ಹಾಸನ, (ಡಿ.21): ಬಿಜೆಪಿ ಜತೆ ಜೆಡಿಎಸ್ ವಿಲೀನ‌ ಎನ್ನುವ ಸುದ್ದಿ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಇದು ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ.

ಇನ್ನು ಈ ಬಗ್ಗೆ ಒಂದು ವೇಳೆ ಬಿಜೆಪಿ ಜೊತೆ ವಿಲೀನವಾದ್ರೆ ಜೆಡಿಎಸ್‌ನಲ್ಲಿ ಇರುವುದಿಲ್ಲ ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಹಿರಂಗವಾಗಿಯೇ ಹೇಳಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ನಾನು ರಾಜಕೀಯದಿಂದ ನಿವೃತ್ತಿ ಹೊಂದುವೆ ಎನ್ನುವ ಮಾತುಗಳನ್ನಾಡಿದ್ದಾರೆ.

'ಇದುವರೆಗಿನ ರಾಜಕಾರಣ ತಾತ್ಕಾಲಿಕ.. ನನ್ನ ಅಸಲಿ ಪಾಲಿಟಿಕ್ಸ್ 2023ಕ್ಕೆ ಶುರು'

ಹೌದು..ಇಂದು (ಸೋಮವಾರ) ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇವಣ್ಣ, ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಹೊಂದಾಣಿಕೆ ಪ್ರಶ್ನೆ ಇಲ್ಲ. ಹಾಗಾದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಸ್ಪಷ್ಟಪಡಿಸಿದರು.

 'ಲಿಂಬಾವಳಿ ಒಬ್ಬ ಥರ್ಡ್ ಕ್ಲಾಸ್' 
ಅರವಿಂದ ಲಿಂಬಾವಳಿ ಒಬ್ಬ ಥರ್ಡ್ ಕ್ಲಾಸ್ ಇಂಥವರಿಂದಲೇ ಅವರ ಪಕ್ಷ ಸರ್ವನಾಶವಾಗಲಿದೆ. ಪಕ್ಷದ‌ ಇತರೆ ನಾಯಕರು ಅವರಿಗೆ ಬುದ್ಧಿವಾದ ಹೇಳಲಿ ಎಂದು ಎಂದು ಎಚ್‌ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅರವಿಂದ ಲಿಂಬಾವಳಿ ಕೂಡಲೇ ಕ್ಷಮೆಯಾಚನೆ ಮಾಡುವಂತೆ ರೇವಣ್ಣ ಒತ್ತಾಯಿಸಿದರು. 

ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಮುಗಿಸುವುದು ಒಂದೇ‌ ಗುರಿಯಾಗಿದೆ. ಇದೇ ಕಾರಣಕ್ಕೆ ಜೆಡಿಎಸ್ ಮೇಲೆ‌ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಈ‌ ರೀತಿ ಸುಳ್ಳು ಸುದ್ದಿ ಹರಡುವುದು ತಪ್ಪು. ಗ್ರಾ.ಪಂ.ಚುನಾವಣೆ ‌ಸಂದರ್ಭದಲ್ಲಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

 '2023ರಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ'
ಈಗಾಗಲೇ ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ. 2023ರಲ್ಲಿ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸುತ್ತೇವೆ. ನಾನು ಜಿಲ್ಲೆ ಬಿಟ್ಟು ಹೋಗಿರಲಿಲ್ಲ, ಇನ್ನು ಮುಂದೆ ಎಲ್ಲೆಡೆ ಹೋಗುವೆ. ಸಂಕ್ರಾಂತಿ ನಂತರ ಎಲ್ಲರ ಜೊತೆ‌ ಈ ಕುರಿತು ಮಾತನಾಡುತ್ತೇವೆ ಎಂದರು.