ಸಿದ್ದರಾಮಯ್ಯನನ್ನ ಜೈಲಿಗೆ ಹಾಕಿಸ್ತೇನೆ: ಶಾಸಕ ಸಿ.ಟಿ. ರವಿ ವಾರ್ನಿಂಗ್
ಸಾಕ್ಷ್ಯಗಳಿಲ್ಲದೇ ಮಾತನಾಡುವ ಸಿದ್ದರಾಮಯ್ಯ ಅವರನ್ನು ಮಾನನಷ್ಟ ಮೊಕದ್ದಮೆ ಕೇಸಿನಲ್ಲಿ ಜೈಲಿಗೆ ಹಾಕಿಸ್ತೀನಿ ಎಂದು ಶಾಸಕ ಸಿ.ಟಿ. ರವಿ ಎಚ್ಚರಿಕೆ ನೀಡಿದರು.
ಕೊಡಗು (ಮೇ 06): ಬಿಜೆಪಿಯ ಭ್ರಷ್ಟಾಚಾರಕ್ಕೆ ಸಾಕಷ್ಟು ಸಾಕ್ಷಗಳಿವೆ. ಹೀಗಾಗಿ ಜನ ಬಿಜೆಪಿಗೆ ವೋಟ್ ಹಾಕುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಾಕ್ಷ್ಯಗಳಿಲ್ಲದೆ ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಪ್ರಕರಣದಲ್ಲಿ ಜೈಲಿಗೆ ಹೋಗಬೇಕಾಗುತ್ತದೆ ಸಿದ್ದರಾಮಯ್ಯನವರೆ ಎಚ್ಚರವಿರಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಎಚ್ಚರಿಕೆ ನೀಡಿದರು.
ಕೊಡಗಿನ ಶನಿವಾರಸಂತೆಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ನಡೆದ ಪ್ರಚಾರದ ಸಭೆಯ ಸಂದರ್ಭ ಅವರು ಮಾತನಾಡಿದರು. ತಾನು ಕಳ್ಳ ಪರರನ್ನು ನಂಬ ಎಂಬ ಮಾತಿದೆ. ಸಿದ್ದರಾಮಯ್ಯನವರೆ ಸ್ವಲ್ಪ ಅರ್ಕಾವತಿ ಹಗರಣದ ಬಗ್ಗೆ ಮಾತನಾಡಿ. ಅರ್ಕಾವತಿ ಹಗರಣದಲ್ಲಿ 8 ಸಾವಿರ ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ. ಇದನ್ನು ತಾವೇ ನೇಮಿಸಿದ ಕೆಂಪಣ್ಣ ಸಮಿತಿ ವರದಿಯಲ್ಲಿ ಹೇಳಲಾಗಿದೆ. ಅರ್ಕಾವತಿ ಹಗರಣ ನಡೆದಿದ್ದು ಯಾರ ಕಾಲದಲ್ಲಿ,? ಇದು ನಡೆದಿದ್ದು ಕಾಂಗ್ರೆಸ್ ಕಾಲದಲ್ಲಿ ತಾನೆ. ಆಗ ನೀವೆ ಮುಖ್ಯಮಂತ್ರಿ ಆಗಿದ್ದಿರಿ. ಸರ್ಕಾರದ ಮುಖ್ಯಸ್ಥರು ನೀವೆ ಆದ ಮೇಲೆ ಭ್ರಷ್ಟಾಚಾರದ ಹೊಣೆ ಯಾರದ್ದು.? ಅದನ್ನು ನೀವೆ ಹೊತ್ತುಕೊಳ್ಳಬೇಕು ಅಲ್ಲವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿ. ಟಿ. ರವಿ ಪ್ರಶ್ನಿಸಿದರು.
ಡಿಕೆಶಿಗೆ ಮತ್ತೊಂದು ಸಂಕಷ್ಟ: ಬಿಜೆಪಿ ಭ್ರಷ್ಟಾಚಾರ ರೇಟ್ ಕಾರ್ಡ್‌ಗೆ ಸಾಕ್ಷಿ ಕೇಳಿದ ಆಯೋಗ
ಇದ್ದ ಮೂವರಲ್ಲಿ ಕದ್ದವರು ಯಾರು ಎಂಬ ಗಾದೆ ಮಾತಿದೆ. ಇದ್ದವರು ಕಾಂಗ್ರೆಸ್ ನವರೇ ಎಂದ ಮೇಲೆ ಕದ್ದವರು ನೀವೆ ಅಲ್ಲವೆ.? ನಮ್ಮ ಭ್ರಷ್ಟಾಚಾರಕ್ಕೆ ಸಾಕ್ಷಿಗಳಿದ್ದರೆ ನೀವು ಯಾಕೆ ಕೊಡಲಿಲ್ಲ. ವಿಧಾನಸೌಧದಲ್ಲಿ ಯಾಕೆ ಸಾಕ್ಷಿಗಳನ್ನು ನೀಡಲಿಲ್ಲ. ನೀವೇ ವಿರೋಧ ಪಕ್ಷದ ನಾಯಕರಾಗಿದ್ದಿರಲ್ಲ. ಯಾಕೆ ಸಾಕ್ಷಿಗಳನ್ನು ಸಲ್ಲಿಸಲಿಲ್ಲ, ನ್ಯಾಯಾಲಯಕ್ಕೆ ಸಾಕ್ಷಿ ಯಾಕೆ ಕೊಡಲಿಲ್ಲ. ನಿಮ್ಮದು ಟೂಲ್ ಕಿಟ್ ಆಧಾರದಲ್ಲಿ ಬಿಜೆಪಿಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಷಡ್ಯಂತ್ರದ ಭಾಗ ಇದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಧಾರ ರಹಿತ ಆರೋಪ ಹೊರಿಸಿದ್ದಿರಿ ಸಿದ್ದರಾಮಯ್ಯನವರೇ. ಹಾಗೆ ಆರೋಪ ಮಾಡಿದವರು ಜೈಲಿಗೆ ಹೋದರು ಅದು ನೆನಪಿರಲಿ. ಮಾನನಷ್ಟ ಕೇಸ್ ಇದೆ, ಸಿದ್ದರಾಮಯ್ಯನವರೆ ಸುಳ್ಳು ಆರೋಪ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ನೆನಪಿರಲಿ ಸಿದ್ದರಾಮಯ್ಯನವರೇ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಹಿಂದು ವಿರೋಧಿ ನೀತಿಯಲ್ಲಿ ನಾಯಿ ಬಾಲದಂತೆ: ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಪ್ರಕಟಪಡಿಸುವ ಮೂಲಕ ನಾಯಿ ಬಾಲದಂತೆ ನೆಟ್ಟಗಾಗದ ಬುದ್ದಿಯನ್ನು ತೋರಿಸುತ್ತಾರೆ. ಹನುಮನ ನಾಡಿನಲ್ಲಿ ಹನುಮನ ಸೈನ್ಯವನ್ನೇ ನಿಷೇಧಿಸುವ ದುಸ್ಸಾಹಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಇದಕ್ಕೊಂದು ದೊಡ್ಡ ಬೆಲೆ ತೆರಬೇಕಾಗುತ್ತದೆ. ಬಜರಂಗದಳ ಅಂದರೆ ಹನುಮನ ಆರಾಧಕರು, ರಾಷ್ಟ್ರಭಕ್ತರು. ಅವರನ್ನು ನಿಷೇಧಿಸುತ್ತೇವೆ ಎನ್ನುವುದು ದಾರ್ಷ್ಟ್ಯದ ಮಾತು. ಆ ಮಾತಿಗೆ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕು. ಕಾಂಗ್ರೆಸ್ ನದು ನಾಯಿ ಬಾಲ ಇದ್ದಂತೆ ಯಾವಾಗಲೂ ನೆಟ್ಟಗಾಗಲ್ಲ. ಅವರು ಸೋತಾಗ ಸರಿ ಇರ್ತಾರೆ, ಗೆದ್ದರೆ ಮತ್ತೆ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ. ಅವರು ತಾಲಿಬಾನ್ ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ, ರಾಷ್ಟ್ರಭಕ್ತರನ್ನು ನಿಷೇಧಿಸುವ ಕೆಲಸ ಮಾಡುತ್ತಾರೆ. ಇಂತಹ ಬೌದ್ಧಿಕ ದಿವಾಳಿತನ ಅವರಿಗೆ ಇದೆ ಎಂದು ಸಿ. ಟಿ ರವಿ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರೇ ಕೊತ್ವಾಲ್ ರಾಮಚಂದ್ರನ ಶಿಷ್ಯ: ಇನ್ನು ಖರ್ಗೆ ಫ್ಯಾಮಿಲಿಯನ್ನು ಹತ್ಯೆ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ರವಿ ಎಂಬುವರೊಂದಿಗೆ ಮಾತನಾಡಿರುವ ಆಡಿಯೋವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ನನಗೆ ಆ ಮಾಹಿತಿ ಇಲ್ಲ. ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರ ಲೆಕ್ಕದಲ್ಲಿ ಅದೇ ಮೆರಿಟ್ ಇರಬಹುದು, ಆದರೆ ನಮಗೆ ಅದು ಮೆರಿಟ್ ಅಲ್ಲ. ಕೊಡಗಿನಲ್ಲಿ ಬಜರಂಗಿ ಮತ್ತು ಟಿಪ್ಪು ಆರಾಧಕರ ನಡುವೆ ನಡೆಯುವ ಚುನಾವಣೆ ಇದಾಗಿದೆ ಎಂದರು.
ಕಮ್ಮವಾರಿ ಸಂಘದ ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ: ಬಿಜೆಪಿ ನಾಯಕರ ಆಪ್ತನಿಗೆ ಸಂಕಷ್ಟ
ಬಹಿರಂಗ ಸಭೆಗೂ ಮುನ್ನ ಸಾವಿರಾರು ಕಾರ್ಯಕರ್ತರಿಂದ ಬೃಹತ್ ರೋಡ್ ಶೋ ನಡೆಯಿತು. ಇನ್ನು ಬಹಿರಂಗ ಸಮಾವೇಶಕ್ಕೆ ಆಗಮಿಸಿದ ಸಿ. ಟಿ ರವಿ ಮತ್ತು ಅಸ್ಸಾಂ ಸಿಎಂ ಹಿಮಂತ್ ಬಿಶ್ವಾಸ್ ಶರ್ಮ ಅವರಿಗೆ ಕಾರ್ಯಕರ್ತರು ಎರಡು ಜೆಸಿಬಿಗಳ ಮೇಲೆ ನಿಂತು ಹೂಮಳೆಗರೆದರು. ಕೊಡಗಿನ ಶನಿವಾರ ಸಂತೆಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ನಡೆದ ಪ್ರಚಾರ ಸಭೆ ಸಂದರ್ಭದಲ್ಲಿ ಸಿಟಿ ರವಿ ಮಾಧ್ಯಮಗಳೊಂದಿಗೆ ಮಾತನಾಡಿದರು.