Hassan: ಮುಂದಿನ ಚುನಾವಣೆಯಲ್ಲಿ ಪರದೆ ಮೇಲೆ ಪಿಕ್ಚರ್ ತೋರಿಸ್ತೀನಿ: ಶಾಸಕ ಪ್ರೀತಂ ಗೌಡ ವಾಗ್ದಾಳಿ
ವಿಧಾನಸಭಾ ಚುನಾವಣೆಗೆ ಆರೇಳು ತಿಂಗಳು ಇನ್ನೂ ಬಾಕಿ ಇದೆ. ಈಗಲೇ ಹಾಸನ ಜಿಲ್ಲೆಯಲ್ಲಿ ಜೆಡಿಎಸ್- ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಹಾಸನ ವಿಧಾನಸಭಾ ಕ್ಷೇತ್ರ ಹೆಚ್.ಡಿ.ರೇವಣ್ಣ ಕುಟುಂಬ ಮತ್ತು ಪ್ರೀತಂ ಗೌಡ ನಡುವೆ ಜಿದ್ದಾಜಿದ್ದಿಯ ಅಖಾಡವಾಗಿದೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಸೆ.25): ವಿಧಾನಸಭಾ ಚುನಾವಣೆಗೆ ಆರೇಳು ತಿಂಗಳು ಇನ್ನೂ ಬಾಕಿ ಇದೆ. ಈಗಲೇ ಹಾಸನ ಜಿಲ್ಲೆಯಲ್ಲಿ ಜೆಡಿಎಸ್- ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಹಾಸನ ವಿಧಾನಸಭಾ ಕ್ಷೇತ್ರ ಹೆಚ್.ಡಿ.ರೇವಣ್ಣ ಕುಟುಂಬ ಮತ್ತು ಪ್ರೀತಂ ಗೌಡ ನಡುವೆ ಜಿದ್ದಾಜಿದ್ದಿಯ ಅಖಾಡವಾಗಿದೆ. ಈಗಲೇ ವಾಕ್ಸಮರ ಶುರುವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ನನ್ನ ವಿರುದ್ದ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಅವರಿಗೆ ಸೋಲು ನಿಶ್ಚಿತ ಎಂದು ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಪ್ರೀತಂ ಗೌಡ, ಭವಾನಿ ಅವರಿಗೆ ಹಾಸನದ ಗಣಪತಿಗಳು ಎಲ್ಲಿವೆ, ರೋಡ್ ಯಾವುದು ಎನ್ನೋದು ಗೊತ್ತಿರಲಿಲ್ಲ. ಪ್ರೀತಂಗೌಡ ಬಂದ ಮೇಲೆ ಹಾಸನ ಹೇಗಿದೆ ಎಂದು ನೋಡುವ ಅವಕಾಶ ಕಲ್ಪಿಸಿ ಕೊಟ್ಟಿದ್ದೇನೆ.
