ಯತ್ನಾಳ್‌ರ ಸವಾಲಿಗೆ ಉತ್ತರಿಸಿ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯತ್ನಾಳ್, ಶಿವಾನಂದ ಪಾಟೀಲ್ ಮತ್ತು ವಿಜಯಾನಂದ ಕಾಶಪ್ಪನವರ್ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷೇತರರಾಗಿ ಸ್ಪರ್ಧಿಸಲು ಸವಾಲು ಹಾಕಿದ್ದರು. ಪಾಟೀಲ್ ಮನೆತನದ ಹೆಸರು 'ಹಚಡದ' ಎಂದೂ ಟೀಕಿಸಿದ್ದರು.
ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಸವಾಲ್ ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಯುಟಿ ಖಾದರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿ, ನನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಬಸವನಗೌಡ ಪಾಟೀಲ್ ಯತ್ನಾಳ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಏನಿದೆ?
ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ಆರ್. ಪಾಟೀಲ (ಯತ್ನಾಳ್) ರವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ. ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ. ಶ್ರೀ ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ. ಎಂದಿದ್ದಾರೆ.
ಸಚಿವ ಶಿವಾನಂದ ಪಾಟೀಲ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಅವರ ಮನೆತನದ ಹೆಸರು ಪಾಟೀಲ ಅಲ್ಲ ಹಚಡದ ಅಂತ ಇತ್ತು. ನಿಮ್ಮಪ್ಪ ನೀವು ಕೂಡಿ ನಿಮ್ಮ ಅಡ್ಡ ಹೆಸರು (ಮನೆ ಹೆಸರು) ಬದಲಾಯಿಸಿಕೊಂಡವರು. ರಾಜಕಾರಣಕ್ಕಾಗಿ ಪಾಟೀಲ ಎಂದು ಮಾಡಿಕೊಂಡಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದರು. ನಗರ ಕ್ಷೇತ್ರದಿಂದ ಯತ್ನಾಳ ವಿರುದ್ಧ ಚುನಾವಣೆ ಸ್ಪರ್ಧೆ ಮಾಡುವ ಆಸೆ ಇದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಚಾಲೆಂಜ್ ಮಾಡಿದ್ದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ, ನೀವು ಸಾಬರ ಬೆನ್ನು ಹತ್ತಿದ್ದೀರಿ, ಹಿಂದೂ ಸನಾತನ ಧರ್ಮದ ವ್ಯಕ್ತಿಗೆ ಏನಾದರೂ ಆದಾಗ ನೀವು ಬರದಿದ್ದರೆ ನೀವು ಮುಸ್ಲಿಮರಿಗೆ ಹುಟ್ಟಿದಂಗೆ. ಶಿವಾನಂದ ಪಾಟೀಲ ಹಾಗೂ ಕಾಶಪ್ಪನವರ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿ, ನಾನು ಭಾಗವಾ ಧ್ವಜ ಹಿಡಿದುಕೊಂಡು ಪಕ್ಷೇತರನಾಗಿ ಎರಡೂ ಕಡೆ ಆಯ್ಕೆಯಾಗುತ್ತೇನೆ ಎಂದಿದ್ದರು.
ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಏನಾಗಿತ್ತು?
ಶಿವಾನಂದ ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರ ಒಂದು ವಾರದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಭಾಪತಿಯವರಿಂದ ಅಂಗೀಕಾರ ಮಾಡಿಕೊಂಡು ಬನ್ನಿ. ನೀವು ಪಕ್ಷೇತರರಾಗಿ ಬನ್ನಿ ನಾನು ಬರುವೆ, ಬಾಗೇವಾಡಿಯಲ್ಲೇ ಬಂದು ಮಣ್ಣು ಕೊಡುತ್ತೇನೆ. ರಾಜಿನಾಮೆ ನೀಡದಿದ್ದರೆ ಇವರು ಅಪ್ಪಗೆ ಹುಟ್ಟಿಲ್ಲ ಎಂದು ನಾನು ಹೇಳುತ್ತೇನೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಇವರೆಲ್ಲರಿಗೂ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇನೆ ಎಂದಿದ್ದರು.
ಇದರ ಜೊತೆಗೆ ಸಚಿವ ಶಿವಾನಂದ ಪಾಟೀಲ, ವಿಜಯಾನಂದ ಕಾಶಪ್ಪನವರ, ಯಶವಂತರಾಯಗೌಡ ಪಾಟೀಲ ಅಂತಹ ಹರಾಮ್‌ಕೋರರು ಪಾಕ್ ಪರ ಮಾತನಾಡುತ್ತಾರೆ. ನನಗೆ ಪಕ್ಷೇತರರಾಗಿ ಸ್ಪರ್ಧೆ ಮಾಡು ಎಂದು ಪಂಥಾಹ್ವಾನ ಕೊಟ್ಟಿರೋ ಶಿವಾನಂದ ಪಾಟೀಲ, ವಿಜಯಾನಂದ ಕಾಶಪ್ಪನವರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಸ್ಪರ್ಧೆ ಮಾಡಲಿ. ಶಿವಾನಂದ ಪಾಟೀಲ ವಿಜಯಪುರ ಬರ್ತೇನೆ ಎನ್ನುತ್ತಿದ್ದಾನೆ, ಬಾಗೇವಾಡಿಯಲ್ಲಿ ಏನೂ ಸಿಗದಂತಾಗಿದೆ. ಹಾಗಾಗಿ ವಿಜಯಪುರಕ್ಕೆ ಬರುತ್ತೇನೆ ಎನ್ನುತ್ತಿದ್ದಾನೆ. ವಿಜಯಪುರದಲ್ಲಿ ಹಿಂದೂ ಹಾಗೂ ಮುಸ್ಲಿಮರು ಇವನಿಗೆ ವೋಟ್ ಹಾಕಲ್ಲ. ಕಾಶಪ್ಪನವರ ಅಪ್ಪಗೆ ಹುಟ್ಟಿದರೆ ಬಾ, ನಿನ್ನ ಮುಖ ನೋಡಿದರೆ ನೀ ಯಾರಿಗೆ ಹುಟ್ಟಿದ್ದೀಯಾ ಎಂದು ಗೊತ್ತಾಗುತ್ತದೆ. ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದಿ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಯಾರ್‍ಯಾರ ಬಳಿ ಹಣ ತಂದಿದ್ದೀಯಾ ಗೊತ್ತು. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಬಳಿ ಎಷ್ಟು ಹಣ ತಂದಿದ್ದೀಯಾ ಗೊತ್ತು. ನೀನು ಮಹಾಭ್ರಷ್ಟ್ರ ಲೋಫರ್ ಎಂದು ಕಾಶಪ್ಪನವರ ವಿರುದ್ಧ ಹರಿಹಾಯ್ದಿದ್ದರು ಕೂಡ.


