಸೇರ್ಪಡೆಗೆ ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ಹೇಳಿವೆ.