ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಇದ್ದಿದ್ದರೆ ‘ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿದು ಬಾರಯ್ಯ’ ಎಂದು ನೇರವಾಗಿ ಹೇಳುತ್ತಿದ್ದರು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಕೆ.ಆರ್.ಪೇಟೆ (ಜು.02): ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಇದ್ದಿದ್ದರೆ ‘ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿದು ಬಾರಯ್ಯ’ ಎಂದು ನೇರವಾಗಿ ಹೇಳುತ್ತಿದ್ದರು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಬಿ.ಆರ್.ಪಾಟೀಲ್ ಮತ್ತೆ ಕಿಡಿಕಾರಿದ್ದಾರೆ. ಕೃಷ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ರಾಜಕಾರಣ ನೋಡಿದರೆ ನನ್ನನ್ನು ಸೇರಿಸಿಕೊಂಡಂತೆ ಬಹುತೇಕರಿಗೆ ಕಾಲ ಮುಗಿದು ಹೋಗಿದೆ.
ಈಗ ನಡೆಯುತ್ತಿರುವುದು ಪ್ರೀತಿಯ ರಾಜಕಾರಣ ಅಲ್ಲ, ಹಣ ಬಲದ ರಾಜಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮಂತಹವರು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲದಂತಾಗಿದೆ. ಇದನ್ನು ಕೃಷ್ಣ ಅವರು ಕೂಡಾ ಅನುಭವಿಸಿ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದರು. ಇವೆಲ್ಲವನ್ನೂ ಕೃಷ್ಣ ಅವರು ತಮ್ಮ ಪುಸ್ತಕದಲ್ಲಿ ಸ್ವತಃ ತಾವೇ ಬರೆದುಕೊಂಡಿದ್ದಾರೆ. ಈ ಹಿಂದೆ ಕೃಷ್ಣ ಅವರಿಗೆ ಜನರೆ ದುಡ್ಡು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಏನಾಗಿದೆ? ಈಗಿನ ಯಾವ ರಾಜಕೀಯ ಪಕ್ಷಗಳು ಸರಿಯಿಲ್ಲ ಎಂದು ವಿಷಾದಿಸಿದರು.
ಕೃಷ್ಣ ಹಾಗೂ ನಾನು ಸಮಕಾಲೀನ ರಾಜಕಾರಣಿಗಳು. ನಮ್ಮಗಳ ಕಾಲದಲ್ಲಿ ಸೂಟ್‌ಕೇಸ್ ರಾಜಕಾರಣ ಇರಲಿಲ್ಲ. ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಅವರ ತತ್ವ, ಸಿದ್ಧಾಂತಗಳು ನಮ್ಮನ್ನೆಲ್ಲ ಮುನ್ನೆಲೆಗೆ ಬರುವಂತೆ ಮಾಡಿದವು. ಇಂದು ಯಾರಿಗೂ ಸಿದ್ದಾಂತಗಳೂ ಇಲ್ಲ. ವಿಚಾರಗಳೂ ಇಲ್ಲ. ಕೆಲವು ವ್ಯಕ್ತಿಗಳು ತಮ್ಮ ವಿಚಾರಗಳು ಹಾಗೂ ಸಿದ್ಧಾಂತಗಳ ಮೂಲಕ ಇನ್ನೂ ಬದುಕಿದ್ದಾರೆ. ಇಂತಹ ಸಿದ್ಧಾಂತಗಳ ಮೂಲಕ ಕೆ.ಆರ್.ಪೇಟೆ ಕೃಷ್ಣ ಬದುಕಿದ್ದರು. ಅಧಿಕಾರ ಅಂತಸ್ತು ಎಲ್ಲಾ ಕೈಯ್ಯಲ್ಲಿದ್ದರು ಸಹ ಎಂದು ಕೂಡ ಅಹಂ ಪಟ್ಟವರಲ್ಲ. ಅಧಿಕಾರವನ್ನು ತಲೆಗೆ ಹಾಕಿಕೊಂಡವರಲ್ಲ. ತಮ್ಮ ಜೀವಿತದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದಂತೆ ಸಮಾಜಮುಖಿ ಜೀವನ ನಡೆಸಿದ್ದರು ಬಿ.ಆರ್.ಪಾಟೀಲ್ ಬಣ್ಣಿಸಿದರು.
