ಡಿಕೆಶಿ ಗಂಡಸ್ತನದ ಪ್ರಶ್ನಿಸಿದ ಎಚ್ಡಿಕೆ ಸಂಸ್ಕೃತಿ ಅನಾವರಣ: ಶಾಸಕ ಕೆ.ಎಂ.ಉದಯ್ ಆಕ್ರೋಶ
ಡಿಸಿಎಂ ಡಿ.ಕೆ. ಶಿವಕುಮಾರ್ ಕುರಿತು ಗಂಡಸ್ತನದ ಬಗ್ಗೆ ಪ್ರಶ್ನಿಸುವ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು (ಆ.11): ಡಿಸಿಎಂ ಡಿ.ಕೆ. ಶಿವಕುಮಾರ್ ಕುರಿತು ಗಂಡಸ್ತನದ ಬಗ್ಗೆ ಪ್ರಶ್ನಿಸುವ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಮಾಲಗಾರನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ಬಸ್ ತಂಗುದಾಣ ಉದ್ಘಾಟಿಸಿದ ಬಳಿಕ ಡಿಕೆಶಿ ಬಗ್ಗೆ ಲಘುವಾಗಿ ಮಾತನಾಡಿರುವ ಎಚ್.ಡಿಕೆ ವಿರುದ್ಧ ನೇರವಾಗಿ ಹರಿಹಾಯ್ದರು. ತಾವು ಕೇಂದ್ರ ಸಚಿವ ಎನ್ನುವುದನ್ನು ಮರೆತು ಕುಮಾರಸ್ವಾಮಿ ಹಾದಿ ಬೀದಿಯಲ್ಲಿ ಜನರು ಮಾತನಾಡುವ ರೀತಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ನಪುಂಸಕ.
ಆತ ಮನುಷ್ಯನ ಹಾಗೂ ಅವರ ಯೋಗ್ಯತೆ ಬಗ್ಗೆ ಲಘವಾಗಿ ಮಾತನಾಡಿದ್ದಾರೆ. ಎಚ್ಡಿಕೆ ತಮ್ಮ ಕೇಂದ್ರ ಸಚಿವ ಸ್ಥಾನದ ಘನತೆಯನ್ನು ಕಾಪಾಡುವ ರೀತಿಯಲ್ಲಿ ಮಾತನಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು. ಕುಮಾರಸ್ವಾಮಿಗೆ ಮಾತ್ರ ಇಂತಹ ಕೀಳು ಮಾತುಗಳನ್ನಾಡಲು ಬರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಇರುವ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಸಹ ಕುಮಾರಸ್ವಾಮಿಗಿಂತಲೂ ದುಪ್ಪಟ್ಟು ಮಾತನಾಡಲು ಬರುತ್ತದೆ. ಇದಕ್ಕೆ ಕುಮಾರಸ್ವಾಮಿ ಅವಕಾಶ ಕೊಡದೆ ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಬುದ್ಧಿಮಾತು ಹೇಳಿದರು.
ರಾಚಯ್ಯ ಅವರ ಮಾರ್ಗದರ್ಶನದಂತೆ ನಾನು ಶೋಷಿತರ ಪರ: ಸಿಎಂ ಸಿದ್ದರಾಮಯ್ಯ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಾವು ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಅವರ ವಿರುದ್ಧ 50 ಡಿನೋಟಿಫಿಕೇಶನ್ ಪ್ರಕರಣ ಇರುವುದನ್ನು ಡಿಕೆಶಿ ಬಹಿರಂಗಪಡಿಸಿದ್ದಾರೆ. ಇದರಿಂದ ಭಯಭೀತರಾಗಿ ಸಚಿವ ಕುಮಾರಸ್ವಾಮಿ ಈ ರೀತಿ ಲಘು ಮಾತುಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ಪ್ರಕರಣಗಳ ಬಗ್ಗೆ ಆದಷ್ಟು ಶೀಘ್ರವಾಗಿ ತನಿಖೆ ನಡೆದು ಎಚ್ಡಿಕೆ ಎಷ್ಟು ಸತ್ಯ ಹರಿಶ್ಚಂದ್ರರು ಎನ್ನುವುದು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎನ್ನುವುದನ್ನು ಅವರು ಮರೆತಿದ್ದಾರೆ. ಅವರ ಮೇಲೆ ಇನ್ನೂ ಅನೇಕ ಭ್ರಷ್ಟಾಚಾರದ ಪ್ರಕರಣಗಳಿವೆ. ಅದರ ಜೊತೆಗೆ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಇಂತಹ ಕಳಂಕ ರಹಿತ ನಾಯಕರು ನಮ್ಮ ಜನಪರ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಕದಲೂರು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಅಲಿಯಾಸ್ ಗುರುಪ್ರಸಾದ್ ಇದ್ದರು.
ಶಾಸಕರಿಂದ ಬಸ್ ತಂಗುದಾಣ ಉದ್ಘಾಟನೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಲಗಾರನಹಳ್ಳಿಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ತಮ್ಮ ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು. ಗ್ರಾಮದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ಕೆಆರ್ ಐಡಿಎಲ್ ನಿರ್ಮಿಸಿರುವ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಚುನಾವಣೆ ನಂತರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಸ್ ತಂಗುದಾಣ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು ಎಂದರು.
ಮೀಸಲಾತಿಯೇ ಪರಿಹಾರವಲ್ಲ, ವೈಯಕ್ತಿಕ ಬದುಕು ಕಟ್ಟಿಕೊಳ್ಳಿ: ಸಚಿವ ಸತೀಶ್ ಜಾರಕಿಹೊಳಿ
ತದನಂತರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಕಾರಣ ತಂಗುದಾಣದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಭಾಗ್ಯ ಕಂಡಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕೆ ಆರ್ ಐಡಿಎಲ್ ನ ಎಇಇ ಪವಿತ್ರ, ಎಇ ರಾಕೇಶ್, ನಗರಕೆರೆ ಗ್ರಾಪಂ ಅಧ್ಯಕ್ಷೆ ಎನ್.ಆರ್.ಶಿಲ್ಪ ಜಯಲಿಂಗಯ್ಯ, ಸದಸ್ಯರಾದ ಗೌರಮ್ಮ, ಕಿರಣ್ ಕುಮಾರ್, ಸುರೇಶ್, ಉಮಾ ರಾಜೇಶ್, ಪಿಡಿಒ ಜಿ.ಕೆ. ರಂಜಿತಾ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ, ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರ್, ಮುಖಂಡ ರಾಮಲಿಂಗಯ್ಯ ಮತ್ತಿತರರು ಇದ್ದರು.