ಕುಟುಂಬ ರಾಜಕಾರಣ: ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಸತೀಶ ಜಾರಕಿಹೊಳಿ
ಕುಟುಂಬ ರಾಜಕಾರಣದ ಬಗ್ಗೆ ಅವರೇ ಮಾತನಾಡುತ್ತಿದ್ದರು. ಈಗ ಅವರೇ ಮಾಡ್ತಾ ಇದ್ದಾರೆ, ಅವರನ್ನ ಕೇಳಬೇಕು. ಈಗ ಕುಟುಂಬ ರಾಜಕಾರಣಕ್ಕೆ ಬಿಜೆಪಿಯವರೇ ಬಲಿಯಾಗಿದ್ದಾರೆ: ಸಚಿವ ಸತೀಶ ಜಾರಕಿಹೊಳಿ
ಹುಬ್ಬಳ್ಳಿ(ಅ.25): ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪಠಾಣ್ ನಾಮಪತ್ರ ಸಲ್ಲಿಕೆಗೆ ಹೊರಟಿದ್ದೇವೆ. ಹಲವು ನಾಯಕರು ಈಗಾಗಲೇ ಬಂದಿದ್ದಾರೆ. ಚುನಾವಣೆ ಗೆಲುವಿಗಾಗಿ ಏನು ಮಾಡಬೇಕು ಅನ್ನೋದನ್ನ ಚರ್ಚೆ ಮಾಡುತ್ತೇವೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಖಾದ್ರಿ ಬಂಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ನನಗೆ ಆ ಬಗ್ಗೆ ಗೊತ್ತಿಲ್ಲ ಕಾದು ನೋಡೋಣ ಏನಾಗುತ್ತೆ. ಅವರಿಗೆ ಕೊಟ್ಟರೆ ಇವರು ಪ್ರತಿಭಟನೆ ಮಾಡ್ತಾರೆ ಇವರಿಗೆ ಕೊಟ್ರೆ ಅವರು ಪ್ರತಿಭಟನೆ ಮಾಡುತ್ತಾರೆ. ಇದೆಲ್ಲ ಸ್ವಾಭಾವಿಕ ಅಷ್ಟೇ, ಇದರ ಬಗ್ಗೆ ಪಕ್ಷ ನೋಡಿಕೊಳ್ಳುತ್ತೆ ಎಂದು ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಹಳ ಜನ ಆಕಾಂಕ್ಷಿಗಳಿದ್ದರು ಹೀಗಾಗಿ ಅಭ್ಯರ್ಥಿ ಘೋಷಣೆ ತಡವಾಗಿದೆ. ಪಕ್ಷ ಕೆಲಸ ಮಾಡಬೇಕು, ಅಭ್ಯರ್ಥಿಯದ್ದೇನೂ ಪ್ರಶ್ನೆ ಇಲ್ಲ ಎಂದಿದ್ದಾರೆ.
ಬಿಜೆಪಿಯ ಕುಟುಂಬ ರಾಜಕಾರಣದ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಕುಟುಂಬದ ರಾಜಕಾರಣದ ಬಗ್ಗೆ ಅವರೇ ಮಾತನಾಡುತ್ತಿದ್ದರು. ಈಗ ಅವರೇ ಮಾಡ್ತಾ ಇದ್ದಾರೆ, ಅವರನ್ನ ಕೇಳಬೇಕು. ಈಗ ಕುಟುಂಬ ರಾಜಕಾರಣಕ್ಕೆ ಬಿಜೆಪಿಯವರೇ ಬಲಿಯಾಗಿದ್ದಾರೆ. ಈಗ ಉಪಚುನಾವಣೆಗೆ ಸೀಮಿತವಾಗಿದ್ದೇವೆ. ಗೆಲ್ಲಲು ಶತ ಪ್ರಯತ್ನ ಮಾಡುತ್ತೇವೆ. ಮಂತ್ರಿಗಳು, ಶಾಸಕರು, ವರಿಷ್ಠರು ಬರ್ತಾರೆ. 25 ವರ್ಷಗಳಿಂದ ನಾವು ಈ ಕ್ಷೇತ್ರದಲ್ಲಿ ಗೆದ್ದೇ ಇಲ್ಲ. ಈ ಬಾರಿ ಅವಕಾಶ ಇದೆ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.