ಬೆಂಗಳೂರು, (ಸೆ.09): ಮುಂದಿನ ವರ್ಷ ಜೂನ್​ನಲ್ಲಿ 25 ಸಾವಿರ ಮನೆಗಳ ನಿರ್ಮಾಣ ಆಗಲಿದೆ. ಅರ್ಹ ಫಲಾನುಭವಿಗಳಿಗೆ ಮನೆ ಕೊಡುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಬುಧವಾರ ಹೇಳಿದ್ದಾರೆ.

ವಿಕಾಸಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಈ ಕೆಲಸವನ್ನ ಮಾಡಿಯೇ ತೀರುತ್ತೇನೆ. ಜೂನ್ ಒಳಗೆ ಮನೆ ನೀಡದಿದ್ರೆ, ಮಂತ್ರಿಸ್ಥಾನ ಅಲ್ಲ, ನಾನು ರಾಜಕಾರಣ ಬಿಟ್ಟು ಹೋಗುತ್ತೇನೆ. ಇದು ನನ್ನ ಸವಾಲು ಎಂದು ಖಡಕ್‌ ಆಗಿ ಹೇಳಿದರು.

ಶೀಘ್ರ 35 ಸಾವಿರ ಮನೆ ಫಲಾನುಭವಿಗಳಿಗೆ ಹಸ್ತಾಂತರ: ಸೋಮಣ್ಣ

2016ರಿಂದ ಇದುವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ, ಈ ಬಗ್ಗೆ ನನ್ನ ಮನಸ್ಸಿಗೆ ತುಂಬಾ ನೋವಿದೆ. ವಿಚಾರವನ್ನ ನಾನು ಸೀರಿಯಾಸ್​ಗೆ ತೆಗದುಕೊಂಡಿದ್ದೇನೆ ಎಂದರು.

ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ರಾಜ್ಯಕ್ಕೆ ಯಡಿಯೂರಪ್ಪರ 50 ವರ್ಷದ ಕೊಡುಗೆಯಿದೆ. ಸಿಎಂ ಮಗನಾಗೋಕೆ ವಿಜಯೇಂದ್ರ ಅರ್ಜಿ ಹಾಕಿಕೊಂಡಿರಲಿಲ್ಲ, ಇಲ್ಲ-ಸಲ್ಲದ ಆರೋಪಗಳು ಮಾಡೋದು ಬೇಡ. ಅಧಿಕಾರದಲ್ಲಿ ಇದ್ದಾರೆ ಎಂದು ಕಲ್ಲು ಹೊಡೆಯುವ ಕೆಲಸ ಯಾರು ಮಾಡಬಾರದು. ನಾನು ಈ ಬಗ್ಗೆ ಏನು ಮಾತಾಡಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಕೈ ಮುಗಿದರು.