ಇನ್ನೂ ಅವರು ಗಣಪತಿ ನೋಡುತ್ತಿದ್ದಾರೆ, ಹಳ್ಳಿ ಕಡೆಗೆ ಹೋಗಲಿ, ನಾವಿದ್ದಾಗ ಏನು ಮಾಡಿದ್ವಿ, ಪ್ರೀತಂಗೌಡ ಏನು ಮಾಡಿದ್ದಾರೆ ಎಂದು ಗೊತ್ತಾಗುತ್ತೆ. ಬಹುಶಃ ಅವರು ಎಲ್ಲ ಹಳ್ಳಿಗಳನ್ನು ಸುತ್ತಾಡಿ ಬಂದರೆ ಆಗಿರುವ ಅಭಿವೃದ್ಧಿ ನೋಡಿ ಜನರ ಸ್ಪಂದನೆ ಹೇಗಿರುತ್ತೆ ಎಂದು ಗೊತ್ತಾಗುತ್ತೆ. ಗಣಪತಿ ಇರುವ ಕಡೆ ಜನ ಇರ್ತಾರೆ ಅಲ್ಲಿ ಕರ್ಕೊಂಡ್ ಹೋಗಿ ಹಾರ ಹಾಕಿಸ್ತಾರೆ, ಓಹ್ ಇವರೆಲ್ಲಾ ನನಗೆ ಓಟ್ ಹಾಕ್ತಾರೆ ಅನ್ಕೊಂಡು ಸುತ್ತಾಡುತ್ತಿದ್ದಾರೆ. ನಿಜವಾಗಿ ಹೋಗಬೇಕಿರುವುದು ಹಳ್ಳಿಗೆ ಜನರು, ಕಾರ್ಯಕರ್ತರ ಮಧ್ಯೆ, ಅಲ್ಲಿ ಯಾವ್ಯಾವ ಹಳ್ಳಿ ಜನ ಅವರ ಜೊತೆ ಇರ್ತಾರೆ ಗೊತ್ತಾದ ಮೇಲೆ ಚುನಾವಣೆಗೆ ನಿಲ್ತಾರಾ ಕೇಳಿ ನೋಡಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಮುಳುಗುವ ಹಡಗು, ಯಾರೂ ಹತ್ತಲು ಬಯಸೋದಿಲ್ಲ: ಸಚಿವ ಕಾರಜೋಳ ವ್ಯಂಗ್ಯ
ಭವಾನಿ ರೇವಣ್ಣ ಈಗ ಆಕ್ಟೀವ್ ಆಗಿದ್ದಾರೆ ಅಷ್ಟೇ, ಎಲ್ಲವನ್ನು ನೋಡಿದ ಮೇಲೆ ನನ್ನಿಂದ ಆಗಲ್ಲ ಎಂದು ಬೇರೆಯವರನ್ನು ಅಭ್ಯರ್ಥಿ ಮಾಡ್ತಾರೆ, ಇವರು ಅಭ್ಯರ್ಥಿ ಅದರೆ ನನಗೆ ಬಹಳ ಸಂತೋಷ. ಅವರು ಎಲ್ಲ ಹಳ್ಳಿ ಸುತ್ತಿ ಬಂದ ಮೇಲೆ ಜನರು ನಿಲ್ಲಲಿ ಎಂದರೆ ನಿಲ್ಲಲಿ, ಅವರಿಗೆ ಚುನಾವಣೆಗೆ ನಿಲ್ಲುವ ಧೈರ್ಯ ಬರಲಿ ಎಂದು ವಿನಾಯಕನಲ್ಲಿ ಪ್ರಾರ್ಥನೆ ಮಾಡ್ತೇನೆ. ಏಕ್ ದಿನ್ ಕಾ ಸುಲ್ತಾನ್ ಆಗದ ರೀತಿಯಲ್ಲಿ ಹಳ್ಳಿಗಳ ಪ್ರವಾಸ ಮಾಡಲಿ, ಅವರೇ ಅಭ್ಯರ್ಥಿ ಆಗಲಿ ಎಂದು ನಿಮ್ಮಗಳ ಮೂಲಕ ಮನವಿ ಮಾಡುತ್ತೇನೆ. ಅವರು ಮಿಸ್ಸಾಗಿ ವಾಪಸ್ ಏನಾದ್ರು ಹೋದಾರು ಎಂದು ಪ್ರೀತಂಗೌಡ ಲೇವಡಿ ಮಾಡಿದರು.
