ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸುವ ‘ಲೆಟರ್‌ ಬಾಂಬ್‌’ ಮೂಲಕ ಸುದ್ದಿಯಾಗಿದ್ದ ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ನಾನು ಯಾವ ಅಪರಾಧವನ್ನೂ ಮಾಡಿಲ್ಲ, ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.  

ಕಲಬುರಗಿ (ಜು.31): ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸುವ ‘ಲೆಟರ್‌ ಬಾಂಬ್‌’ ಮೂಲಕ ಸುದ್ದಿಯಾಗಿದ್ದ ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ನಾನು ಯಾವ ಅಪರಾಧವನ್ನೂ ಮಾಡಿಲ್ಲ, ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಟ್ಟಿನಿಂದ ಎದ್ದು ಹೊರಬರಲು ಸಿದ್ಧನಾಗಿದ್ದು ನಿಜ ಎಂದು ಖಚಿತಪಡಿಸಿರುವ ಅವರು, ಆತ್ಮಗೌರವಕ್ಕೆ ಧಕ್ಕೆ ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಸಭೆಯಲ್ಲೇ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಲ್‌ಪಿ ಸಭೆಯಲ್ಲಿ ಶಾಸಕರು ಕ್ಷಮೆ ಕೇಳಿದ್ದಾರೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಶಾಸಕಾಂಗ ಪಕ್ಷದ ಸಭೆ(ಸಿಎಲ್ಪಿ)ಯಲ್ಲಿ ನಾನು ಸೇರಿ ಯಾರೂ ಕ್ಷಮೆ ಕೇಳಿಲ್ಲ. ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇವೆ. ಆದರೆ ಕ್ಷಮೆ ಕೇಳುವಂತಹ ತಪ್ಪು ನಾವೇನು ಮಾಡಿದ್ದೇವೆ? ಮಾಡದ ತಪ್ಪಿಗೆ ಕ್ಷಮೆ ಕೇಳುವಷ್ಟುಹೇಡಿ ನಾನಲ್ಲ. ಆತ್ಮಗೌರವಕ್ಕೆ ಧಕ್ಕೆ ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುವೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಹೇಳಿದ್ದೇನೆ ಎಂದರು.

ಟೋಲ್‌ ಸಂಗ್ರಹಿಸುವವರು ನಾವಲ್ಲ, ಹೆದ್ದಾರಿ ಪ್ರಾಧಿಕಾರದವರು: ಸಿದ್ದರಾಮಯ್ಯ

ನಮ್ಮ ಪತ್ರದಲ್ಲಿನ ಆಗ್ರಹದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ನಡೆಸಿ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಅದು ನಮಗೆ ಸಮಾಧಾನ ತಂದಿದೆ. ಯಾರಿಗೋ ಹೆದರಿ ನಾನು ವೈರಲ್‌ ಆದ ಪತ್ರದ ವಿಚಾರದಲ್ಲಿ ಅಸಲಿ, ನಕಲಿ ಎಂದು ಹೇಳಿಲ್ಲ. ನಿಜವಾಗಿಯೂ ತಮ್ಮ ಪತ್ರ ನಕಲು ಮಾಡಿ ಇಲ್ಲ-ಸಲ್ಲದ ವಿಷಯಗಳನ್ನು ಸೇರಿಸಿ ಕಟ್‌ ಆ್ಯಂಡ್‌ ಪೇಸ್ಟ್‌ ಮಾಡಿ ಬೇರೆ ಪತ್ರ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ನಾನು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸ್‌ ತನಿಖೆ ಸಾಗಿದೆ ಎಂದರು. ಡಿವೈಎಸ್ಪಿ ಹಂತದ ಅಧಿಕಾರಿ, ಇನ್ಸ್‌ಪೆಕ್ಟರ್‌ ಮನೆಗೆ ಬಂದು ಹಳೆಯ ಲೆಟರ್‌ ಹೆಡ್‌, ಹೊಸ ಲೆಟರ್‌ ಹೆಡ್‌ ಎಲ್ಲಾ ಸಂಗ್ರಹಿಸಿ ಪರಿಶೀಲನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪತ್ರ ನಕಲಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇನ್ನು ಪೊಲೀಸರು ಸವಿವರ ತನಿಖೆ ನಡೆಸುವುದಾಗಿ ಹೇಳಿದ್ದಾರೆ ಎಂದು ಇದೇ ವೇಳೆ ಬಿ.ಆರ್‌.ಪಾಟೀಲ್‌ ಹೇಳಿದರು.

ಸಚಿವರು ತಡೆದರು: ನೀವು ಸಭೆಯಿಂದ ಅರ್ಧದಲ್ಲೇ ಎದ್ದು ಹೊರಟಿದ್ದೀರಲ್ವಾ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪಾಟೀಲರು, ಆತ್ಮಗೌರವಕ್ಕೆ ಧಕ್ಕೆ ಆದ್ರೆ ರಾಜೀನಾಮೆ ಕೊಟ್ಟು ಹೋಗುವೆ ಎಂದು ಹೇಳಿದ್ದು ನಿಜ. ಹೀಗೆ ಹೇಳಿ ಹೊರ ಹೋಗಲು ನಿಂತಾಗ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಅವರು ಸಮಾಧಾನ ಮಾಡಿದ್ದಾರೆ ಎಂದರು. ಪತ್ರದಲ್ಲಿ ಪ್ರಸ್ತಾಪಿಸಿದಂತೆ ನಾನು ಎಲ್ಲ ವಿಚಾರಗಳನ್ನು ನೇರವಾಗಿ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಅವರು ಸಭೆಯಲ್ಲಿ ವಿಸ್ತೃತವಾಗಿ ಅನೇಕ ಸಂಗತಿಗಳನ್ನು ಚರ್ಚಿಸಿದ್ದಾರೆ. ಅದರ ಬಗ್ಗೆ ನನಗೆ ತೃಪ್ತಿ ಇದೆ. 

ಈ ಬಾರಿ ಮೈಸೂರಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಮಹದೇವಪ್ಪ

ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಕಷ್ಟಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಗ್ಗೆ ತಮಗೂ ಗೊತ್ತಿದೆ ಎಂದು ಪಾಟೀಲರು ಹೇಳಿದರು. ಹೊಸ ಸರ್ಕಾರಗಳು ಬಂದಾಗ ವರ್ಗಾವಣೆಗಳೆಲ್ಲ ಸಹಜ. ಈ ಬಗ್ಗೆ ನಾನು ಏನೂ ಹೇಳಲಾರೆ ಎಂದ ಪಾಟೀಲರು, ನನ್ನ ನಿಜವಾದ ಪತ್ರದಲ್ಲಿ ಯಾರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಬಗ್ಗೆ ತಾವು ಎಲ್ಲಿಯೂ ಏನನ್ನೂ ಹೇಳಿಲ್ಲ. ಸರ್ಕಾರದಲ್ಲಿನ ಹಲವು ಸಚಿವರ ನಡವಳಿಕೆ ಬಗ್ಗೆ ಅಸಮಾಧಾನ ಇತ್ತು. ಆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಾಗಿ ಪಾಟೀಲ್‌ ಸ್ಪಷ್ಟಪಡಿಸಿದರು.