ಮೈಸೂರು, (ಡಿ.22): ಬಿಜೆಪಿ ಪಕ್ಷದಲ್ಲಿ ಜೆಡಿಎಸ್ ವಿಲೀನ‌ದ ಕುರಿತಂತೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಇದರ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಕಾಂಗ್ರೆಸ್ ಜೊತೆಗಿನ‌ ಮೈತ್ರಿಗೆ ಜೆಡಿಎಸ್ ಗುಡ್ ಬೈ ಹೇಳಲು ಮುಂದಾಗಿದೆ.

ಈಗಾಗಲೇ ಮಂಡ್ಯ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಒಂದು ಸ್ಥಾನ ಇಲ್ಲದ ಬಿಜೆಪಿಗೆ ಜೆಡಿಎಸ್ ಬೆಂಬಲಿಸಿ ಅಧಿಕಾರ ಬಿಟ್ಟುಕೊಟ್ಟು ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಟ್ಟಿದೆ. ಇದೀಗ ಮೈಸೂರು ಪಾಲಿಕೆಯಲ್ಲೂ ಕಾಂಗ್ರೆಸ್‌ ಸಂಬಂಧವನ್ನು ಮುರಿದುಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ದಳಪತಿಗಳು ತಂತ್ರ ರೂಪಿಸಿದ್ದಾರೆ.

ದುಷ್ಮನ್‌ಗಳಿಬ್ಬರು ಕುಚುಕು ಗೆಳೆಯರಾಗುವತ್ತ ಹಜ್ಜೆ; ಬಿಜೆಪಿ-ಜೆಡಿಎಸ್ ಮೈತ್ರಿ ಯಾರಿಗೆ ಅನಿವಾರ್ಯ?

ಹೌದು...ಮುಂದಿನ ತಿಂಗಳು ನಡೆಯುವ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಎಲ್.ನಾಗೇಂದ್ರ ಸುಳಿವು ನೀಡಿದ್ದಾರೆ.

ಇತ್ತೀಚಿನ ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ನೋಡಿದರೆ ಜೆಡಿಎಸ್-ಕಾಂಗ್ರೆಸ್ ಜೊತೆ ಹೋಗಲ್ಲ. ಮೈಸೂರು ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ನೂರಕ್ಕೆ ನೂರು ಸತ್ಯ. ಈ ಹಿಂದೆಯೂ ನಾವು ಜೆಡಿಎಸ್ ಮೈತ್ರಿ ಮಾಡಿಕೊಂಡು 5 ವರ್ಷ ಪೂರೈಸಿದ್ದೆವು. ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ, ಬಿಜೆಪಿ ಮೇಯರ್ ಸ್ಥಾನ ಪಡೆಯಲಿದೆ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ.