ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಜಾಮೀನಿನ ಮೇಲಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಗೆ ಮೊದಲು ಒತ್ತಾಯಿಸಲಿ. ನಂತರ ಸಿದ್ದರಾಮಯ್ಯ ರಾಜೀನಾಮೆ ಕೇಳಲಿ ಎಂದು ತಿರುಗೇಟು ನೀಡಿದ ಸಚಿವ ಶಿವರಾಜ್ ತಂಗಡಗಿ

ಕಾರಟಗಿ(ಸೆ.29):  ರಾಜ್ಯ ಸರ್ಕಾರದ ಎಲ್ಲ ಸಚಿವರು ಸೇರಿದಂತೆ 136 ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗಿದ್ದೇವೆ. ಹೈಕಮಾಂಡ್ ಕೂಡ ಅವರ ಬೆನ್ನಿಗೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದು ಕಾನೂನು ಪ್ರಕ್ರಿಯೆ. ನಾವು ತನಿಖೆ ಎದುರಿಸುತ್ತೇವೆ ಎ೦ದು ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಹಿಂಜರಿಯಲ್ಲ. ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದರು. 

ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎನ್ನುವುದು ಬಿಜೆಪಿಯವರ ಭ್ರಮೆ: ಸಚಿವ ಶಿವರಾಜ ತಂಗಡಗಿ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಚುನಾವಣಾ ಬಾಂಡ್‌ನ 6 ಸಾವಿರ ಕೋಟಿ ಹಗರಣದಲ್ಲಿ ಕೋರ್ಟ್ ಎಫ್ ಐಆರ್ ಹಾಕಲು ಸೂಚಿಸಿದೆ. ಕೇಂದ್ರ ಬಿಜೆಪಿ ಸರ್ಕಾರ ಮೊದಲು ಹಣಕಾಸು ಸಚಿವರ ರಾಜೀನಾಮೆ ಪಡೆಯಲಿ. ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಜಾಮೀನಿನ ಮೇಲಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಗೆ ಮೊದಲು ಒತ್ತಾಯಿಸಲಿ. ನಂತರ ಸಿದ್ದರಾಮಯ್ಯ ರಾಜೀನಾಮೆ ಕೇಳಲಿ ಎಂದು ತಿರುಗೇಟು ನೀಡಿದರು. 

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ, ಅವರ ಪಾಲಿಗೆ ಸಿಂಹಸ್ವಪ್ನವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಮತ್ತು ಜೆಡಿಎಸ್‌ನ ಪ್ರಯತ್ನಕ್ಕೆ ರಾಜಕೀಯವಾಗಿಯೂ ಸೋಲಾಗುತ್ತದೆ ಎಂದು ಹೇಳಿದರು. 

ಸಿದ್ದರಾಮಯ್ಯನವರು ರಾಜ್ಯದ ಬಡವರಿಗಾಗಿ ಜಾರಿಗೆ ತಂದಿರುವ ಅನ್ನಭಾಗ್ಯ, ಶೂಭಾಗ್ಯ, ಪಶುಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಇತ್ತೀಚಿಗಿನ ಗ್ಯಾರಂಟಿ ಯೋಜನೆಗಳು ಸೇರಿದಂತೆ ಜನಪರ ಯೋಜನೆಗಳು ಜನಮಾನಸದಲ್ಲಿ ಬೇರೂರುತ್ತಿರುವುದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಅವರ ಕಳಂಕ ರಹಿತ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ದುರಾಲೋಚನೆ ಎಂದೂ ಈಡೇರದು ಎಂದು ತಿಳಿಸಿದರು.