ಅನಂತಕುಮಾರ್ ದೇಶದ್ರೋಹಿ ಕೂಡಲೇ ಸಿಎಂ ಕ್ಷಮೆ ಯಾಚಿಸಲಿ: ಸಚಿವ ಆರ್.ಬಿ.ತಿಮ್ಮಾಪುರ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನ ಬಳಸಿದ ಸಂಸದ ಅನಂತಕುಮಾರ್ ಹೆಗಡೆ ಕೂಡಲೇ ಸಿಎಂ ಕ್ಷಮೆ ಯಾಚಿಸಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪೂರ ಆಗ್ರಹಿಸಿದರು.
ಬಾಗಲಕೋಟೆ (ಜ.16): ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನ ಬಳಸಿದ ಸಂಸದ ಅನಂತಕುಮಾರ್ ಹೆಗಡೆ ಕೂಡಲೇ ಸಿಎಂ ಕ್ಷಮೆ ಯಾಚಿಸಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪೂರ ಆಗ್ರಹಿಸಿದರು. ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ. ಅದಕ್ಕೆ ಗೌರವ ಕೊಡ ಬೇಕಾಗಿರೋದು ಎಲ್ಲರ ಧರ್ಮ. ಅನಂತಕುಮಾರ್ ಹೆಗಡೆ ಯಾವುದೇ ಪಕ್ಷದಿಂದ ಗೆದ್ದಿರಬಹುದು. ಆ ರೀತಿಯ ಮಾತು ಯಾರಿಗೂ ಶೋಭೆಯಲ್ಲ. ಅವರು ಈ ಹಿಂದೆ ಡಾ.ಅಂಬೇಡ್ಕರ್ ಬಗ್ಗೆಯೂ ಅವಹೇಳನಕಾರಿ ಮಾತನಾಡಿದ್ದಾರೆ. ಹಿಂದು ಧರ್ಮಕ್ಕೆ ಅವಹೇಳನ ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುತ್ತಾರೆ ಸಂವಿಧಾನ ಇವನೊಬ್ಬನಿಗೆ ಬರೆದು ಕೊಟ್ಟಿದ್ದಾರಾ ಎಂದು ಟೀಕಿಸಿದರು.
ಬೇಕಾದರೆ ಮೋದಿ ಸಾಹೇಬರು ಹೇಳಲಿ ? ಆಗ ಜನ ಕೇಳುತ್ತಾರೆ. ಯಾವನೋ ಎಂಪಿ ಹೇಳ್ತಾನೆ ಎಂದು ಏನು ಮಾಡಲು ಆಗಲ್ಲ. ಅನಂತಕುಮಾರ್ ಗೆ ಟಿಕೆಟ್ ಸಿಗಲ್ಲ ಎಂಬ ಸೂಚನೆ ಸಿಕ್ಕಿದೆ. ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡಿದರೆ ಟಿಕೆಟ್ ಸಿಗುತ್ತದೆ ಎಂಬ ಆಸೆಗಾಗಿ ಮಾತನಾಡುತ್ತಾರೆ. ಟಿಕೆಟ್ ಗೋಸ್ಕರ, ಅಧಿಕಾರಕ್ಕಾಗಿ ದೇವರ ದುರ್ಬಳಕೆ, ಧರ್ಮ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರು ಎಂದಾದರೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ ? ಯುವಕರು ಉದ್ಯೋಗ ಕೊಡಿ ಎನ್ನುತ್ತಿದ್ದಾರೆ ಇವರು ಕೊಡುತ್ತಿಲ್ಲ. ನಾವು ಯುವನಿಧಿ ಮೂಲಕ ಸಹಾಯ ಮಾಡುತ್ತಿದ್ದೇವೆ.
ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ವೈರ್‌ಲೆಸ್ ಸಂಪರ್ಕ ಬಳಕೆ: ಡಿ.ಕೆ.ಶಿವಕುಮಾರ್
ಆದರೆ ಬಿಜೆಪಿಗರು ರಾಮ, ಶ್ರೀರಾಮ ಎನ್ನುತ್ತಿದ್ದಾರೆ. ದೇವರು ಎಲ್ಲರ ಆಸ್ತಿ. ಶ್ರೀರಾಮ ಬಿಜೆಪಿಯವ ಎನ್ನುವಂತೆ ಕ್ರಿಯೆಟ್ ಮಾಡಿದ್ದಾರೆಂದು ವಾಗ್ದಾಳಿ ನಡೆಸಿದರು. ಗಾಂಧಿ ಕುಟುಂಬಕ್ಕೆ ಕೃಷ್ಣಾಷ್ಠಮಿ ಶಾಪ ಇದೆ ಎಂಬ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿ ಕ್ರಿಯಿಸಿದ ತಿಮ್ಮಾಪೂರ, ಅನಂತಕುಮಾರ್ ದೇಶದ್ರೋಹಿ. ಹಾಗಾಗಿ ಆ ರೀತಿ ಮಾತನಾಡುತ್ತಾರೆ. ಧರ್ಮದ ಅವಹೇಳನ ಮಾಡು ಎಂದು ಹಿಂದು ಧರ್ಮದಲ್ಲಿ ಹೇಳಿದೆಯಾ? ಹಿಂದು ರಕ್ತ ಇನ್ನೊಂದು ರಕ್ತವನ್ನು ಘಾಸಿ ಮಾಡಬೇಕಂತಿದೆಯೇ ? ಎಲೆಕ್ಷನ್ ಬಂದ ಕೂಡಲೇ ಇವರಿಗೆಲ್ಲ ಹಿಂದುತ್ವ ನೆನಪಾಗುತ್ತದೆ. ಎಲೆಕ್ಷನ್ ಮುಗಿದ ಮೇಲೆ ಎಲ್ಲವೂ ಬಂದ್ ಆಗುತ್ತದೆ. ಇವೆಲ್ಲವೂ ಎಲೆಕ್ಷನ್ ಗಿಮಿಕ್‌ಗಳು ಎಂದು ಹೇಳಿದರು.