ಬಡವರನ್ನ ಸುಲಿದು ಸಾಹುಕಾರರನ್ನು ಸಾಕುವಂತಹ ದುರ್ಗತಿ ದೇಶಕ್ಕೆ ಬಂದಿದೆ: ಸಚಿವ ಕೃಷ್ಣ ಬೈರೇಗೌಡ
ಬಿಜೆಪಿ ಹೊಟ್ಟೆ ಪಾಡಿನ ವಿಷಯ ಮುಚ್ಚಿ ಹಾಕಲು, ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ಮಾಡುತ್ತಿದ್ದು, ಇಲ್ಲಿವರೆಗೂ ಸಕಸ್ಸ್ ಆಗಿತ್ತು, ಆದರೆ ಇನ್ನೂ ಮುಂದೆ ಇದು ಸಕ್ಸಸ್ ಆಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭವಿಷ್ಯ ನುಡಿದಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಸೆ.06): ಬಿಜೆಪಿ ಹೊಟ್ಟೆ ಪಾಡಿನ ವಿಷಯ ಮುಚ್ಚಿ ಹಾಕಲು, ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ಮಾಡುತ್ತಿದ್ದು, ಇಲ್ಲಿವರೆಗೂ ಸಕಸ್ಸ್ ಆಗಿತ್ತು, ಆದರೆ ಇನ್ನೂ ಮುಂದೆ ಇದು ಸಕ್ಸಸ್ ಆಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭವಿಷ್ಯ ನುಡಿದಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ. ಭಾವನಾತ್ಮಕ ವಿಷಯಗಳಿಂದ ದೇಶ ಉದ್ದಾರ ಆಗಲ್ಲ. ಭಾವನಾತ್ಮಕ ಅಮಲಿನಲ್ಲಿ ಮತ ಪಡೆಯುವ ಪದ್ದತಿ ಯಾವತ್ತಿಗೂ ಕೆಲಸ ಮಾಡುವುದಿಲ್ಲ. ಹಾಗಾಗಿ ಈ ಬಾರಿ ಬಿಜೆಪಿ ಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಇಂಡಿಯಾ ಬದಲು ಭಾರತ ಎಂದು ಹೆಸರಿಡಲು ಕೇಂದ್ರ ಚಿಂತನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಬೈರೇಗೌಡ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರ ಸ್ಥಿತಿಗತಿ ದುಸ್ಥಿತಿಯಲ್ಲಿದೆ. ಎಲ್ಲಾ ಬೆಲೆ ಏರಿಕೆ ಮಾಡಿ, ಜನರನ್ನ ಸುಲಿಗೆ ಮಾಡುತ್ತಿದ್ದಾರೆ. ದೇಶದ ಸ್ಥಿತಿ ಇಂದು ಬಡವರನ್ನು ಸುಲಿದು ಸಾಹುಕಾರರನ್ನು ಸಾಕುತ್ತಿದ್ದಾರೆ. ಹಸಿದವರಿಗೆ ಅನ್ನ ನೀಡಬೇಕು, ಉದ್ಯೋಗ ನೀಡಿದಾಗ ದೇಶ ಅಭಿವೃದ್ಧಿ ಆಗುತ್ತದೆ. ಬಡವರನ್ನು ಮತಕ್ಕಾಗಿ ಉಪಯೋಗ ಮಾಡಿಕೊಳ್ಳುವ ರಾಜಕೀಯ ಕೊನೆ ಆಗುತ್ತದೆ ಎಂದು ಹೇಳಿದರು.
ಬಕೆಟ್ ಹಿಡಿದು ಟಿಕೆಟ್ ಪಡೆದ BLAvaraGombe: ಶೆಟ್ಟರ್ ಪುತ್ರನಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ!
ರಾಜ್ಯ 83 ತಾಲ್ಲೂಕುಗಳನ್ನು 3-4 ದಿನಗಳಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗುವುದೆಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. 83 ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದೇವೆ. ಅದರಂತೆ ಇನ್ನೂ 3-4 ದಿನಗಳಲ್ಲಿ ಸಮೀಕ್ಷೆ ವರದಿ ಬರುಲಿದ್ದು, ಕೇಂದ್ರದ ಮಾರ್ಗಸೂಚಿ ಪ್ರಕಾರ ಬರ ಘೋಷಣೆ ಮಾಡುತ್ತೇವೆ ಎಂದರು. ಯಾವ ತಾಲ್ಲೂಕಿನಲ್ಲಿ ಬರ ಇದೆ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡುತ್ತೇವೆ. ಮೇವಿನ ಕೊರತೆ ಆಗಬಾರದು ಎಂಬ ಉದ್ದೇಶದಿಂದ ರೈತರಿಗೆ 20 ಕೋಟಿ ವೆಚ್ಚದಲ್ಲಿ ಉಚಿತ ಮೇವಿನ ಬೀಜ ನೀಡುತ್ತೇವೆ ಎಂದು ಹೇಳಿದ ಅವರು, ಬರ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ 150 ಉದ್ಯೋಗ ಖಾತ್ರಿ ಕೆಲಸ ನೀಡಲು ಚಿಂತನೆ ಮಾಡಿದ್ದೇವೆ. ಇದಕ್ಕಾಗಿ ಜಿಲ್ಲಾಧಿಕಾರಿ ಖಾತೆಗೆ 529 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಇಂಡಿಯಾ ಹೆಸರು ಬದಲಾವಣೆ ಚುನಾವಣಾ ಗಿಮಿಕ್: ಸಚಿವ ಜಮೀರ್ ಅಹ್ಮದ್
ಕಳೆದ ಆ.18 ರಂದು ಮಳೆ ಕೊರೆತೆ ಇರುವ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಒಂದು ಸುತ್ತಿನ ಬೆಳೆ ಸಮೀಕ್ಷೆ ಪ್ರಕಾರ 62 ತಾಲ್ಲೂಕು ಬರ ಪಟ್ಟಿಗೆ ಸೇರಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಬರ ಪಟ್ಟಿಗೆ ಆಯ್ಕೆಯಾಗಿದ್ದು, ಉಳಿದ 51 ತಾಲ್ಲೂಕು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಆದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು. ಜನರ ನಿರೀಕ್ಷೆಯಂತೆ ಬರ ಘೋಷಣೆ ಮಾಡಲು ಆಗುವುದಿಲ್ಲ. ಸಮರ್ಥವಾಗಿ ಜನರಿಗೆ ನ್ಯಾಯ ಕೊಡಲು ಕೇಂದ್ರ ಸರ್ಕಾರದ ಮಾನದಂಡ ಕೈ ಕಟ್ಟಿ ಹಾಕಿದಂತಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡಿದ್ದೆವೆ. ಇನ್ನೊಂದು ಬಾರಿ ಮಾನದಂಡ ಬದಲಾವಣೆ ಮಾಡಿ ಎಂದು ಶೀಘ್ರದಲ್ಲೇ ಮನವಿ ಮಾಡುತ್ತೇವೆ ಎಂದರು.