ಬಡವರ, ಹಸಿದವರ ಹೊಟ್ಟೆ ತುಂಬಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ‘ಶ್ರೀರಾಮಚಂದ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಡಿಹೊಗಳಿದ್ದಾರೆ.
ವಿಧಾನಸಭೆ : ಬಡವರ, ಹಸಿದವರ ಹೊಟ್ಟೆ ತುಂಬಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ‘ಶ್ರೀರಾಮಚಂದ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಡಿಹೊಗಳಿದ್ದಾರೆ.
ಶ್ರೀರಾಮಚಂದ್ರ ಮಾತ್ರ ಚುನಾವಣೆಯಲ್ಲಿ ಇಂಡಿಯಾ ಕೂಟಕ್ಕೆ ಒಲಿದುಬಿಟ್ಟ
ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವ ಅನುಮೋದಿಸಿ ಮಾತನಾಡಿ, ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರನ್ನು ವಿಬಿಜಿ ರಾಮ್ ಜಿ ಎಂದು ಬದಲಿಸಿದೆ. ಅಯೋಧ್ಯೆಯಲ್ಲಿ ರಾಮಂದಿರ ಕಟ್ಟಿದರು. ಆದರೆ, ಅಯೋಧ್ಯೆಯ ಶ್ರೀರಾಮಚಂದ್ರ ಮಾತ್ರ ಚುನಾವಣೆಯಲ್ಲಿ ಇಂಡಿಯಾ ಕೂಟಕ್ಕೆ ಒಲಿದುಬಿಟ್ಟ. ಈಗ ಮನರೇಗಾ ಹೆಸರು ಬದಲಿಸಿ ಶ್ರೀರಾಮಚಂದ್ರನನ್ನು ಒಲಿಸಿಕೊಳ್ಳಲು ಮತ್ತೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಜತೆಗೆ ಬಡವರ ಹಸಿವು ನೀಗಿಸುವ, ಹೊಟ್ಟೆ ತುಂಬಿಸುವ ಹಾಗೂ ಸ್ವಾಭಿಮಾನದಿಂದ ಬದುಕಲು ಪ್ರೇರೇಪಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ಶ್ರೀರಾಮಚಂದ್ರ ಎಂದು ಮುಖ್ಯಮಂತ್ರಿಯನ್ನು ಹಾಡಿಹೊಗಳಿದರು.
ಲಾಮಾ, ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾಗೆ ಸ್ಫೂರ್ತಿಯಾಗಿದ್ದರು
ಮಹಾತ್ಮಾ ಗಾಂಧೀಜಿ ಅವರು ದಲಾಯಿ ಲಾಮಾ, ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾಗೆ ಸ್ಫೂರ್ತಿಯಾಗಿದ್ದರು. ಮನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧೀಜಿ ಹೆಸರನ್ನೇ ಕೈ ಬಿಡಲಾಗಿದೆ. ಈ ಹಿಂದೆ ನರೇಗಾದಲ್ಲಿ ಕೇಂದ್ರ ಮತ್ತು ರಾಜ್ಯಗಳ ಅನುದಾನ ಶೇ.90:10ರ ಅನುಪಾತ ಇತ್ತು. ಈಗ ಶೇ.60:40 ಆಗಿದೆ. ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಿಂಗ್ಸ್ ಕಾಲೇಜಿನಲ್ಲಿ ಪಂಚ ಗ್ಯಾರಂಟಿಗಳಿಂದ ಕ್ರಾಂತಿಕಾರ ಬದಲಾವಣೆಗಳಾಗಲಿವೆ ಎಂದು ಹೇಳಲಾಗಿದೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಅಂದರೆ, ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳ ಮುಖಾಂತರ ಪ್ರತಿ ಮನೆ ತಲುಪುತ್ತಿದೆ. ಅನ್ನಭಾಗ್ಯದ ಮುಖಾಂತರ ಹಸಿದ ಹೊಟ್ಟೆ ತುಂಬಿಸುವ ಶ್ರೇಷ್ಠ ಕಾರ್ಯ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.


