ಸ್ಪೀಕರ್‌ ಸ್ಥಾನದ ಕುರಿತು ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ, ‘ನನ್ನ ಹೇಳಿಕೆಗೆ ನಾನು ಬದ್ಧ’ ಎಂದುವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಸಮರ್ಥಿಸಿಕೊಂಡಿದ್ದಾರೆ. 

ಸುವರ್ಣ ಸೌಧ (ಡಿ.11): ಸ್ಪೀಕರ್‌ ಸ್ಥಾನದ ಕುರಿತು ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ, ‘ನನ್ನ ಹೇಳಿಕೆಗೆ ನಾನು ಬದ್ಧ’ ಎಂದುವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಸಮರ್ಥಿಸಿಕೊಂಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‌ ಅವರು, ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಹೈದರಾಬಾದ್‌ನಲ್ಲಿ ನಡೆದ ಸಭೆಯೊಂದರಲ್ಲಿ ಯಾರೋ ಒಬ್ಬ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಮಾನ ಅವಕಾಶ ಕೊಡಲ್ಲ ಎಂದಿದ್ದರು. ಅವರ ತಪ್ಪು ಭಾವನೆಯನ್ನು ಸರಿಪಡಿಸಲು ಕರ್ನಾಟಕದ ಉದಾಹರಣೆ ಕೊಟ್ಟಿದ್ದೆ ಎಂದರು.

ಕರ್ನಾಟಕದಲ್ಲಿ 17 ಮಂದಿ ಮುಸ್ಲಿಂ ಸಮುದಾಯದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಲಾಗಿದೆ. ಅವರಲ್ಲಿ 9 ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಪೈಕಿ ಐದು ಜನರಿಗೆ ಅಧಿಕಾರ ಕೊಡಲಾಗಿದ್ದು, ನಾನು ಮತ್ತು ರಹೀಂಖಾನ್‌ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸಲೀಂ ಅಹ್ಮದ್‌ ಅವರನ್ನು ವಿಧಾನ ಪರಿಷತ್ತಿ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿದ್ದು ನಜೀರ್‌ ಅಹ್ಮದ್‌ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಯು.ಟಿ.ಖಾದರ್‌ ಅವರನ್ನು ಸ್ಪೀಕರ್‌ ಮಾಡಿದ್ದಾರೆ ಎಂದು ವಿವರಿಸಿ ಹೇಳಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಪೀಕರ್‌ ಅವರಿಗೆ ನನ್ನನ್ನು ಸೇರಿದಂತೆ ಬಿಜೆಪಿಯವರೂ ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. ಇದು ಹೇಗೆ ಅಪಮಾನ ಅಗುತ್ತದೆ? ಸಭಾಧ್ಯಕ್ಷರ ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕಲ್ಲವೇ? ಅಂತಹ ಸ್ಥಾನವನ್ನು ಕಾಂಗ್ರೆಸ್‌ ಕೊಟ್ಟಿದ್ದೆ ಎಂದಿದ್ದೇನೆ. ಎಲ್ಲಿಯೂ ಹಿಂದುಗಳು ನಮಸ್ಕಾರ ಮಾಡಬೇಕು ಎಂದು ನಾನು ಹೇಳಿದ್ದೇನೆಯೇ ಎಂದು ಪ್ರಶ್ನಿಸಿದರು.

ಆಗ ಮುಸ್ಲಿಮರ ಓಲೈಸುತ್ತಿದ್ದ ಯತ್ನಾಳ್‌ ಈಗ ಹಿಂದೂ ಹುಲಿ: ಸಚಿವ ಎಂ.ಬಿ.ಪಾಟೀಲ್‌

ಸದನದಲ್ಲಿ ಚರ್ಚಿಸಲು ಬಿಜೆಪಿಯವರಿಗೆ ಯಾವ ವಿಷಯವೂ ಇರಲಿಲ್ಲ. ಹೀಗಾಗಿ ಸದನದ ಕಲಾಪ ಡಿ.4ರಂದು ಆರಂಭವಾಗಿದ್ದರೂ ಏನೂ ಮಾತನಾಡಲಿಲ್ಲ. ಈಗ ಈ ವಿಚಾರವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಡಲು ನಾನು ಸಿದ್ದನಾಗಿದ್ದೇನೆ. ಆದರೆ, ಅದನ್ನು ಕೇಳಲು ಬಿಜೆಪಿಯವರು ಸಿದ್ಧರಿಲ್ಲ. ಬಿಜೆಪಿಯಲ್ಲಿ ಗೊಂದಲವಿದ್ದು ಹೊಂದಾಣಿಕೆಯಿಲ್ಲ. ಅವರ ಹೈಕಮಾಂಡ್‌ನಿಂದ ಈ ವಿಚಾರವನ್ನು ಚರ್ಚಿಸಲು ಸೂಚನೆ ಬಂದಿದ್ದು ಅದನ್ನು ಮಾಡುತ್ತಿದ್ದಾರೆ. ನಾನೇನು ತಪ್ಪು ಹೇಳಿಲ್ಲ. ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಜಮೀರ್‌ ಸ್ಪಷ್ಟಪಡಿಸಿದರು.