ನನ್ನ ಪಂಥಾಹ್ವಾನ ಸ್ಚೀಕಾರ ಮಾಡಿದ್ದರೆ, ಅಭ್ಯರ್ಥಿ ನಾನೇ ಎಂದು ಘೋಷಣೆ ಮಾಡಲಿ, ಅವರು ಘೋಷಣೆ ಮಾಡಿದ ದಿನ ನಾನು ಧನ್ಯವಾದ ಹೇಳ್ತೇನೆ. ನಾನು ಪದೇ ಪದೆ ಪಂಥಾಹ್ವಾನ ನೀಡುವಷ್ಟು ದೊಡ್ಡವನಲ್ಲ, ನಾನಂತೂ ಚುನಾವಣೆಗೆ ರೆಡಿಯಾಗಿದ್ದು, ಅವರಾಗೆ ಬಂದು ಆಕ್ಟೀವ್ ಆಗಿದ್ದಾರೆ ಅದಕ್ಕೆ ಅವರಿಗೆ ಶುಭಾಶಯ ಹೇಳುತ್ತಿದ್ದೇನೆ ಎಂದರು. ಸಂಸದರು ಈಗಲಾದರು ಹಾಸನ ವಿಧಾನಸಭಾ ಕ್ಷೇತ್ರವನ್ನು ಒಮ್ಮೆ ಪ್ರದಕ್ಷಿಣೆ ಹಾಕಲಿ. ಅವರು ಇಷ್ಟು ದಿನ ಒಂದು ದಿನ ಒಂದೇ ಒಂದು ಹಳ್ಳಿಗೆ ಹೋಗಿಲ್ಲ, ಈಗ ಅವರ ತಾಯಿಯನ್ನು ಅಭ್ಯರ್ಥಿ ಮಾಡ್ತಿವಿ ಅನ್ನುವ ಕಾರಣಕ್ಕದರು ಗ್ರಾಮಗಳನ್ನು ನೋಡಲಿ.
ಚುನಾವಣೆಗೆ ಹೋದಾಗ ಐದು ವರ್ಷಗಳ ಹಿಂದೆ ಬಂದಿದ್ರಿ ಈಗ ಯಾಕೆ ಬಂದಿದಿರಿ ಎಂದು ಯಾರು ಕೇಳದ ವಾತಾವರಣ ನಿರ್ಮಾಣ ಮಾಡಿಕೊಳ್ಳಲಿ. ಒಮ್ಮೆ ಹಾಸನದ ಎಲ್ಲಾ ಹಳ್ಳಿಗಳಿಗೆ ಹೋಗಿ ಬರಲಿ, ನನಗೆ ಗೊತ್ತಿರುವ ಹಾಗೆ ಜಿಲ್ಲೆಯ ಯಾವ ಹಳ್ಳಿಗು ಹೋಗಿಲ್ಲ. ಕಾರ್ಯಕರ್ತರ ಸಭೆಗೆ ಹೋಗಿ ಬರ್ತಾರೆ ಅಷ್ಟೇ. ಯಾವುದೇ ಶಾಶ್ವತ ಯೋಜನೆಯನ್ನು ಜಿಲ್ಲೆಗೆ ಅಥವಾ ಈ ಕ್ಷೇತ್ರಕ್ಕೆ ಕೊಟ್ಟಿಲ್ಲ. ಮುಂದಿನ ಒಂದು ವರ್ಷದಲ್ಲಿಯಾದರೂ ಆಕ್ಟೀವ್ ಆಗಿ ಇರಲಿ ಎಂದು ಸಲಹೆ ನೀಡಿದರು. ಸಂಸದರು ಯಾವನೋ ಎಂದಿರೋದು ನನಗಲ್ಲ, ಈ ಕ್ಷೇತ್ರದ ಮತದಾರರಿಗೆ, ನಾನು ಈ ಕ್ಷೇತ್ರದ ಜನರ ಪ್ರತಿನಿಧಿ, ಸಾಂವಿಧಾನಿಕ ಹುದ್ದೆಗೆ ಗೌರವ ಕೊಡೊದನ್ನು ಮೊದಲು ಕಲಿಯಲಿ, ಅವರಿಗೆ ವಯಸ್ಸಿದೆ ರಾಜಕಾರಣ ಏನಾಗುತ್ತೋ ಬಿಡುತ್ತೊ, ರಾಜಕಾರಣವನ್ನು ಜನರು ತೀರ್ಮಾನ ಮಾಡ್ತಾರೆ.
