ಹಿಂದೂ ವಿರೋಧಿ ಸರ್ಕಾರ ಎಂದು ಸಚಿವೆ ಲಕ್ಷ್ಮೀ ಸಾಬೀತು ಮಾಡಿದ್ದಾರೆ: ಶಾಸಕ ಯಶಪಾಲ್
ಸಿದ್ದರಾಮಯ್ಯನವರದ್ದು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಬೀತು ಮಾಡಿದ್ದಾರೆ. ಪುತ್ತಿಗೆ ಮಠದ ಪುರಪ್ರವೇಶ ಕಾರ್ಯಕ್ರಮದಲ್ಲಿ ಸಚಿವೆ ಭಾಗವಹಿಸದೆ ಉಡುಪಿ ಜನತೆಗೆ ನೋವು ಕೊಟ್ಟಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆರೋಪಿಸಿದ್ದಾರೆ.
ಉಡುಪಿ (ಜ.12): ಸಿದ್ದರಾಮಯ್ಯನವರದ್ದು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಬೀತು ಮಾಡಿದ್ದಾರೆ. ಪುತ್ತಿಗೆ ಮಠದ ಪುರಪ್ರವೇಶ ಕಾರ್ಯಕ್ರಮದಲ್ಲಿ ಸಚಿವೆ ಭಾಗವಹಿಸದೆ ಉಡುಪಿ ಜನತೆಗೆ ನೋವು ಕೊಟ್ಟಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆರೋಪಿಸಿದ್ದಾರೆ. ಹಿಂದೆ ಉಸ್ತುವಾರಿ ಸ್ಥಾನದಲ್ಲಿದ್ದವರು ಇಡೀ ಪರ್ಯಾಯವನ್ನು ತಾವೇ ನಿಂತು ನಡೆಸುತ್ತಿದ್ದರು, ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪರ್ಯಾಯದ ಬಗ್ಗೆ ಈವರೆಗೆ ಒಂದೂ ಸಭೆ ಕರೆದಿಲ್ಲ, ಪರ್ಯಾಯಕ್ಕೆ ನಯಾಪೈಸೆ ಅನುದಾನ ಕೊಟ್ಟಿಲ್ಲ ಎಂದವರು ಆರೋಪಿಸಿದ್ದಾರೆ.
ಕನಿಷ್ಠ 15 ದಿನಕ್ಕೊಮ್ಮೆಯಾದರೂ ಉಡುಪಿಗೆ ಭೇಟಿ ನೀಡಿ, ನಿಮ್ಮದೇ ಸರ್ಕಾರ ಇದೆ, ಜಿಲ್ಲೆಯ ಅಭಿವೃದ್ಧಿಗೆ ತಕ್ಷಣ ಅನುದಾರ ಬಿಡುಗಡೆ ಮಾಡಿ. ಇಲ್ಲದಿದ್ದಲ್ಲಿ ಉಡುಪಿಯ ಜನರು ಜಿಲ್ಲೆಯ ಗಡಿ ಭಾಗದಲ್ಲಿ ನಿಮ್ಮನ್ನು ತಡೆದು ಪ್ರತಿಭಟಿಸಲಿದ್ದಾರೆ, ಉಡುಪಿ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದವರು ಎಚ್ಚರಿಕೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಮಹೋತ್ಸವದ ಆಮಂತ್ರಣ ನೀಡಿ ಆಹ್ವಾನ ಮಾಡಿದ್ದೇವೆ. ಉಡುಪಿ ಪರ್ಯಾಯಕ್ಕೆ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 25 ಕೋಟಿ ರು. ಅನುದಾನದ ಬೇಡಿಕೆ ಇಟ್ಟಿದ್ದೇವೆ. ಇದುವರೆಗೆ ಯಾವುದೇ ಭರವಸೆ ಸಿಕ್ಕಿಲ್ಲ. ಕನಿಷ್ಠ 10 ಕೋಟಿ ರು. ಆದರೂ ಬಿಡುಗಡೆ ಮಾಡಿ ಎಂದು ಮತ್ತೆ ಮನವಿ ಮಾಡಿದ್ದೇವೆ, ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲವಾದರೆ ಕನಿಷ್ಠ ಐದು ಕೋಟಿ ರು. ಆದರೂ ಕೊಡಿ ಎಂದವರು ಆಗ್ರಹಿಸಿದರು.
ಯುವನಿಧಿ ಚಾಲನೆಗೆ ವಿದ್ಯಾರ್ಥಿಗಳ ಬಳಕೆ: ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಚಾಲನೆ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಒತ್ತಡ ಹೇರುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿರುವ ಯುವನಿಧಿ ಕಾರ್ಯಕ್ರಮವನ್ನು ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಅನುಷ್ಠಾನ ಮಾಡದೇ, ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಯೋಜನೆಗೆ ಚಾಲನೆ ನೀಡಿ ರಾಜಕೀಯ ಲಾಭ ಪಡೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಪ್ರೇರಿತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದವರು ಆರೋಪಿಸಿದ್ದಾರೆ.
ಬದುಕು ನರಕವಾಗಿಸುವ ನಶೆಗಳಿಂದ ದೂರವಿರಿ: ನಟಿ ಪೂಜಾಗಾಂಧಿ
ಕಾರ್ಯಕ್ರಮಕ್ಕೆ ಉಡುಪಿ, ದ.ಕ. ಜಿಲ್ಲೆಯ ವಿದ್ಯಾರ್ಥಿಗಳನ್ನು ಕರೆತರುವಂತೆ ಶಿಕ್ಷಣ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ. ಈ ಮೂಲಕ ಪರೀಕ್ಷೆಗಳು ಆರಂಭಗೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಹತಾಶ ಧೋರಣೆಗೆ ಸಾಕ್ಷಿಯಾಗಿದೆ. ಸರ್ಕಾರ ಕೂಡಲೇ ರಾಜಕೀಯ ಪ್ರೇರಿತ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಬಳಕೆಯನ್ನು ಕೈಬಿಡಬೇಕು. ತಪ್ಪಿದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮೂಲಕ ಪ್ರತಿಭಟನೆ ನಡೆಸುವುದಾಗಿ ಯಶ್ಪಾಲ್ ಎಚ್ಚರಿಕೆ ನೀಡಿದ್ದಾರೆ.