Asianet Suvarna News Asianet Suvarna News

'ಸಿದ್ದರಾಮಯ್ಯರನ್ನ ಒಮ್ಮೆ ಆರ್‌ಎಸ್‌ಎಸ್ ಕಚೇರಿಗೆ ಕರೆದೊಯ್ಯುತ್ತೇವೆ'

* ಆರ್‌ಎಸ್‌ಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
* ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್‌ಟಿ ಸೋಮಶೇಖರ್ ತಿರುಗೇಟು
* ಸಿದ್ದರಾಮಯ್ಯರನ್ನ ಒಮ್ಮೆ ಆರ್‌ಎಸ್‌ಎಸ್ ಕಚೇರಿಗೆ ಕರೆದೊಯ್ಯುತ್ತೇವೆ ಎಂದ ಸಚಿವ

Minister ST Somashekar Hits Back at Siddaramaiah For RSS Statement rbj
Author
Bengaluru, First Published May 29, 2022, 6:39 PM IST | Last Updated May 29, 2022, 6:39 PM IST

ಮೈಸೂರು, (ಮೇ.29): ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ಬಗ್ಗೆ ಅಧ್ಯಯನ ಮಾಡಿಲ್ಲ. ಅವರನ್ನು ಒಮ್ಮೆ ಆರ್ ಎಸ್ ಎಸ್ ಕಚೇರಿಗೆ ಕರೆದೊಯ್ಯುತ್ತೇವೆ. ಅವರು ಅಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲಿ. ಇಲ್ಲವೇ ಆರ್ ಎಸ್ ಎಸ್ ಕುರಿತ ಪುಸ್ತಕ ನೀಡುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿ ಇಂದು(ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾತಿಗೆ ತೂಕ ಇತ್ತು. ಆದರೀಗ ಅವರ ಪಕ್ಷದ ಕಾರ್ಯಕರ್ತರೇ ಅವರ ಮಾತನ್ನು ಕೇಳುತ್ತಿಲ್ಲ. ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಲಾಗಿದೆ. ಅವರ ಮಾತಿಗೆ ಕಿಮ್ಮತ್ತು ಇಲ್ಲ. ಕಡಗಣನೆ ಮಾಡುವಾಗ ಹೀಗೆ ಆರ್ ಎಸ್ ಎಸ್, ಮತ್ತೊಂದು ವಿಚಾರ ಸೃಷ್ಟಿಸಿ ಮುಂಚೂಣಿಗೆ ಬರಲು ಯತ್ನಿಸುತ್ತಾರೆ ಎಂದರು.

'ಹೊರಗಿನಿಂದ ಬಂದವರು... 'ಆರೆಸ್ಸೆಸ್‌ ಮೂಲ ಕೆದಕಿದ ಸಿದ್ದರಾಮಯ್ಯ

ಕಳೆದ ಎರಡು ವರ್ಷಗಳಿಂದ ನಾನು ಆರ್ ಎಸ್ ಎಸ್ ಬಗ್ಗೆ ತಿಳಿದುಕೊಂಡಿದ್ದೇನೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದನ್ನ ಸಿದ್ದರಾಮಯ್ಯ ಅವರು ಸಹಿಸುತ್ತಿಲ್ಲ. ಸದ್ಯದಲ್ಲೇ ಅವರಿಗೆ ಆರ್ ಎಸ್ ಎಸ್ ಕುರಿತ ಪುಸ್ತಕ ಕಳುಹಿಸಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಸುಮ್ಮನೇ ಟೀಕೆ ಮಾಡುವ ಬದಲು ವಿರೋಧ ಪಕ್ಷವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೀಕ್ಷಿಸಲಿ. ಆರ್ ಎಸ್ ಎಸ್ ಬಗ್ಗೆ 1% ಜ್ಞಾನ ಇಲ್ಲ ಟಾಂಗ್ ಕೊಟ್ಟರು.

ವಿಶ್ವನಾಥ್ ಅವರು ಯಾವಾಗಲೂ ಸಲಹೆ ಕೊಡುತ್ತಿರುತ್ತಾರೆ. ಒಳ್ಳೆಯ ಅಂಶವನ್ನು ಸ್ವೀಕಾರ ಮಾಡಿ ಉಳಿದಿದ್ದನ್ನು ಬಿಡುತ್ತಾರೆ.
ಪಕ್ಷದ ಅಧ್ಯಕ್ಷರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಪಠ್ಯ ಪುಸ್ತಕ ಪರಿಷ್ಕರಣ ಸಂಬಂಧ ಸಚಿವ ನಾಗೇಶ್ ಅವರು ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಪಠ್ಯ ಪುಸ್ತಕಗಳನ್ನು ಯಾರೂ ಕೂಡ ಸರಿಯಾಗಿ ಓದದೇ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಪುಸ್ತಕ ಓದಲಿ.‌ ಕೇಸರಿಕರಣ ಬಗ್ಗೆ ಚರ್ಚೆ ಆಮೇಲೆ ಮಾಡಲಿ. ವಿಶ್ವನಾಥ್ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಾರೆ,  ಹೀಗಾಗಿ ಮಾತನಾಡುತ್ತಾರೆ ಎಂದರು.

ಅಷ್ಟಕ್ಕೂ ಸಿದ್ದರಾಮಯ್ಯ ಹೇಳಿದ್ದೇನು?
ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್‌ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್‌ಸಿಂಗ್ ಗಿಂತ ದೇಶಭಕ್ತ ಬೇಕಾ? ಇದನ್ನು ಯಾರಾದರೂ ಪ್ರಶ್ನಿಸಿದರೆ ದೇಶ ಬಿಟ್ಟು ಹೋಗಿ ಎನ್ನುತ್ತಾರೆ. ಯಾರು ದೇಶ ಬಿಟ್ಟು ಹೋಗಬೇಕಾದವರು?

ಆರ್‌ಎಸ್‌ಎಸ್ ಈ ದೇಶದ್ದಾ ? ಅವರೇನು ದ್ರಾವಿಡರಾ ? ದ್ರಾವಿಡರು ಈ ದೇಶದವರು. ಇದನ್ನೆಲ್ಲಾ ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ ? ಅದಕ್ಕೆ ಚರಿತ್ರೆಯನ್ನು ಕೆದಕಲು ಹೋಗಬಾರದು. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು” ಎಂದು ಹೇಳಿದ್ದರು. ಆರ್ ಎಸ್ ಎಸ್ ನವರಿಗೆ ನಿಜವಾದ ಚರಿತ್ರೆ ಮತ್ತು ಇತಿಹಾಸದ ಬಗ್ಗೆ ಬಹಳ ಭಯ ಇದೆ. ನಿಜವಾದ ಚರಿತ್ರೆ ದೇಶದ ದುಡಿಯುವ ವರ್ಗಗಳು, ಶ್ರಮಿಕರು ಮತ್ತು ದ್ರವೀಡರು ಅರಿತುಕೊಂಡರೆ ಏನಾಗಬಹುದು ಎನ್ನುವುದು ಅವರಿಗೆ ಗೊತ್ತಿದೆ. ಈ ಕಾರಣಕ್ಕೇ ಇತಿಹಾಸವನ್ನು ತಿರುಚುತ್ತಾರೆ. ಪಠ್ಯ ಪುಸ್ತಕಗಳ ಸಮಿತಿಗೆ ಚಕ್ರತೀರ್ಥನಂತವರನ್ನು ಹಾಕುವುದೇ ಈ ಉದ್ದೇಶಗಳಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Latest Videos
Follow Us:
Download App:
  • android
  • ios