ಬಿಎಸ್‌ವೈ ಜೈಲಿಗೆ ಹೋಗಿ ಬಂದು ನಂತರ ಸಿಎಂ ಆಗಿಲ್ಲವಾ?: ಸಿದ್ದರಾಮಯ್ಯಗೆ ಯತ್ನಾಳ್ ಪ್ರಶ್ನೆ!
ಮುಡಾ ಹಗರಣದ ವಿಚಾರದಲ್ಲಿ ಸಿಎಂ ರಾಜೀನಾಮೆ ನೀಡಿ, ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ ಎಂದು ಸಿಎಂಗೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಲಹೆ ನೀಡಿದರು.
ವಿಜಯಪುರ (ಸೆ.29): ಮುಡಾ ಹಗರಣದ ವಿಚಾರದಲ್ಲಿ ಸಿಎಂ ರಾಜೀನಾಮೆ ನೀಡಿ, ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ ಎಂದು ಸಿಎಂಗೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಲಹೆ ನೀಡಿದರು. ನಗರದ ಗಣೇಶ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ವಿಚಾರದಲ್ಲಿ ನಾನು ತಪ್ಪು ಮಾಡಿಲ್ಲ, ರಾಜೀನಾಮೆ ನೀಡಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರಾ?. ಡಿ ನೋಟಿಫೈಡ್ ಪ್ರಕರಣದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದು ನಂತರ ಸಿಎಂ ಆಗಿಲ್ಲವಾ? ಎಂದು ಪ್ರಶ್ನಿಸುವ ಸಿದ್ದರಾಮಯ್ಯಗೆ ಯತ್ನಾಳ ಟಾಂಗ್ ನೀಡಿದರು.
ಈ ಪ್ರಶ್ನೆಯನ್ನು ಕುಮಾರಸ್ವಾಮಿಗೆ ಕೇಳಿ, ಯಡಿಯೂರಪ್ಪ ಹಾದಿಯಲ್ಲಿ ಸಿಗದಿದ್ದರೂ ಅವರ ಮನೆಗೆ ಹೋಗಿ ಕೇಳಿ ಎಂದು ಕಿಚಾಯಿಸಿದರು. ಸಿಎಂ ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ಏಕೆ ರಾಜೀನಾಮೆ ನೀಡಿಲ್ಲ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಎಲ್ಲ ಪಕ್ಷಗಳು ಚುನಾವಣಾ ಬಾಂಡ್ ತೆಗೆದುಕೊಂಡಿವೆ. ಹಾಗಾದ್ರೆ ರಾಹುಲ್ ಗಾಂಧಿ ರಾಜೀನಾಮೆ ಕೊಡುತ್ತಾನಾ? ಎಂದು ಪ್ರಶ್ನಿಸಿದರು. ಚುನಾವಣಾ ಬಾಂಡ್ ಯಾರೂ ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಈಗ ಬಾಂಡ್ ತೆಗೆದುಕೊಳ್ಳುತ್ತಿಲ್ಲ.
ಎಚ್‌ಡಿಕೆಯದ್ದು ಹಿಟ್ ಅಂಡ್ ರನ್, ಜೇಬಿನಲ್ಲೇ ಇದೆ ತೆಗೆಯುತ್ತೇನೆ ಎನ್ನುವ ರಾಜಕಾರಣಿ: ಸಚಿವ ಶರಣ ಪ್ರಕಾಶ ಪಾಟೀಲ ಲೇವಡಿ
ಬಿಜೆಪಿಗೆ ಹೆಚ್ಚು ಹಣ ಕೊಟ್ಟಿರುವ ಕಾರಣ ಅವರಿಗೆ ತಾಪವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ವಿರುದ್ಧ ಕೇಸ್ ದಾಖಲಿಸಲು ಆದೇಶ ಎಲ್ಲರಿಗೂ ಅನ್ವಯವಾಗುತ್ತದೆ. ಎಫ್‌ಐಆರ್ ಮಾಡುತ್ತಾರೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಥಾನ ಬದಲಾವಣೆಗೆ ವಿಚಾರದ ಬಗ್ಗೆ ನಮ್ಮದೇ ಒಂದು ತಂಡವಿದೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಕಾಂಗ್ರೆಸ್‌ಗೆ, ಎಂ.ಬಿ.ಪಾಟೀಲ್, ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಅವರಿಗೆ ಬೈಯ್ಯುವುದಿದ್ದರೆ ಕೇಳಿ. ವಿಜಯೇಂದ್ರ ಗ್ರೇಟ್ ಲೀಡರ್ ಇದ್ದಾರೆ, ಸ್ವಲ್ಪ ದಿನ ಕಾಯಿರಿ ಎಲ್ಲವೂ ಸರಿಯಾಗುತ್ತದೆ ಎಂದ ಅವರು, ವಿಜಯೇಂದ್ರ ಬದಲಾಗಬಹುದು ಎಂಬ ನಿಗೂಢಾರ್ಥಕದಲ್ಲಿ ಹೇಳಿದರು.
