ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಲಾಗಿದ್ದ ತಕರಾರು ಅರ್ಜಿ ವಜಾ ಮಾಡಿದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮಧ್ಯಪ್ರವೇಶಿಸಲು ತಮಗೆ ಅನುಮತಿ ನೀಡಬೇಕು. ರಾಜ್ಯ ಸಚಿವ ಸಂಪುಟದ ನಿರ್ಣಯಕ್ಕೆ ಸೀಮಿತವಾಗಿ ತಮ್ಮ ವಾದ ಆಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ ಯತ್ನಾಳ್‌ 

ಬೆಂಗಳೂರು(ನ.29):  ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸಚಿವ ಸಂಪುಟದ ನಿರ್ಣಯ ಆಕ್ಷೇಪಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಲಾಗಿದ್ದ ತಕರಾರು ಅರ್ಜಿ ವಜಾ ಮಾಡಿದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮಧ್ಯಪ್ರವೇಶಿಸಲು ತಮಗೆ ಅನುಮತಿ ನೀಡಬೇಕು. ರಾಜ್ಯ ಸಚಿವ ಸಂಪುಟದ ನಿರ್ಣಯಕ್ಕೆ ಸೀಮಿತವಾಗಿ ತಮ್ಮ ವಾದ ಆಲಿಸಬೇಕು ಎಂದು ಯತ್ನಾಳ್‌ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ತೆಲಂಗಾಣ ಜನ ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್ ಅಧಿಕಾರ ನಿಶ್ಚಿತ: ಡಿಕೆಶಿ

ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿದ್ದ ಶಿವಕುಮಾರ್‌ ಅವರ ತಕರಾರು ಅರ್ಜಿ ವಜಾಗೊಳಿಸಿರುವ ತೀರ್ಪಿನಲ್ಲಿ, ಈಗಾಗಲೇ ಶೇ.90ರಷ್ಟು ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದೆ ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಉಲ್ಲೇಖಿಸಿದೆ. ಈ ಹಂತದಲ್ಲಿ ಸಿಬಿಐಗೆ ನೀಡಿರುವ ಅನುಮೋದನೆ ಹಿಂಪಡೆಯುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಾಲಿ ಸರ್ಕಾರ ಮಧ್ಯಪ್ರವೇಶ ಮಾಡಲು ಮುಂದಾಗಿದೆ. ದುರುದ್ದೇಶದಿಂದ ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಹಾಗೂ ಸಾರ್ವಜನಿಕ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದೆ ಎಂದು ಯತ್ನಾಳ್‌ ಅವರು ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ಡಿ.ಕೆ.ಶಿವಕುಮಾರ್‌ ಪ್ರಕರಣದ ಕಾನೂನು ಸಿಂಧುತ್ವವನ್ನು ನ್ಯಾಯಾಲಯ ನಿರ್ಧರಿಸಲಿದೆ. ಹೀಗಿರುವಾಗ ತನಿಖೆಗೆ ನೀಡಿದ್ದ ಅನುಮೋದನೆ ಹಿಂಪಡೆಯುವ ನಿರ್ಧಾರ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವುದಾಗಿದೆ. ಇದು ಅಕ್ರಮ ಮತ್ತು ಸಂವಿಧಾನಬಾಹಿರ. ಈ ಕೃತ್ಯಕ್ಕೆ ಸರ್ಕಾರದ ಅಧಿಕಾರ ಬಳಕೆ ಮಾಡಲಾಗಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ನೆಲದ ಕಾನೂನು ಮತ್ತು ಸಂವಿಧಾನದ 144ನೇ ವಿಧಿಗೆ ವಿರುದ್ಧವಾಗಿ ಹಿಂಪಡೆಯಲಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಈ ತೀರ್ಮಾನವನ್ನು ನ್ಯಾಯಾಲಯದ ಗಮನಕ್ಕೆ ತರುತ್ತಿರುವುದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಮೂಗು ತೂರಿಸುವ ಸರ್ಕಾರದ ಧೋರಣೆ ಆಕ್ಷೇಪಿಸಿ ಮಾತ್ರ ಈ ಅರ್ಜಿ ಸಲ್ಲಿಸಲಾಗಿದೆ. ಈ ನೆಲೆಯಲ್ಲಿ ತಮ್ಮ ವಾದ ಆಲಿಸಬೇಕು ಎಂದು ಯತ್ನಾಳ್ ಕೋರಿದ್ದಾರೆ.

ಡಿಕೆಶಿ ಮೇಲ್ಮನವಿ ಇಂದು ವಿಚಾರಣೆ: ಡಿಸಿಎಂ ಪರ ಕಪಿಲ್‌ ಸಿಬಲ್‌ ವಾದ?

ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿರುವ ವಿಭಾಗೀಯ ಪೀಠದ ಮುಂದೆ ಬುಧವಾರ ಡಿ.ಕೆ.ಶಿವಕುಮಾರ್‌ ಅವರ ಮೇಲ್ಮನವಿ ವಿಚಾರಣೆಗೆ ಬರಲಿದೆ. ಸಚಿವ ಸಂಪುಟದ ನಿರ್ಣಯ ಮತ್ತು ಯತ್ನಾಳ್‌ ಅವರ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿರುವ ಮೇಲ್ಮನವಿಯ ವಿಚಾರಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಸಂಬಂಧ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಲಿದ್ದಾರೆ ಎಂದು ತಿಳಿದು ಬಂದಿದೆ.