Asianet Suvarna News Asianet Suvarna News

ಸೀರೆ, ಸಕ್ಕರೆಗೆ ಮರಳಾಗಬೇಡಿ: ಮತದಾರರಿಗೆ ಶಾಸಕ ಬಸನಗೌಡ ಯತ್ನಾಳ ಕಿವಿಮಾತು

ಸೀರೆ, ಸಕ್ಕರೆಗೆ ಮರುಳಾಗದೇ ಸುರಕ್ಷತೆ, ಸಮಗ್ರತೆ ಗಮನದಲ್ಲಿ ಇಟ್ಟುಕೊಂಡು ಚುನಾವಣೆಯಲ್ಲಿ ಮತ ಹಾಕಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತದಾರರಿಗೆ ಕಿವಿಮಾತು ಹೇಳಿದರು.

MLA Basanagouda Patil Yatnal Speech To The Voters At Vijayapura gvd
Author
First Published Mar 19, 2023, 9:42 PM IST

ವಿಜಯಪುರ (ಮಾ.19): ಸೀರೆ, ಸಕ್ಕರೆಗೆ ಮರುಳಾಗದೇ ಸುರಕ್ಷತೆ, ಸಮಗ್ರತೆ ಗಮನದಲ್ಲಿ ಇಟ್ಟುಕೊಂಡು ಚುನಾವಣೆಯಲ್ಲಿ ಮತ ಹಾಕಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತದಾರರಿಗೆ ಕಿವಿಮಾತು ಹೇಳಿದರು. ವಿಜಯಪುರದ ಸೈನಿಕ ಶಾಲೆಯಲ್ಲಿ ಆಯೋಜಿಸಿದ್ದ ಫಲಾನುಭವಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಕಿ ಸಾಗಣೆ ಒಂದು ದಂಧೆಯಾಗಿದೆ, ಕಾಂಗ್ರೆಸ್‌ ನಾಯಕರೊಬ್ಬರು 10 ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಾರೆ. ಪುಕ್ಕಟೆ ಅಕ್ಕಿ ಬೇಡಲು ನಾವೇನು ಭಿಕ್ಷೆ ಬೇಡುವವರೇ ಎಂದು ಪ್ರಶ್ನಿಸಿದರು.

ಇಂದು ದೇಶದಲ್ಲಿ ನಾವು ನೆಮ್ಮದಿಯಿಂದ ಇರಲು ಸರ್ದಾರ್‌ ವಲ್ಲಭಭಾಯಿ ಅವರ ಅವತಾರವಾಗಿರುವ ಮೋದಿ ಅವರೇ ಕಾರಣ. ಪಾರ್ಲಿಮೆಂಟ್‌ ಮೇಲೆ ದಾಳಿ ನಡೆದಾಗಲೂ ಆರೋಪಿಗಳ ವಿರುದ್ಧ ಕ್ರಮ ಆಗಲಿಲ್ಲ. ಸೈನಿಕರು ಕೂಡ ಆಗಿನ ಸರ್ಕಾರದ ಕಾಲದಲ್ಲಿ ಅಸಹಾಯಕರಾಗಿದ್ದರು. ಸೈನಿಕರ ಮೇಲೆ ಕೂಡ ಏಟುಗಳು ಬೀಳುತ್ತಿದ್ದವು. ಆದರೆ, ಈಗ ಮೋದಿ ಸೈನಿಕರಿಗೆ ಬಲ ತುಂಬಿದ್ದಾರೆ. ಒಂದು ಏಟು ಕೊಟ್ಟರೆ ಮನೆಯೊಳಗೆ ಹೊಕ್ಕು ಹೊಡೆಯಿರಿ ಎಂಬ ಧೈರ್ಯ ತುಂಬಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ಎಲ್ಲಿಯೂ ಯಾವ ಬಾಂಬ್‌ ಬಿದ್ದಿಲ್ಲ ಎಂದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್

ನರೇಂದ್ರ ಮೋದಿ ಪ್ರಧಾನಿಯಾಗಿ ಹಾಗೂ ಬೊಮ್ಮಾಯಿ ಅವರಂಥವರು ಮುಖ್ಯಮಂತ್ರಿಯಾಗಿದ್ದರೆ ಕರ್ನಾಟಕದಲ್ಲಿ ಒಂದೇ ಒಂದು ಗುಡಿಸಲು ಕಾಣುವುದಿಲ್ಲ ಎಂಬುದನ್ನು ಪ್ರಮಾಣ ಮಾಡಿ ಹೇಳುವೆ ಎಂದು ಘೋಷಿಸಿದರು. ವಿಜಯಪುರದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣವಾಗುತ್ತಿದೆ. ಅತ್ಯಾಧುನಿಕ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣಗೊಳ್ಳುತ್ತಿದೆ, ದ್ರಾಕ್ಷಿಗೆ ಸಂಬಂಧಿಸಿದ ವಿಶ್ವ ಮಾರುಕಟ್ಟೆವಿಜಯಪುರದಲ್ಲಿ ನೆಲೆ ಕಂಡುಕೊಳ್ಳಲಿದೆ ಎಂದರು. ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಪ್ರತಿ ಮನೆಯಲ್ಲೂ ಫಲಾನುಭವಿಗಳಿದ್ದಾರೆ. 

ಸಕಲರಿಗೂ ಯೋಜನೆಗಳ ಲಾಭ ತಲುಪುವಂತೆ ಮಾಡಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ನಾನು ಒಬ್ಬ ಫಲಾನುಭವಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ.  ಪ್ರಧಾನಿ ಮೋದಿ ಅವರು ಸನ್ಯಾಸಿಯಂತೆ ಜನಸೇವೆಯನ್ನೇ ಉಸಿರಾಗಿಸಿಕೊಂಡು ಒಂದು ಕ್ಷಣ ವಿಶ್ರಾಂತಿ ಪಡೆಯದೇ ಜನಹಿತಕ್ಕಾಗಿ ದುಡಿಯುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾವೇಶಕ್ಕೆ ಚಾಲನೆ ನೀಡಿದರು.

ಅಪ್ಪ-ಮಗ ಬರೀ ತರ್ಲೆ, ರೌಡಿಸಂ ಮಾಡಸ್ತಾರೆ: ಸಚಿವ ಸೋಮಣ್ಣ

ಶಾಸಕರಾದ ಡಾ.ದೇವಾನಂದ ಚವ್ಹಾಣ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ದ್ರಾಕ್ಷಿ ಹಾಗೂ ವೈನ್‌ ಬೋರ್ಡ್‌ ಅಧ್ಯಕ್ಷ ಎಂ.ಎಸ್‌.ರುದ್ರಗೌಡರ, ವಿಡಿಎ ಅಧ್ಯಕ್ಷ ಪರಶುರಾಮಸಿಂಗ್‌ ರಜಪೂತ, ಜಿಪಂ ಸಿಇಒ ರಾಹುಲ್‌ ಶಿಂಧೆ, ಎಸ್‌ಪಿ ಎಚ್‌.ಡಿ.ಆನಂದ ಕುಮಾರ ಪಾಲ್ಗೊಂಡಿದ್ದರು.

Follow Us:
Download App:
  • android
  • ios