ಆದರೆ ಸಾರ್ವಜನಿಕ ಜೀವನದಲ್ಲಿ ಗೌರವ ಕೊಟ್ಟು ಗೌರವ ತಗೊಬೇಕು. ನಾನು ಆಫ್ ದಿ ರೆಕಾರ್ಡ್ ಕೂಡ ಅವರನ್ನು ಹೋಗು ಬಾ ಅನ್ನಲ್ಲ. ಇದನ್ನು ಅವರು ಕಲಿತರೆ ಅವರ ವೈಯುಕ್ತಿಕ ಜೀವನಕ್ಕೆ ಒಳ್ಳೆಯದು, ಅವರು ಕೂಡ ಇಂಜಿನಿಯರ್ ಇದ್ದಾರೆ, ಬಹಳ ಬುದ್ದಿವಂತರು, ಆದರೆ ರಾಜಕೀಯದಲ್ಲಿ ಯಾರು ಬುದ್ದಿವಂತರು ಎಂದು ಎರಡು ಮೂರುಸಲ ನಾನು ತೋರಿಸಿದ್ದೀನಿ, ಹುಣಸೂರಿನಲ್ಲಿ ಅವರ ಜವಾಬ್ದಾರಿ ಇದ್ದ ಕ್ಷೇತ್ರದಲ್ಲಿ ಅವರು ಮೂರನೇ ಸ್ಥಾನ ಹೋದರು, ಶಿರಾದಲ್ಲಿ ಕೂಡ ಮೂರನೇ ಸ್ಥಾನಕ್ಕೆ ಇಳಿದರು. ಹಾಸನಕ್ಕೆ ಅವರು ತಾಯಿಯನ್ನು ಕರೆತಂದರು ಅವರಿಗೆ ಮೂರನೇ ಸ್ಥಾನವೇ ಖಚಿತ ಎನ್ನುವ ಮೂಲಕ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಮೂರನೆ ಸ್ಥಾನಕ್ಕೆ ಹೋಗ್ತಾರೆ ಎಂದು ಲೇವಡಿ ಮಾಡಿದರು.
ನಾನು ಈಗ ಏನು ಮಾತಾಡಿದ್ರು ಅತಿಶಯೋಕ್ತಿ ಆಗುತ್ತೆ, 2023ರ ಚುನಾವಣೆಗೆ ಇವರನ್ನು ಹಾಸನಕ್ಕೆ ಕರೆತರಲು ಓಡಾಡುತ್ತಿರುವವರು ಒಂದು ತಿಂಗಳು ಅವರ ಕುಟುಂಬದಿಂದ ದೂರ ಇರಬೇಕಾಗುತ್ತೆ, ಯಾಕೆ ಕರೆದುಕೊಂಡು ಹೋಗಿ ಹೀಗೆ ಮಾಡಿದ್ರಿ ಎಂದು ಅಕ್ಕ ಪಕ್ಕ ತಿರುಗಿದ್ರೆ ಜನ ಇಲ್ಲದಂತೆ ಮಾಡ್ತೀನಿ. ಈ ಬೈಟ್ ಇಟ್ಟುಕೊಂಡಿರಿ ಈಗ ಅವರನ್ನ ಕರೆದುಕೊಂಡು ಓಡಾಡುತ್ತಿರೋದು ಮುಂದೆ ಅವರ ಜೊತೆ ಇರಲ್ಲ, ಯಾಕೆಂದ್ರೆ 2023 ರ ಚುನಾವಣೆ ಬಳಿಕ ಅವರ ಅಕ್ಕ ಪಕ್ಕ ಇದ್ದರೆ ತಲೆ ಮೇಲೆ ಹೊಡಿತಾರೆ. ಕರ್ಕೊಂಡು ಬಂದು ಸುಳ್ಳು ಹೇಳಿ ಹೀಗೆ ಮಾಡಿದ್ರಲ್ಲಾ ಅಂತ ಹೊಡಿತಾರೆ ಎಂದು ಕುಟುಕಿದರು.
