ಶಾಸಕ ಜಿ.ಟಿ.ದೇವೇಗೌಡ ವಾಸ್ತವಾಂಶ ಹೇಳಿದ್ದಾರೆ: ಗೃಹ ಸಚಿವ ಪರಮೇಶ್ವರ್
ಎಫ್‌ಐಆರ್ ಆದವರು ರಾಜೀನಾಮೆ ಕೊಡಬೇಕು ಅನ್ನುವುದಾದರೆ ಎಲ್ಲರೂ ಕೊಡಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರು ಸರಿಯಾಗಿಯೇ ಹೇಳಿದ್ದಾರೆ. ಅಷ್ಟಕ್ಕೇ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಅರ್ಥೈಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಹುಬ್ಬಳ್ಳಿ (ಅ.06): ಎಫ್‌ಐಆರ್ ಆದವರು ರಾಜೀನಾಮೆ ಕೊಡಬೇಕು ಅನ್ನುವುದಾದರೆ ಎಲ್ಲರೂ ಕೊಡಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರು ಸರಿಯಾಗಿಯೇ ಹೇಳಿದ್ದಾರೆ. ಅಷ್ಟಕ್ಕೇ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಅರ್ಥೈಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಜಿ.ಟಿ.ದೇವೇಗೌಡರು ವಾಸ್ತವಾಂಶ ಮಾತನಾಡಿದ್ದಾರೆ. ಅಷ್ಟಕ್ಕೇ ಅವರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಹೇಳುವುದು ಸರಿಯಲ್ಲ. ಒಂದು ವೇಳೆ ಅವರಿಂದ ಪಕ್ಷಕ್ಕೆ ಶಕ್ತಿ ಬರುತ್ತದೆ ಎನ್ನುವುದಾದರೆ, ಪಕ್ಷಕ್ಕೆ ತೆಗೆದುಕೊಳ್ಳುತ್ತೇವೆ. ಯಾರೇ ಬಂದರೂ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದರು.
ಮುಡಾ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ತಾಳ್ಮೆಯಿಂದ ಕಾದು ನೋಡುವ ವ್ಯವಧಾನವೂ ಇಲ್ಲ. ಈಗಾಗಲೇ ಪ್ರಕರಣದ ಕುರಿತು ಪೊಲೀಸ್ ಹಾಗೂ ಲೋಕಾಯುಕ್ತ ತನಿಖೆ ನಡೆಸಲಾಗುತ್ತಿದೆ. ಅದನ್ನು ತಾಳ್ಮೆಯಿಂದ ಕಾದು ನೋಡಲಿ. ಮುಡಾ ಪ್ರಕರಣವನ್ನು ಪ್ರಧಾನಿ ಸೇರಿ ಬಿಜೆಪಿ ನಾಯಕರು ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ನೀಡಬೇಕು. ಅದನ್ನು ಮೀರಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ನನ್ನ ಪತ್ನಿ ಯಾವ ತಪ್ಪು ಮಾಡಿದ್ದಾಳೆ?: ವಿಪಕ್ಷಗಳ ವಿರುದ್ದ ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ
ವಾಗ್ದೇವಿ ಹೋಮದಲ್ಲಿ ಸಚಿವರು ಭಾಗಿ: ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿ ಸಮ್ಮುಖದಲ್ಲಿ ನಡೆದ ಶ್ರೀ ವಾಗ್ದೇವಿ ಹೋಮದಲ್ಲಿ ಬೆಳಿಗ್ಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಭಾಗಿಯಾಗಿ ಪೂಜೆ ಸಲ್ಲಿಸಿದರು. ಮಾತೆ ದುರ್ಗೆಯ ಎರಡನೇ ಸ್ವರೂಪವಾದ ಬ್ರಹ್ಮಚಾರಿಣಿ ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಸಚಿವರು ಪಡೆದು ಲಘು ಪೂರ್ಣಾಹುತಿ, ಅಷ್ಟವದಾನ ಸೇವೆ, ವಿಶೇಷ ಪೂಜೆ ನೆರವೇರಿಸಿದರು.
ನವರಾತ್ರಿಯ ಎರಡನೇ ದಿನ ದೇವಿ ದುರ್ಗೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿದೆ. ಕೈಯಲ್ಲಿ ಗುಲಾಬಿ ಧರಿಸಿರುವ ದೇವಿಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಇಂದು ಪ್ರಗತಿಯ ಸಂಕೇತವಾಗಿರುವ ಹಸಿರು ವಸ್ತ್ರವನ್ನು ಧರಿಸಿ ದೇವಿಯನ್ನು ಪೂಜಿಸಿದಲ್ಲಿ ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುವ ಅಮರ ಶಿಲ್ಪಿ ಜಕಣಾಚಾರಿ ಮುಖ್ಯ ವೇದಿಕೆಗೆ ಸಚಿವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತುಮಕೂರು ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಮುಜರಾಯಿ ತಹಶೀಲ್ದಾರ್ ಸವಿತ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತ್ಯಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.