ವಾಲ್ಮೀಕಿ, ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಜನಾಂಗ, ಲಿಂಗಾಯತ ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಜನಾಂಗಗಳ ಮೀಸಲಾತಿ ಬಗ್ಗೆ ವಿಧಾನ ಸಭೆಯಲ್ಲಿ ಮೊದಲು ಧ್ವನಿ ಎತ್ತಿದ್ದೇ ನಾನು.

ಯಮಕನಮರಡಿ (ಮಾ.26): ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿ ಮಾಡಿದರೆ ನಮ್ಮ ದೇಶ ಅಧೋಗತಿಗೆ ಹೋಗುತ್ತದೆ ಎಂದು ಶಾಸಕ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು. ಸಮೀಪದ ಹೆಬ್ಬಾಳ ಗ್ರಾಮದಲ್ಲಿ ವಿಜಯ ಸಂಕಲ್ಪ ಯಾತ್ರೆ ವೇಳೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ಬಟಾಟಿಯಿಂದ ಬಂಗಾರ ಮಾಡುವ ರಾಹುಲ್‌ ಗಾಂಧಿಯನ್ನು ಏನನ್ನಬೇಕು? ಎಂದು ಪ್ರಶ್ನಿಸಿದರು. ಹಿಂದೂಗಳ ಬಗ್ಗೆ ಅವಹೇಳನ ಮಾಡುವುದು ಇಂದು ರಾಜಕಾರಣದಲ್ಲಿ ಫ್ಯಾಶನ್‌ ಆಗಿಬಿಟ್ಟಿದೆ. ಹಾಳೂರಿಗೆ ಇದ್ದೋನೇ ಗೌಡ ಎಂಬಂತೆ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ವಿಪರ್ಯಾಸ ಎಂದು ಯತ್ನಾಳ್‌ ಲೇವಡಿ ಮಾಡಿದರು.

ಹಿಂದೂ ಮತಗಳಿಗೆ ಕಿಮ್ಮತ್ತಿಲ್ಲದಂತೆ ಮಾತನಾಡುವ ಶಾಸಕ ಸತೀಶ ಜಾರಕಿಹೊಳಿಯನ್ನು ಬರುವ ಚುನಾವಣೆಯಲ್ಲಿ ಜನರೇ ಬದಲಾವಣೆ ಮಾಡುವುದು ಖಚಿತ. ಈ ಬಾರಿ 11 ರೂಪಾಯಿ ಪಟ್ಟಿಹಾಕಿ ಕೆಡವುತ್ತೇವೆ. ಚುನಾವಣೆಯಲ್ಲಿ ಕತ್ತಿ ಹಿಡ್ಕೊಂಡು ಹೋರಾಡಬೇಕಿಲ್ಲ. ಬಿಜೆಪಿಗೆ ಒಂದ್‌ ಬಟನ್‌ ಒತ್ತಿದರೆ ಸಾಕು ಲಾಗಾ ಹೊಡೀತಾರ್‌ ಎಂದು ಟಾಂಗ್‌ ಕೊಟ್ಟರು.

ಅಂಬೇಡ್ಕರ್‌ ಸೋಲಿಸಿದ ಕಾಂಗ್ರೆಸ್‌ ತಿರಸ್ಕರಿಸಿ: ಶಾಸಕ ರಮೇಶ್‌ ಜಾರಕಿಹೊಳಿ ಕರೆ

ಮೀಸಲಾತಿ ಧ್ವನಿ ಎತ್ತಲಿಲ್ಲ ಜಾರಕಿಹೊಳಿ: ವಾಲ್ಮೀಕಿ, ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಜನಾಂಗ, ಲಿಂಗಾಯತ ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಜನಾಂಗಗಳ ಮೀಸಲಾತಿ ಬಗ್ಗೆ ವಿಧಾನ ಸಭೆಯಲ್ಲಿ ಮೊದಲು ಧ್ವನಿ ಎತ್ತಿದ್ದೇ ನಾನು. ಆದರೆ ವಾಲ್ಮೀಕಿ ಸಮುದಾಯದವರೇ ಆದ ಸತೀಶ ಜಾರಕಿಹೊಳಿ ವಾಲ್ಮೀಕಿ ಸಮುದಾಯದ ಬಗ್ಗೆ ಮಾತನಾಡಲಿಲ್ಲ ಎಂದು ಆರೋಪಿಸಿದರು. ನಮ್ಮ ಬಡವರಿಗೆ ಬೇಕಿರುವುದು ರಾಜಕೀಯ ಮಿಸಲಾತಿ ಅಲ್ಲ. 

ಸೌಲಭ್ಯಗಳಲ್ಲಿ ಮೀಸಲಾತಿ ಸಿಕ್ಕರೆ ಕುಟುಂಬವೇ ಉದ್ಧಾರವಾಗುತ್ತದೆ. ಬರುವ ದಿನಗಳಲ್ಲಿ ಇಂಥ ಮೀಸಲಾತಿ ಗೆಜೆಟ್‌ನಲ್ಲಿ ಜಾರಿಗೆ ಬರುತ್ತದೆ ಎಂದು ಹೇಳಿದರು. ಮೈಸೂರು ಸಂಸದ ಪ್ರತಾಪ ಸಿಂಹ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹಾಗೂ ಟಿಕೆಟ್‌ ಆಕಾಂಕ್ಷಿ ಬಸವರಾಜ ಹುಂದ್ರಿ ಮತ್ತು ಮಾರುತಿ ಅಷ್ಠಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಾ ಶುಗರ ಅಧ್ಯಕ್ಷ ನಿಖಿಲ್‌ ಕತ್ತಿ, ಉಜ್ವಲಾ ಬಡವನಾಚೆ, ಶ್ರೀಶೈಲ ಯಮಕನಮರಡಿ, ಡಾ.ರಾಜೇಶ ನೇರ್ಲಿ ಮುಂತಾದವರು ಉಪಸ್ಥಿತರಿದ್ದರು.

ನನ್ನನ್ನು ಕಟ್ಟಿ​ಹಾ​ಕಲು ಯಾರಿಂದಲೂ ಆಗು​ವು​ದಿಲ್ಲ: ಎಚ್‌.ಡಿ.ಕುಮಾ​ರ​ಸ್ವಾಮಿ

ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಚಾಮರಾಜ ನಗರದಿಂದ ಬಸವಕಲ್ಯಾಣದವರೆಗೆ 130 ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಬೆಳಗಾವಿ ಜಿಲ್ಲೆಯ 18 ಅಭ್ಯರ್ಥಿಗಳು ಬಿಜೆಪಿಯವರು ಗೆಲ್ಲುತ್ತಾರೆ. ಮಿಸಲಾತಿ ಘೋಷಣೆಯಾಗುತ್ತದೆ. ಪ್ರಧಾನಿ ಮೋದಿಯವರ ನಿರ್ಣಯದಂತೆ ಕರ್ನಾಟಕವನ್ನು ನಾವು ಯಾರಿಗೂ ಬಿಟ್ಟು ಕೊಡುವುದಿಲ್ಲ.
-ಬಸನಗೌಡ ಪಾಟೀಲ ಯತ್ನಾಳ್‌