ಸಂಸದರು ನನಗಿಂತ ವಯಸ್ಸಿನಲ್ಲಿ ಚಿಕ್ಕವರು, ನನ್ನ ಮನೆಯಲ್ಲಿ, ನಮ್ಮ ರಾಜಕೀಯ ಪಕ್ಷದಲ್ಲಿ ಒಂದು ಸಂಸ್ಕಾರವನ್ನು ಕಲಿಸಿಕೊಟ್ಟಿದ್ದಾರೆ. ಹತ್ತು ವರ್ಷದ ಬಾಲಕಿನಿಗೂ ಹೋಗು, ಬಾ ಅನ್ನಲ್ಲ, ಗೌರವ ಕೊಟ್ಟು, ಗೌರವ ತೆಗೆದುಕೊಳ್ಳುತ್ತೇನೆ. ಅವರು ಮಾತನಾಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತೆ. ಸಂಸದರಿಗೆ ಯಾವ ರೀತಿ ಮಾತನಾಡಬೇಕೆಂದು ಸಾರ್ವಜನಿಕರು ಮುಂದಿನ ದಿನಗಳಲ್ಲಿ ಹೇಳಿಕೊಡ್ತಾರೆ. ಸಂಸದರ ಹೇಳಿಕೆ ಅವರ ಹತಾಶ ಮನೋಭಾನೆಯನ್ನು ತೋರಿಸುತ್ತದೆ. ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕು, ಅವರ ಕಾರ್ಯಕರ್ತರನ್ನು ಯಾವ ರೀತಿ ಮಾತನಾಡಿಸಬೇಕು ಎನ್ನುವುದರ ಬಗ್ಗೆ ಒಂದು ಕ್ಲಾಸ್ ತೆಗೆದುಕೊಂಡರೆ ಒಳ್ಳೆಯದು, ಅವರ ತಂದೆ ಕಾರ್ಯಕರ್ತರನ್ನು ಕುಡುಕರು, ರೌಡಿಶೀಟರ್ ಎನ್ನುತ್ತಾರೆ.
Chikkamagaluru: ಕಾಂಗ್ರೆಸ್ಸಿನ ಪೇಸಿಎಂ ಪೇ ಪೋಸ್ಟರ್‌ಗೆ ಸಿ.ಟಿ.ರವಿ ಟಾಂಗ್
ಅವರ ಮಗ ಚುನಾಯಿತ ಪ್ರತಿನಿಧಿ ಶಾಸಕನನ್ನ ಏಕವಚದಲ್ಲಿ ಮಾತನಾಡುತ್ತಾರೆ. ಇದೆಲ್ಲ ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದರು. ಮುಂದಿನ ಚುನಾವಣೆಯಲ್ಲಿ ಪ್ರೀತಂಗೌಡರನ್ನು ಹಾಸನ ಜಿಲ್ಲೆಯ ಜನ ಸೋಲಿಸಲು ನಿರ್ಧರಿಸಿದ್ದಾರೆ ಎಂಬ ಪ್ರಜ್ವಲ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ, ನಾನು ಚುನಾವಣೆಗೆ ನಿಲ್ಲುವುದು ಹಾಸನ ವಿಧಾನಸಭಾ ಕ್ಷೇತ್ರದಿಂದ, ಅವರಿಗೆ ಆ ಮಾಹಿತಿ ಇಲ್ಲ, ತಾತನ ಹೆಸರನ್ನು ಹೇಳಿಕೊಂಡು ಬಂದರೆ ಹೀಗೆ ಆಗುವುದು, ಜಿಲ್ಲೆಯ ಜನ ಅಲ್ಲ ನನಗೆ ಓಟು ಹಾಕೋದು, ಹಾಸನ ವಿಧಾನಸಭಾ ಕ್ಷೇತ್ರದ ಜನ, ಜಿಲ್ಲೆಯ ಜನ ಓಟು ಹಾಕೋದು ಎಂಪಿ ಚುನಾವಣೆಗೆ, ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ, ತಂದೆ, ತಾತನ ಹೆಸರು ಹೇಳಿಕೊಂಡು ರಾಜಕಾರಣ ಮಾಡ್ತಾರೆ. ಐದು ಜನ ವೈಟ್ ಪ್ಯಾಂಟ್, ವೈಟ್ ಶರ್ಟ್ ಹಾಕಂಡು ಇರೋರನ್ನ ಜೊತೇಲಿ ಇಟ್ಕಂಡು ಅವರು ಯಾವುದೋ ಗುಂಗಲ್ಲಿ ಇದ್ದಾರೆ.
