ಕಾಂಗ್ರೆಸ್ ಸದೃಢ ರಾಷ್ಟ್ರ ಕಟ್ಟುವ ಕೆಲಸ ಮಾಡಿದೆ: ಶಾಸಕ ಎಚ್.ಕೆ. ಪಾಟೀಲ್
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿವಿಧ ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣ ಮಾಡುವ ಮೂಲಕ ಸಂವಿಧಾನಕ್ಕೆ ಕುತ್ತು ತರುತ್ತಿದೆ. ರೈತರ ಸಾಲ ಮನ್ನಾ ಮಾಡದೆ ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರು. ಸಾಲಮನ್ನಾ ಮಾಡುವ ಸರ್ಕಾರವಾಗಿದೆ.
ಡಂಬಳ (ಆ.16): ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿವಿಧ ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣ ಮಾಡುವ ಮೂಲಕ ಸಂವಿಧಾನಕ್ಕೆ ಕುತ್ತು ತರುತ್ತಿದೆ. ರೈತರ ಸಾಲ ಮನ್ನಾ ಮಾಡದೆ ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರು. ಸಾಲಮನ್ನಾ ಮಾಡುವ ಸರ್ಕಾರವಾಗಿದೆ. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಜನರ ಮನಸ್ಸುಗಳ ಗಟ್ಟಿಗೊಳಿಸುವ ಜೊತೆ ಜೊತೆಗೆ ಸದೃಢ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಾ ಬಂದಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಡಂಬಳದ ತೋಂಟದಾರ್ಯ ಕಲಾಭವನದ ಆವರಣದಲ್ಲಿ ಶನಿವಾರ ರಾತ್ರಿ ಆಯೋಜನೆ ಮಾಡಿದ್ದ ಭಾರತ ರಾಷ್ಟ್ರದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಕಾಂಗ್ರೆಸ್ ಸ್ವಾಭಿಮಾನಿ ಪಾದಯಾತ್ರೆ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾದಯಾತ್ರೆ ಮೂಲಕ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗಿದೆ. ನಮಗೆ ಪಕ್ಷಕ್ಕಿಂತ ದೇಶ ಕಟ್ಟುವುದು ಮುಖ್ಯ ಎಂದರು.
Gadag: ಗಾಂಧಿ ತಾತನಿಗೆ ಊಟ ಉಪಚಾರ ಮಾಡಿದ್ದ ಪೋರಿ ಈಗ ಶತಾಯುಷಿ ಅಜ್ಜಿ
ಒಂದು ಕಡೆ ನ್ಯಾಯಾಲಯ ‘ಬಡವರಿಗೆ ಸಬ್ಸಿಡಿ ಯಾಕೆ ಕೊಡುತ್ತಿರಿ ನಿಲ್ಲಿಸಿ’ ಎನ್ನುತ್ತೆ ಆದರೆ ದೇಶದ ಸಂಪತ್ತನ್ನು ಲೂಟಿ ಮಾಡಿ ಪರಾರಿಯಾದವರ . 9 ಲಕ್ಷದ 99 ಸಾವಿರ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ಇದನ್ನು ಕೇಳುವವರು ಯಾರು? ಅಲ್ಲದೆ ಸರ್ಕಾರಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದರ ಮೂಲಕ ದೊಡ್ಡದೊಡ್ಡ ಉದ್ಯಮದವರ ಪಾಲುಮಾಡುವುದರ ಮೂಲಕ ಜನರಿಗೆ ರೈತರಿಗೆ ದೋಖಾ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿರುವ ರಾಷ್ಟ್ರದ ಜನ ಜಾಗ್ರತರಾಗಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಸರ್ಜಾಪುರ ಗ್ರಾಮದಿಂದ ಡಂಬಳ ಗ್ರಾಮದವರಿಗೆ 165 ಕಿ.ಮೀ. ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿರುವುದನ್ನು ನೋಡಿ ಆತ್ಮಬಲ ಬಂದಿದೆ. ದೇಶದ ಅಖಂಡತೆ, ಐಕತ್ಯೆ ಸೇರಿದಂತೆ ಪ್ರತಿಯೊಂದು ಜಾತಿ ಧರ್ಮದವರು ನೆಮ್ಮದಿಯಿಂದ ಇರಬೇಕು ಎನ್ನುವುದು ಕಾಂಗ್ರೆಸ್ ಉದ್ದೇಶ. ದೇಶಕ್ಕೆ ಎಷ್ಟೇ ಗಂಡಾಂತರ ಬಂದರೂ ಸೂರ್ಯ, ಚಂದ್ರರು ಇರುವ ತನಕ ದೇಶ ಕಟ್ಟುವ ಕಾರ್ಯ ಮಾಡುವ ಮೂಲಕ ಸಂವಿಧಾನದ ವಿಚಾರದಲ್ಲಿ ಮುನ್ನಡೆಯೋಣ ಎಂದರು.
ಕುಷ್ಟಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮತ್ತು ಯುವಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಮಾತನಾಡಿ, ಈ ಭಾಗದಲ್ಲಿ ಹುಲಿಗುಡ್ಡ ಏತ ನೀರಾವರಿ ತರುವುದರ ಮೂಲಕ ರೈತರು ಉತ್ತಮ ಬೆಳೆ ಹೊಂದುವಂತಾಗಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದ ಮೇರೆಗೆ ಶಾಸಕ ಎಚ್.ಕೆ.ಪಾಟೀಲ್, ಜಿ.ಎಸ್. ಪಾಟೀಲ್, ರಾಮಕೃಷ್ಣ ದೊಡ್ಡಮನಿಯವರ ಪರಿಶ್ರಮದ ಫಲವಾಗಿ ಲಕ್ಷಾಂತರ ರೈತರು ಆರ್ಥಿಕ ಸಬಲರಾಗಲು ಕಾರಣವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್!
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ಮಿಥುನಗೌಡ ಪಾಟೀಲ, ರಾಮು ಕಲಾಲ, ವೀರಣ್ಣ ಶೆಟ್ಟರ, ಅಶೋಕ ಮಂದಾಲಿ, ಈರಣ್ಣ ಪೂಜಾರ, ಬಸವರಾಜ ಪೂಜಾರ, ಪಾರೂಕ ಹುಬ್ಬಳ್ಳಿ, ವಿ.ಟಿ. ಮೇಟಿ, ಗವಿಸಿದ್ದಪ್ಪ ಬಿಸನಳ್ಳಿ, ಜ್ಯೋತಿ ಕುರಿ ಸೇರಿದಂತೆ ವಿವಿಧ ಘಟಕಗಳ ಮುಖಂಡರು ಮಹಿಳಾ ಘಟಕ ಹಾಗೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮುತ್ತಣ್ಣ ಕೊಂತಿಕಲ್ಲ ಸ್ವಾಗತಿಸಿದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿ ವಂದಿಸಿದರು.