75 ವರ್ಷದ ಬಳಿಕ ಕಾಂಗ್ರೆಸ್ಸಿಗರಿಗೆ ಜ್ಞಾನೋದಯ: ಸಚಿವ ಸುನೀಲ್ ಕುಮಾರ
ಕನ್ನಡಿಗರ ಯಾವುದೇ ಭಾವನೆಗಳನ್ನು ಧಿಕ್ಕರಿಸುವಂತಹ ಪ್ರಯತ್ನ ನಮ್ಮ ಸರ್ಕಾರ ಯಾವತ್ತೂ ಮಾಡಿಲ್ಲ ಮತ್ತು ಮುಂದೇನು ಮಾಡುವುದಿಲ್ಲ: ಸಚಿವ ಸುನೀಲ ಕುಮಾರ
ಬೆಳಗಾವಿ(ಡಿ.21): ವೀರ ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್‌ನವರು ಮೃದು ಧೋರಣೆ ತಾಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 75 ವರ್ಷಗಳ ಬಳಿಕ ಬೆಳಗಾವಿಯಲ್ಲಿ ಜ್ಞಾನೋದಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ ಕುಮಾರ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ನಡೆಯುತ್ತಿರುವುದು ಚರ್ಚೆ, ವಿಮರ್ಶೆ ಮಾಡಲಿಕ್ಕೆ. ಯಾವುದೇ ವಿಚಾರ ತಂದರು ಕೂಡ ಚರ್ಚೆ ಮಾಡುವುದಕ್ಕೆ ನಾವು ಮುಕ್ತ ಮನಸು ಹೊಂದಿದ್ದೇವೆ. ಜನಪರ ನಿಲುವಿನ ಚರ್ಚೆಯನ್ನು ನಾವು ತೆಗೆದುಕೊಳ್ಳುತ್ತೇವೆ. ನಮ್ಮ ನಿಲುವನ್ನು ಗಟ್ಟಿಯಾಗಿ ವಿಧಾನಸಭೆಯಲ್ಲಿ ಮಂಡನೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರ ಎಸ್ಸಿ, ಎಸ್ಟಿವಿಧೇಯ ಮಂಡನೆ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Winter Assembly Session: ಸಾವರ್ಕರ್ ವಿಚಾರದಲ್ಲಿ 'ಸಾಫ್ಟ್' ರಾಜಕೀಯ: ಈ ವಿಚಾರವಾಗಿ ಸಿದ್ದು ಹೇಳಿದ್ದೇನು?
ಈಗಾಗಲೇ ವಿದ್ಯುತ್ ದರದಲ್ಲಿ ಏರಿಕೆ ವಿಚಾರವಾಗಿ, ಕಂಪನಿಗಳು ಕೆಎಸ್‌ಆರ್‌ಸಿ ಮುಂದೆ ಹೋಗಿದೆ. ಅದು ಸಾರ್ವಜನಿಕ ಅಹವಾಲಿಗೆ ಇಡುತ್ತದೆ. ಈ ವರ್ಷ ಜನಹಿತವಾದ ದರ ನಿಗದಿಪಡಿಸುವುದು ನಮ್ಮ ನಿಲುವಾಗಿದೆ ಎಂದು ವಿದ್ಯುತ್ ದರ ಹೆಚ್ಚಳ ವಿಚಾರ ಕುರಿತು ತಿಳಿಸಿದರು.
ಈಗಾಗಲೇ ಗಡಿ ವಿಷಯಕ್ಕೆ ಸಂಬಂಧಪಟ್ಟಂತೆ ಕನ್ನಡಿಗರ ಭಾವನೆಗಳಿಗೆ ನಮ್ಮ ಸರ್ಕಾರ ಅತ್ಯಂತ ಗರಿಷ್ಠವಾದ ಆದ್ಯತೆ ನೀಡುತ್ತಿದೆ. ಕನ್ನಡಿಗರ ಯಾವುದೇ ಭಾವನೆಗಳನ್ನು ಧಿಕ್ಕರಿಸುವಂತಹ ಪ್ರಯತ್ನ ನಮ್ಮ ಸರ್ಕಾರ ಯಾವತ್ತೂ ಮಾಡಿಲ್ಲ ಮತ್ತು ಮುಂದೇನು ಮಾಡುವುದಿಲ್ಲ. ಇನ್ನು ವಿವಾದಕ್ಕೆ ಸಂಬಂಧಪಟ್ಟಂತೆ ಇಬ್ಬರು ಮುಖ್ಯಮಂತ್ರಿಗಳು, ಕೇಂದ್ರ ಗೃಹ ಸಚಿವರ ಜತೆ ಮಾತುಕತೆ ಮಾಡಿದ್ದಾರೆ. ಯಾವುದೇ ಮಾತುಕತೆ ಇರಲಿ ಚರ್ಚೆ ಇರಲಿ. ಅದರಲ್ಲಿ ಕರ್ನಾಟಕದ ಹಿತ ಬಹಳ ಪ್ರಮುಖವಾದ ಸಂಗತಿ ಎಂದು ಮಹಾರಾಷ್ಟ್ರ ಗಡಿ ವಿಚಾರ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಗಡಿ ಭಾಗಗಳಲ್ಲಿರುವ ಕನ್ನಡಿಗರ ಭಾವನೆಗಳಿಗೂ ಗೌರವ ಕೊಡುತ್ತದೆ. ಆ ಭಾಗದ ಶಾಲಾ ಕಾಲೇಜು, ಇನ್ನಿತರ ಅಭಿವೃದ್ಧಿ ಚಟುವಟಿಕೆಗಳಿಗೂ ನಮ್ಮ ಸರ್ಕಾರ ಆದ್ಯತೆ ಕೊಡುತ್ತದೆ ಎಂದು ಹೇಳಿದರು.