ಚುನಾವಣೆ ಗೆಲ್ತಿನಿ ಅಂಥ ಭ್ರಮೆಯಲ್ಲಿದ್ದಾರೆ. ನನ್ನ ಸವಾಲು ಸ್ವೀಕಾರ ಮಾಡಿ ಚುನಾವಣೆಗೆ ಬರಲಿ, 2023 ರ ಸೆಮಿಫೈನಲ್‌ನಲ್ಲಿ ಗೆಲ್ತಿನಿ, 2204 ರ ಎಂಪಿ ಚುನಾವಣೆ ಫೈನಲ್, ಒಮ್ಮೆ ಎಂಪಿ ಆಗಿದ್ದವರು ಎಂದು ಹೆಸರು ಪಟ್ಟಿಯಲ್ಲಿ ಸೇರಿದ್ರೆ ಅದು ಹಾಲಿ ಎಂಪಿ, ಅದನ್ನು ಮಾಡಿ ತೋರುಸ್ತಿನಿ ನಾನು ರಿಸೆಲ್ಟ್ ಓರಿಯೆಂಟೆಡ್ ಪೊಲಿಟಿಷಿಯನ್ ಎಂದರು. ಕೆ.ಆರ್.ಪೇಟೆ ಚುನಾವಣೆಗೆ ಬಂದರು, ಹುಣಸೂರು, ಶಿರಾ ಚುನಾವಣೆಗೆ ಬಂದು ಮೂರನೇ ಸ್ಥಾನಕ್ಕೆ ಹೋದರು, ಜನಸಾಮಾನ್ಯರು ಎದ್ದರೆ ಯಾರ್ಯಾರು ನಾವು ರಾಜರು, ಯುವರಾಜರು ಅನ್ಕೊಂಡಿರ್ತರೆ ಅವರೆಲ್ಲ ಮನೆ ಸೇರಿಕೊಳ್ತಾರೆ. 2023 ಕ್ಕೆ ನಾನು ಎಂಎಲ್‌ಎ ಆಗುವುದರ ಜೊತೆ ಪಕ್ಕದ ಕ್ಷೇತ್ರದಲ್ಲೂ ಎಂಎಲ್‌ಎ ಮಾಡ್ತಿನಿ, ಕಾಂಗ್ರೆಸ್‌ನವರ, ಸಿದ್ದರಾಮಯ್ಯ ಅವರ ಕಾಲು ಹಿಡಿದು ಎಂಪಿ ಆಗಿದ್ದಾರೆ. 2024 ಕ್ಕೆ ಎಂಪಿ ಚುನಾವಣೆಯಲ್ಲಿ ಆ ಪರಿಸ್ಥಿತಿ ಇರಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳು ಇರ್ತಾರೆ, ಆಗ ಪರದೆ ಮೇಲೆ ಪಿಕ್ಚರ್ ಏನು ಅಂಥ ತೋರಿಸ್ತಿನಿ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.