ಕೆ.ಎಸ್.ಈಶ್ವರಪ್ಪ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ತಿಳಿಸಿದ ಅವರು, ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವಂತೆ ನಾವು ಸಭೆ ಮಾಡಿಲ್ಲ. ಅದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ರಾಜ್ಯದಲ್ಲಿ ಹಿಂದೂಗಳಿಗೆ ಸರ್ಕಾರದ ರಕ್ಷಣೆ ಇಲ್ಲ, ಗಲಾಟೆಯ ಪ್ರಕರಣದಲ್ಲಿ ಎ1 ನಿಂದ 32 ರವರೆಗೂ ಹಿಂದುಗಳ ಹೆಸರುಗಳಿವೆ. ನಂತರ ಮುಸ್ಲಿಮರ ಹೆಸರು ಇವೆ. ಮುಸ್ಲಿಂರಿಗಾಗಿ ಸರ್ಕಾರ ಇದೆ ಎಂಬ ವಾತಾವರಣ ಉಂಟಾಗಿದೆ. ಈಶ್ವರಪ್ಪರನ್ನು ನಾವು ಭೇಟಿಯಾಗಿದ್ದು ನಿಜ, ಅವರು ಬಿಜೆಪಿಗೆ ಬರಬೇಕು ಎಂದು ಬಯಸುತ್ತೇವೆ. ಅಂತಿಮವಾಗಿ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ನಮ್ಮ ಪಾದಯಾತ್ರೆಗೆ ಇನ್ನೂ ಅನುಮತಿ ಕೊಟ್ಟಿಲ್ಲ. ಅನುಮತಿ ಕೇಳುವುದರ ಜೊತೆಗೆ ಪಾದಯಾತ್ರೆಯ ವ್ಯಾಪ್ತಿಯನ್ನು ಹೆಚ್ಚಿಸುವ ಚಿಂತನೆ ಇದೆ. ಬೀದರನ ಬಸವಕಲ್ಯಾಣದಿಂದ ಹಿಡಿದು ರಾಜಧಾನಿವರೆಗೂ ಪಾದಯಾತ್ರೆ ಮಾಡುವ ಆಶಯವಿದೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹೋಗಿ ರಾಜಧಾನಿಯಲ್ಲಿ ದೊಡ್ಡ ರ್‍ಯಾಲಿ ಮಾಡುವ ಯೋಚನೆಯಿದೆ. ನಮ್ಮ ಹೈಕಮಾಂಡ್ ಅನುಮತಿ ಕೊಟ್ಟರೆ ನಿಶ್ಚಿತವಾಗಿ ಮಾಡುತ್ತೇವೆ. ಇನ್ನೂ ಉತ್ತರ ಸಿಕ್ಕಿಲ್ಲ. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ಮಾಡುವ ಹಾಗೂ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ ಸಮುದಾಯದ ಜನರಿಗೆ ಅನ್ಯಾಯದ ಕುರಿತು ಹೋರಾಟ ಮಾಡಿದರೆ ಬೆಂಬಲವಿದೆ.
ಇಂತಹ ಹೋರಾಟದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಎಂದು ಬರಲ್ಲ. ಈಗಲೂ ಸಿದ್ದರಾಮಯ್ಯ ಹಿಂದುಳಿದ ದಲಿತರ ಪರ ಹೋರಾಟ ಮಾಡಿದರೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಪಕ್ಷಾತೀತವಾಗಿ ಬೆಂಬಲ ಕೊಡುತ್ತೇವೆ, ಇದರಲ್ಲಿ ಪಕ್ಷವಿಲ್ಲ ಎಂದು ಹೇಳಿದರು. ಮೊನ್ನೆ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಭಾರಿ ಮಳೆಯಾಗಿದ್ದು, ಮಳೆಯಿಂದ ಹಾನಿಗೊಳಗಾದ ನಗರದ ಇಬ್ರಾಹಿಂಪುರ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದ್ದೇನೆ. ಹೆಚ್ಚು ಮಳೆಯಾದಾಗ ಸ್ವಾಭಾವಿಕವಾಗಿ ಹಾನಿಯಾಗುತ್ತದೆ. ಹಿಂದಿನಕ್ಕಿಂತ ಈಗ ಕಡಿಮೆ ಸಮಸ್ಯೆಯಾಗಿದೆ. ಅಮೆರಿಕಾ, ಜಪಾನ್ ದೇಶಗಳಲ್ಲು ಹಾನಿಯಾಗುತ್ತದೆ.
ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ ಕೊಡುವ ಕೆಲಸ ಆಗುತ್ತದೆ. ನಗರದಲ್ಲಿ ಮಳೆಯಿಂದ ಬಿದ್ದ ಮನೆಗಳಿಗೆ ಶಾಶ್ವತ ಮನೆಗಳನ್ನು ಕಟ್ಟಿಕೊಡುವ ಕೆಲಸ ಮಾಡುತ್ತೇವೆ. ಸ್ಲಂಗಳಲ್ಲಿ ಎಷ್ಟು ಮನೆಗಳು ಬಿದ್ದಿವೆ ಎಂಬ ಸರ್ವೇ ಮಾಡಿ ನೀಡಲಾಗುತ್ತದೆ. ಈ ಪ್ರದೇಶಗಳಿಗೆ ನಗರ ಶಾಸಕ ಭೇಡಿ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಬಹಳ ವೇಗವಾಗಿ ಬಂದರು, ವೇಗವಾಗಿ ಹೋದರು. ಎಂ.ಬಿ.ಪಾಟೀಲ್ ಧಾವಿಸಿ ಬಂದಿದ್ದರಿಂದ ನೀರೆಲ್ಲ ಹೋಯಿತು ಎಂದು ಅವರು ಅಮೆರಿಕಕ್ಕೆ ಹೋದರು ಎಂದು ಕಿಚಾಯಿಸಿದರು. ನಮ್ಮ ಕಾರ್ಪೊರೇಟರ್‌ಗಳು ಸಮರ್ಥರಿದ್ದು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಎಂ.ಬಿ.ಪಾಟೀಲರು ಚಿಂತೆ ಮಾಡುವುದು ಬೇಡ. ಅವರು ಅಮೆರಿಕಕ್ಕೆ ಹೋಗಿದ್ದಾರೆ. ಬಬಲೇಶ್ವರ- ತಿಕೋಟದಲ್ಲಿ ದೊಡ್ಡ ಮಳೆ ಆದರೆ ಶೀಘ್ರ ವಾಪಸ್ ಬಂದುಬಿಡುತ್ತಾರಾ ಎಂದು ಪ್ರಶ್ನಿಸಿದರು.
ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ ಸೇರಿ ಕೇಂದ್ರ ಸಚಿವರುಗಳು ರಾಜೀನಾಮೆ ಕೊಡಲಿ: ಸಚಿವ ಶರಣ ಪ್ರಕಾಶ್ ಪಾಟೀಲ್
ಅವಾಂತರಕ್ಕೆ ಒತ್ತುವರಿಯೇ ಕಾರಣ: ನೀರು ನುಗ್ಗೋ ಅವಾಂತರಕ್ಕೆ ರಾಜ ಕಾಲುವೆ ಒತ್ತುವರಿ ಹಾಗೂ ಗುಂಟಾ ಪ್ಲಾಟ್‌ಗಳ ನಿರ್ಮಾಣ ಕಾರಣ. ಒತ್ತುವರಿದಾರರ ಮೇಲೆ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಪುಡಾರಿ ಇರಲಿ ಮುಖಂಡ, ಯಾರೇ ಇದ್ದರೂ ರಾಜ ಕಾಲುವೆ ಖುಲ್ಲಾ ಆಗಬೇಕು. ಶ್ರೀಮಂತರು ಸಹ ಸ್ಲಂಗಳಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಕೋಟೆಗೋಡೆಗಳ ಬಳಿ ಶ್ರೀಮಂತರೆ ಮನೆ ಕಟ್ಟಿಕೊಂಡಿದ್ದಾರೆ. ಬಡವರಿಗೆ ನಾವು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಸಚಿವ ಎಂ.ಬಿ.ಪಾಟೀಲರು ನನ್ನ ಜೊತೆಗೆ ಮಾತನಾಡಿದ್ದಾರೆ. ರಾಜ ಕಾಲುವೆ ತೆರವು ವಿಚಾರದಲ್ಲಿ ಸಚಿವರಿಗೆ ನಾನು ಸಾಥ್ ಕೊಡುತ್ತೇನೆ. ಮಾಜಿ,ಹಾಲಿ ಕಾರ್ಪೊರೇಟರ್‌ಗಳು, ಈ ಜನ್ಮದಲ್ಲಿ ಶಾಸಕರಾಗದೇ ಉಳಿದವರು, ಮುಂದಿನ ಜನ್ಮದಲ್ಲಿ ಶಾಸಕರಾಗಬೇಕೆನ್ನುವವರ ವಿರುದ್ಧವೂ ಕ್ರಮ ಆಗಲಿದೆ. ನಿಜವಾದ ಬಡವರಿಗೆ ಸ್ಲಂ ಬೋರ್ಡ್ ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನೀಡುತ್ತೇವೆ ಎಂದು ಹೇಳಿದರು.