ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಅಂದು ಸ್ವಾಗತಿಸಿದ್ದ ಬಿಜೆಪಿ ನಾಯಕರು ಈಗ ವಿರೋಧ ಮಾಡುತ್ತಿರುವುದೇಕೆ? ಎಸ್‌ಐಟಿ ರಚನೆ ಮಾಡಿದಾಗಲೇ ವಿರೋಧಿಸಬೇಕಿತ್ತಲ್ಲವೇ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಬೆಂಗಳೂರು (ಆ.30): ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಅಂದು ಸ್ವಾಗತಿಸಿದ್ದ ಬಿಜೆಪಿ ನಾಯಕರು ಈಗ ವಿರೋಧ ಮಾಡುತ್ತಿರುವುದೇಕೆ? ಎಸ್‌ಐಟಿ ರಚನೆ ಮಾಡಿದಾಗಲೇ ವಿರೋಧಿಸಬೇಕಿತ್ತಲ್ಲವೇ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದಂತಹ ಕ್ಷೇತ್ರದ ಬಗ್ಗೆ ಯಾರೋ ಬಂದು ಆರೋಪ ಮಾಡಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ತನಿಖೆಗೆ ವಹಿಸಲಾಗಿತ್ತು. ಆಗ ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದ ಬಿಜೆಪಿಯವರು ಈಗ ರಾಜಕೀಯ ಮೈಲೇಜ್ ಪಡೆಯಲು ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಧವೆ ಎಂದು ದ್ರೌಪದಿ ಮುರ್ಮು ಕರೆಯಲಿಲ್ಲವೇ?: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ವಿವಾದ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಸಂತೋಷ್ ಲಾಡ್, ‘ಈ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆಯೇ ಭಿನ್ನಾಭಿಪ್ರಾಯ ಇದೆ. ಬಾನು ಮುಷ್ತಾಕ್ ಬಗ್ಗೆ ಮಾತನಾಡುವವರು ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಅವರು ಪರಿಶಿಷ್ಟರು ಅಂತಲೋ ಅಥವಾ ವಿಧವೆ ಎಂದೋ ಕರೆಯಲಿಲಲ್ಲವೇ? ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದಾಗ ಮುಸ್ಲಿಂ ಪದ ನೆನಪಾಗಲಿಲ್ಲವೇ? ಇದಕ್ಕೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಕುಳುವ ಸಮಾಜದ ಏಳಿಗೆಗಾಗಿ ಶ್ರಮಿಸುವೆ: ಹಿಂದುಳಿದಿರುವ ಕುಳುವ ಸಮಾಜದ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸುವೆ ಎಂದು ತಿಳಿಸಿದರು. ಸಮಾಜ ಸೂಚಿಸುವವರನ್ನು ಸ್ವಾಮೀಜಿಯನ್ನಾಗಿ ಮಾಡಲು ಸಹಕರಿಸುವೆ: ಕುಳುವ ಸಮಾಜದವರಿಗೆ ತಮ್ಮ ಸಮಾಜಕ್ಕೆ ಒಬ್ಬ ಸ್ವಾಮೀಜಿ ಇಲ್ಲವೆಂಬ ಕೊರಗಿದೆ. ಸಮಾಜದವರು ಒಪ್ಪಿ, ಸೂಚಿಸುವವರನ್ನು ಸಮಾಜದ ಸ್ವಾಮೀಜಿಯನ್ನಾಗಿ ಮಾಡಲಾಗುವುದು. ಸಮಾಜದ ಮಠಕ್ಕೆ ಬೇಕಾಗುವ ಜಾಗ ಖರೀದಿಗೆ ಸಹಕರಿಸಲಾಗುವುದು. ಪಟ್ಟಣದಲ್ಲಿ ಕುಳುವ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿ ಕೊಡಲಾಗುವುದು ಎಂದರು.
ಐಎಎಸ್, ಐಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಸಮಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ಕೊಡಿಸುವ ಮೂಲಕ ಕೆಲಸವನ್ನು ಕೊಡಿಸಲು ಪ್ರಯಾಣಿಕವಾಗಿ ಪ್ರಯತ್ನಿಸುವೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಕಿರಣಕುಮಾರ್ ಕೊತ್ತಗೆರೆ, ಕುಳುವ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಈ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಈ ಸಮಾಜದ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ.
ಪರಿಶಿಷ್ಟ ಜಾತಿ ಗುಂಪಿನಲ್ಲಿರುವ 101 ಜಾತಿಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕಿದೆ ಎಂದರು. ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿ, ಈ ನೆಲದ ಮೂಲ ನಿವಾಸಿಗಳಿಗೆ ಶಾಶ್ವತ ನೆಲೆ ಇಲ್ಲ. ಅಲೆಮಾರಿಗಳಿಗೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು 1952ರಲ್ಲಿ. ರಾಜ್ಯದಲ್ಲಿ ಅಲೆಮಾರಿಗಳಿಗೆ ಮೀಸಲಾತಿ ಅಗತ್ಯವಿದೆ. ಅವರಿಗೆ ಶಿಕ್ಷಣ, ಶಾಶ್ವತ ನೆಲೆ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅವರ ಏಳ್ಗೆಗಾಗಿ ಶಾಶ್ವತ ಅಲೆಮಾರಿ ಆಯೋಗ ಸ್ಥಾಪನೆಯಾಗಬೇಕಿದೆ ಎಂದು ನುಡಿದರು.
